ನಗುವಿನ ಮರೆವು

ಏನು ಮಾಡಲು ಆಗದ ಮಗುವು
ನಗುವುದ ಕಂಡು ಬೆರಗಾದೆ
ಆ ಮಗುವಿನ ನಗುವಲಿ ಮೈ ಮರೆತು
ನಾನು ನಗಲು ಅನುವಾದೆ

ಯಾಕೆನೆ ಮರೆತೆ ನಗುವುದ ಬಾಳಲಿ
ಉತ್ತರ ಕಾಣದೆ ದಂಗಾದೆ
ಕಾಣದ ಭಯವು ಸೇರಿದೆ ಮನದಲಿ
ಮುಕ್ತಿ ಕಾಣದೆ ಕುರುಡಾದೆ

ಏನೇ ಬರಲಿ ಅನುದಿನ ನಾನು
ಕಿಲ ಕಿಲ ನಗುತಲೆ ಬಾಳುವೆನು
ದೇವನ ನೆರವಲಿ ಎನ್ನಯ ಭಯವನು
ಅಟ್ಟುತಾ ಹರ್ಷದಿ ನಲಿಯುವೆನು
– ಪೆದ್ದರಿಚ್ಚ

ಕಷ್ಟದ ಬೆಲೆ

ಕಷ್ಟವೇ ಇಲ್ಲದ ಜೀವನವಿದ್ದರೆ
ಹರ್ಷಕೆ ಬೆಲೆ ಇರದು
ದುಃಖವೇ ಅರಿಯದ ಬಾಳೊಂದಿದ್ದರೆ
ಬದುಕಲಿ ಸವಿ ಸಿಗದು

ಕಷ್ಟದ ಹಾದಿಯ ಬದಿಯಲಿ ಕಲಿತೆನು
ಬಾಳುವ ಹಾದಿಯನು
ಕಷ್ಟವು ಕಲಿಸಿದ ಪಾಠವ ಮರೆಯೆನು
ದೈರದಿ ಬಾಳುವೆನು

ಕಷ್ಟದ ಮಡಿಲಲಿ ದೇವನ ದೂರೆನು
ಚಿತ್ತಕೆ ಮಣಿಯುವೆನು
ಜೊತೆಯಿರೆ ಎನ್ನಯ ಪೊರೆಯುವ ದೇವನು
ಅನುದಿನ ಹರಸುವೆನು
– ಪೆದ್ದರಿಚ್ಚ

ಧನಿಯ ದನಿ

ದೂರದ ಗಿರಿಯಿಂ ಯಾರೋ ಎನ್ನನು
ಹೆಸರಿಡಿದೆನ್ನಯ ಕರೆದಿಹನು
ಕೇಳಿ ಅ ದನಿಯ ಹೃದಯದ ಮಿಡಿತವು
ಏರಿದೆ ತಡೆಯದೆ ಸೆಳೆತವನು

ಏರುವೆ ಮೆಲ್ಲನೆ ಬೇಗನೆ ಮೇಲನೆ
ಬಯಸಿದೆ ಕಾಣಲು ಕರೆದವನ
ಕೊಳಕು ನನ್ನೀ ಉಡುಪನು ತೊರೆದು
ಹೊರಡುವೆ ನೋಡಲು ಸೆಳೆದವನ

ಹೋಗಲಿ ಹೇಗೆ ತಿಳಿಯದು ಎನಗೆ
ದನಿ ಹೊರಡುವ ಆ ತುದಿ ಗಿರಿಗೆ
ಹೋಗದೆ ಇರಲು ಸಾಧ್ಯವೇ ನನಗೆ
ಸೆಳೆತವು ಏರಿದೆ ಆ ಸವಿ ದನಿಗೆ.

ಹುಡುಕಲು ಕಂಡೆನು ದಾರಿಯ ಮೂರು
ಸವೆದಿವೆ ಎರಡು ಕಿರಿದೊಂದು
ಸವಿದ ಆ ಸುಂದರ ದಾರಿಯ ಹಿಡಿದು
ಸಾಗಿದೆ ದನಿಯ ಜಾಡಿಡಿದು

ದಾರಿಯ ಸೊಭಗಿಗೆ ಯಾಕೋ ಸೋತೆನು
ಆಸೆಯ ಬಲೆಯಲಿ ಸಿಲುಕಿದೆನು
ತಲುಪಲು ಆಗದು ಬಯಸಿದ ಗಿರಿಯನು
ಮರ್ಮವ ಅರಿಯದೆ ನಲುಗಿಹೆನು

ದಾರಿಯ ಬದಲಿಸಿ ಹೊರಟೆನು ಮೆಲ್ಲನೆ
ಎರಡನೆ ಹಾದಿಯ ದಿಕ್ಕಿನಲಿ
ಮನದಲಿ ಕಲರವ ಹಾದಿಯ ಸೊಭಗಿಗೆ
ದಾರಿಯು ಸಾಗದು ಗಿರಿಯೆಡೆಗೆ

ಮೂರನೆ ದಾರಿಯೇ ಉಳಿದಿಹುದೆನಗೆ
ಸಾಗುವೆ ಬಿಡದೆ ಗಿರಿಯೆಡೆಗೆ
ದಾರಿಯ ಸುತ್ತಲು ಕತ್ತಲು ಕವಿದಿದೆ
ಸಾಗುವೆ ದಿಟದಿ ಗುರಿಯೆಡೆಗೆ

ಬೆಳಕನು ಕಾಣುವ ಹಂಬಲ ಎನ್ನಲಿ
ಸಾಗುವೆ ಹೆದರದೆ ಕತ್ತಲಲಿ
ಸೆಳೆತವ ಅರಿಯುತ ಕತ್ತಲ ಕುರುಡಲಿ
ಸಾಗುವೆ ದನಿಯ ನೆನಪಿನಲಿ

ಕತ್ತಲ ಕುರುಡಲಿ ಸಾಗುವ ಎನ್ನನು
ಹಿಡಿದರು ಯಾರೋ ತೋಳಿನಲಿ
ದನಿಯ ಧನಿಯ ಕರವಿರಬೇಕು
ತಲುಪಿದೆ ತುದಿಯ ಕ್ಷಣಗಳಲಿ

ಹೆಸರಿಡಿದೆನ್ನನು ಕರೆದ ಆ ದನಿಯು
ಎನ್ನಯ ರಚಿಸಿದ ದೇವನದು
ಕಷ್ಟದ ಕತ್ತಲ ಮೂರನೇ ದಾರಿಯು
ಎಮ್ಮನು ಗಿರಿಗೆ ಒಯ್ಯುವುದು
– ಪೆದ್ದರಿಚ್ಚ

ಅಂತರಂಗದ ನುಡಿ

ದೊಡ್ಡದೇ ಆದರೂ ದೇವಾಲಯವು
ಗರ್ಭ ಗುಡಿಯಲಿ ದೇವರ ವಾಸ
ವಿಶಾಲ ಆದರೂ ಸುಂದರ ಮನೆಯು
ಪೂಜೆಯ ಮನೆಯಲಿ ಭಕ್ತಿಯ ಭಾಸ

ಹಾಗೆಯೇ ದೇಹದ ಕಾಣದ ಗುಡಿಯಲಿ
ದೇವನು ಮೌನದಿ ಬಾಳುವನು
ದೇಹದ ಕಿವಿಯಲಿ ಕೇಳದ ನುಡಿಗಳ
ಅಂತರಂಗದಿ ಗುನುಗುವನು.

ಆತ್ಮದ ಗುಡಿಯಲಿ ದೇವನು ಉಲಿವನು
ಆತ್ಮ ಸಾಕ್ಷಿಯ ಪೋಷಣೆಗೆ
ಒಳಗಿನ ಧ್ವನಿಯನು ಕೇಳಿ ನೀ ಬಾಳು
ಬೆಳೆಯುವೆ ಗಗನದ ಎತ್ತರಕೆ

ಮರೆತರೂ ನೀನು ನಿನ್ನನು ಮರೆಯನು
ನಿನ್ನಯ ಜೊತೆಯಲಿ ಸಾಗುವನು
ಅರಿತು ನೀ ಬಾಳು ನೀನೇ ಶ್ರೇಷ್ಠನು
ನಿನ್ನಯ ಘನತೆಗೆ ಮಿತಿ ಇಡನು
– ಪೆದ್ದರಿಚ್ಚ

ನಗುತಾ ಬಾಳು

ಅಂದದ ಜಗದಲಿ ನಿರುತವು ನಗುತಲಿ
ಚಂದದಿ ಬಾಳೋ ಓ ಮನುಜ
ನೋವಲಿ ಕೊರಗುತ ಅನುದಿನ ಬಾಳಲಿ
ಕರಗುವೇ ಏಕೋ ಓ ತನುಜ

ಯಾವುದು ಜಗದಲಿ ಶಾಶ್ವತ ಉಳಿಯದು
ಅರಿತು ನೀ ಬಾಳು ಪ್ರತಿ ನಿಮಿಷ
ನಿನ್ನಯ ನೋವಿಗೆ ಮದ್ದಿದೇ ನಿನ್ನಲಿ
ನಗುತಲಿ ಬಾಳು ಇದೆ ಹರುಷ

ನೀಗದ ನೋವನು ನೀಡನು ದೇವನು
ಗೊಣಗದೆ ಬಾಳು ಸದಾ ನಗುತ
ನಗುತಲೇ ಎಲ್ಲವ ಪಡೆದರೆ ನೀನು
ಪಡೆಯುವೆ ಹರುಷವ ನೀ ಸತತ

ನೋವಿನ ನೆರಳು ನಿನ್ನಲಿ ಇರದಿರೇ
ನಗುತಲಿ ಬಾಳಲು ಏನಿದೆ ತೊಂದರೆ
ನೋವನು ಜಯಿಸಲು ಶಕ್ತಿಯು ಇದ್ದರೆ
ಹರುಷದಿ ಬಾಳಲು ಏನಿದೆ ಕೊರತೆ

ಆಗದೆ ಹೋದರೆ ನೋವನು ಜಯಿಸಲು
ಸುಮ್ಮನೆ ನಗುತಿರು ಜಯ ನಿನದು
ಬಾಳು ನೀ ಕೋರುತ ದೇವನ ನೆರವನು
ನಿನ್ನಯ ನಗುವಿಗೆ ಕೊನೆ ಇರದು.
-ಪೆದ್ದರಿಚ್ಚ

ಸಮಾಜ ಜೀವಿ

ಒಂಟಿ ಬಾಳಿನ ಜೀವವಲ್ಲ
ಮಾನವ ಸಮಾಜ ಜೀವಿ
ಮಂದೆ ತೊರೆದಿಹ ಕುರಿಯಲ್ಲ
ಒಡನಾಟಕೆ ಮಿಡಿವ ಪ್ರಾಣಿ
ಎಲ್ಲಿಹನವನು???

ತನ್ನೋಳಗೆ ಸೆರೆಯಾಗಿರುವ
ಸ್ವಾರ್ಥವ ಸಾಧಿಸ ಬಾಳುತಿಹ
ಇತರರ ನೋವಿನ ಅಜ್ನಾನಿ
ಮಾನವ ಸಮಾಜ ಜೀವಿ…

ತಲೆಗೆ ಕಾಲೊತ್ತಿ ದಬ್ಬುವ
ಕ್ಷಣದಿ ಮೇಲೇರಿ ಉಬ್ಬುವ
ಸರ್ವರ ಏಳಿಗೆ ಸಾರುವ ಜ್ನಾನಿ
ಮಾನವ ಸಮಾಜ ಜೀವಿ…
ಮೊಗವನು ನೋಡಿ ನಗದ
ಹೆಸರಲಿ ನೆರೆಯವನರಿಯದ
ದರ್ಪದಿ ತೇಲುವ ಯಾನಿ
ಮಾನವ ಸಮಾಜ ಜೀವಿ…

ಇತರರ ನೋವಲಿ ನಗುವ
ಬಿದ್ದರೆ ಎತ್ತದೆ ಅಣಕಿಸುವ
ಬಡವನ ರಚಿಸುವ ಶಿಲ್ಪಿ
ಮಾನವ ಸಮಾಜ ಜೀವಿ…

ಧರ್ಮದ ಚಿತ್ರವ ಬಿಡಿಸುವ
ಜಾತಿಯ ಬಣ್ಣವ ನೀಡುವ
ಬೇಧ ಭಾವದ ಸಾರಥಿ
ಮಾನವ ಸಮಾಜ ಜೀವಿ…

ಅಗತ್ಯವಿರದೆಯೂ ಗಳಿಸುವ
ಶಾಂತಿ ಪ್ರೀತಿಯ ನಟಿಸುವ
ಭಿಕ್ಷೆಯ ಹಾಕುವ ದಾನಿ
ಮಾನವ ಸಮಾಜ ಜೀವಿ…

ಕಳೆದು ಹೋಗಿರಬಹುದೇ
ಮಾನವನ ಮನಸ್ಸು…
ನೀಡಬಾರದೆ ಓ ದೇವನೆ
ಹುಡುಕಲು ಹುಮ್ಮಸ್ಸು
ಇದ್ದರೂ ನೂರಾರು ಜನರು
ಕೊರಗುತಿಹನೇಕೆ ಇವನು
ಒಡನಾಟಕೆ ಮಿಡಿಯುತಿರುವನು
ಏಕೆನೆ ಸಮಾಜ ಜೀವಿ ಅವನು…
– ಪೆದ್ದರಿಚ್ಚ

ಬರಗಾಲವೇ ಇರಲಿ

ಆಗಿನ ಆ ಭಯಂಕರ
ಹಣದ ಬರಗಾಲದಲಿ
ಭಕ್ತಿ ವಿಶ್ವಾಸದ
ಒಯಾಸಿಸ್ ಪುಟಿದೇಳುತ್ತಿತ್ತು
ಧಗೆಯ ಕಾವಿನ ದಾಹವನ್ನು
ಮತ್ತೇ ಮತ್ತೇ ತಣಿಸುತ್ತಿತ್ತು.
ಯಾವುದೂ ಶಾಶ್ವತವಲ್ಲ
ಬರಗಾಲವೇನೂ ಹೊರತಲ್ಲ…
ವಸಂತನ ಆಗಮನವಾಯಿತು
ಬರಡಿನ ಧೂಳಲ್ಲೂ ಚಿಗುರೊಡೆಯಿತು….
ಒಯಾಸಿಸ್ ಮರೆತುಹೋಯಿತು
ಅದೂ ಮರೆಯಾಯಿತು…
ಇಂದೋ…
ಬರಡು ಬಡತನದ ಮರಳಿಲ್ಲ
ಸಿರಿತನದ ಹಸುರಿಗೆ ಬರವಿಲ್ಲ
ಈ ಸುಗ್ಗಿಯ ಆನಂದದಲಿ
ಬರಗಾಲದಲಿ ದಾಹ ನೀಗಿದ
ಭಕ್ತಿ ವಿಶ್ವಾಸದ ಒರತೆಯ ಸುಳಿವಿಲ್ಲ…
ಬರಗಾಲ ಸುಗ್ಗಿಯಾದೊಡೆ
ಮತ್ತೊಂದರ ಬರಗಾಲ…

ನೀ ನನ್ನೊಂದಿಗಿರದ ಸುಗ್ಗಿಗಿಂತ
ನೀ ನನ್ನೊಂದಿಗಿರುವ ಬರಗಾಲವೇ
ನನಗಿರಲಿ ನನ ದೇವ!
-ಪೆದ್ದರಿಚ್ಚ