
ಬನ್ನಿ ದೇವಾಲಯವನ್ನು ಕಟ್ಟೋಣ!!!!!
ಎಲ್ಲೂ ಕಾಣದ ದೇವರು
ಕೊನೆಗೂ ಸಿಕ್ಕಿದ್ದಾರೆ ಇಂದು
ಬನ್ನಿ ದೇವಾಲಯವನ್ನು ಕಟ್ಟೋಣ!!!
ತರಬೇಡಿ ಮಣ್ಣು, ಇಟ್ಟಿಗೆ
ಉಪಕಾರಕ್ಕೆ ಬಾರದು ನಮಗೆ
ಬೇಡ ಕಬ್ಬಿಣ, ಮರಳು, ಜಲ್ಲಿ, ಕಲ್ಲು ನಿಮ್ಮೊಟ್ಟಿಗೆ
ಅದರಿಂದಾಗದು ಸುಂದರ ಆಲಯ ನಮ್ಮ ದೇವನಿಗೆ
ಆದರೆ ಬನ್ನಿ ದೇವಾಲಯವನ್ನು ಕಟ್ಟೋಣ!!!
ಸುಖ, ಸಂಪತ್ತಿನ ಹೊಳೆಯಲ್ಲಿ
ಮೈಮರೆತಿರುವ ನನ್ನ ಮಿತ್ರರೇ,
ಬಡತನದಲ್ಲಿ ನರಳಿ ನಜ್ಜಾಗಿರುವ
ಆ ದೇವನನ್ನು ಕಾಣೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ತಂಪಾದ ಹವಾ ನಿಯಂತ್ರಿತ ಕಟ್ಟಡಗಳಲ್ಲಿ
ಶ್ರಮಿಸುವ ನನ್ನ ಸೋದರರೇ
ಸುಡುವ ಬಿಸಿಲಲಿ ಬೆವರ ಸುರಿಸುವ
ಆ ದೇವನನು ನೋಡೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ಗಗನ ಚುಂಬಿಸುವ ಆಸ್ಪತ್ರೆಗಳ ಕಟ್ಟಿ
ನಿಶ್ಚಿಂತೆಯಿಂದಿರುವ ಬಂಧುಗಳೇ
ಹಾಸಿಗೆಯನ್ನೇ ಮನೆಮಾಡಿಕೊಂಡಿರುವ
ಆ ದೇವನನು ಸಂಧಿಸೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ರಂಗು ರಂಗಿನ ಮೋಜಿನ ಮತ್ತಿನಲ್ಲಿ
ಮೆರೆಯುತ್ತಿರುವ ನನ್ನ ಗೆಳೆಯರೇ
ಬಾಳ ಬೇಗೆಯಲಿ ಸೋತು ನಿರಾಶನಾಗಿರುವ
ಆ ದೇವನನು ಬೇಟಿ ಮಾಡೋಣ
ಆ ದೇವನಿಗೆ ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ವಿಧ ವಿಧದ ಡಿಗ್ರಿಗಳನ್ನೊತ್ತ
ನನ್ನ ಬುದ್ದಿವಂತ ಸ್ನೇಹಿತರೇ,
ಮನಸಿದ್ದರೂ ಕಲಿಯಲಾಗದ
ಆ ದೇವನನು ನೋಡೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ಬರ್ಗರ್ ಪೀಜ಼ಾಗಳನ್ನು
ಚಪ್ಪರಿಸುತ್ತಿರುವ ನನ್ನ ಸಹಪಾಠಿಗಳೇ
ಒಂದೊತ್ತಿನ ರೊಟ್ಟಿಗಾಗಿ ಹಸಿದಿರುವ
ಆ ದೇವನತ್ತಾ ಧಾವಿಸೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ಸಹಸ್ರ ಆಪ್‌ಗಳ ಒಡನಾಟದಲ್ಲಿ
ಮೊಬೈಲ್‌ನಲ್ಲಿ ಸೆರೆಯಾಗಿರುವವರೇ
ಪ್ರೀತಿಯ ಒಂದು ಮಾತಿಗಾಗಿ ಹಂಬಲಿಸುತ್ತಿರುವ
ಆ ದೇವನಲಿ ಮಾತನಾಡೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ಮುದ ನೀಡುವ ಮಾತುಗಳನ್ನು
ಬೋಧಿಸುವ ಮಹಾ ಬೋಧಕರೇ
ಮಮತೆ ಪ್ರೀತಿಯ ನೆರವಿಗೆ ಕಾದಿರುವ
ಆ ದೇವನನು ಮುಟ್ಟೋಣ
ಆ ದೇವನಿಗೊಂದು ಹೌದು…
ಬನ್ನಿ ದೇವಾಲಯವನ್ನು ಕಟ್ಟೋಣ!!!
ಮನ ಮನಗಳಲ್ಲಿ ಅಡಗಿರುವ ದೇವನಿಗೆ
ಆಲಯವೊಂದನ್ನು ಕಟ್ಟೋಣ
ಈ ದೇವಾಲಯಗಳಲ್ಲಿ
ನಸುನಗುವ ದೇವರೇ
ಇಟ್ಟಿಗೆ ಕಲ್ಲು, ಮಣ್ಣನು
ಕಟ್ಟಲು ತರುವರು
ನಾವು ಬಯಸುವ ದೇವಾಲಯಕೆ!
ಈ ದೇವರು ಇವೆಲ್ಲವನ್ನು ತರದೆ
ನೀನು ನಾನು ಕಟ್ಟುವ
ಕಲ್ಲು ಮಣ್ಣಿನ ಆಲಯ
ಎಷ್ಟು ದಿನ ನಿಲ್ಲುವುದು
ಪೆದ್ದರಿಚ್ಚ?