
ತೆರೆಯೋ

ಚೀಲ

ದೇವನ ಎದುರಲಿ ನಾನು
ಬೇಡಿದೆ ಅಂದು
ವರವ ನೀಡೆಂದು
ಹಿಡಿದು ಒಂದು ಚೀಲ
ಕೊಟ್ಟಷ್ಟನ್ನು ತುಂಬಲೆಂದು…
ದೇವನೇನು ಕಿವುಡನೇ
ಕೇಳದಿರಲು ಬೇಡಿಕೆ
ಆತನೇನು ಜಿಪುಣನೆ
ನೀಡದಿರಲು ಚೀಲಕೆ…
ಚೀಲ ಹಿಡಿದ ಎನ್ನನು
ಕೇಳೇ ಬಿಟ್ಟ ದೇವನು
ಕರವ ಎತ್ತಿ ತನ್ನಯ
ನೀಡಿ ಬಿಟ್ಟ ವರವನು…
ದೊಡ್ಡ ದೇವನಂತೆ
ವರವೂ ದೊಡ್ಡದು
ಆದರೆ ಒಂದಂತೆ
ಚೀಲವೋ ಚಿಕ್ಕದು…
ತುಂಬಿಕೊಳ್ಳಲಾರದು ಚೀಲವು
ಏನು ಮಾಡಬಲ್ಲನು ಆತನು
ಬೇರೊಂದಿಲ್ಲ ಚೀಲವು!
ಕಾಯುತಿಹನು ದೇವನು
ಎಳೆದು ಚೀಲವ ಬೆಳೆಸಲು
ವರವ ಒಳಗೆ ಹಿಡಿಸಲು
ಭಕ್ತನಾಸೆ ತುಂಬಲು…
ಚೀಲ ಬೇಗ ಬೆಳೆಯದು
ಸ್ವಲ್ಪ ಸಮಯ ಹಿಡಿವುದು
ಇದರ ಅರ್ಥ ಅರಿತರೆ
ಭಕ್ತ ಹೃದಯ ಬೆಳೆವುದು!
ಪೆದ್ದರಿಚ್ಚ
ಚಕ್ರ

ಬಾಳು ಒಂದು ಚಕ್ರ
ವಕ್ರವಾಗಿದ್ದರೂ
ಸಾಗುವುದು ಮುಂದೆ
ಗುರಿಯತ್ತಾ
ಮಾಡದೇ ಒಂದೂ ನಕ್ರ
ಚಕ್ರಕ್ಕೆಲ್ಲಿದೆ ಹಕ್ಕು
ಉರುಳಿವುದನ್ನು ಬಿಟ್ಟು
ದಿಕ್ಕು ನೀಡುವವನ ಕರಕ್ಕೆ
ತನ್ನ ಹಕ್ಕನ್ನು ಕೊಟ್ಟು…
ಬಾಳು ಒಂದು ಚಕ್ರ
ಚಿಂತೆ ಏಕೆ ವಕ್ರ
ಸಾಗಿಸುವವನು ಸಾಗಿಸುವನು
ಹಿಡಿದು ಒಂದು ಚಕ್ರ
ಸವೆಯುವವರೆಗೆ ಸಾಗುತಿರು
ಚಾಲಕನ ಮಾತಿಗೆ
ಕಿವಿಕೊಟ್ಟು
ಗುರಿ ಬೇಗ ತಲುಪುವೆ
ನಿನ್ನ ತವರು ನೆಲವ ಬಿಟ್ಟು!
-ಪೆದ್ದರಿಚ್ಚ
ಕೆಣಕು

ಕಲಿಯದ ಜ್ಞಾನ ಚಿಗುರಿದೆ ಮನದಲಿ
ನಿನ್ನಯ ಮೊಗವನು ನೋಡುತಲಿ
ಅಡಗಿದೆ ನಿನ್ನಯ ಅರಳುವ ನಗುವಲಿ
ನನ್ನಯ ಆಸೆಯ ಜೀವ ದನಿ
ಮೌನದ ಬಯಲಲಿ ಕುಳಿತರೆ ಸುಮ್ಮನೆ
ನಿನ್ನಯ ಮೊಗದ ದರ್ಶನವು
ಕರೆಯದೆ ಬಂದರೆ ಬಾಳಿಗೆ ಪದೇಪದೇ
ಮೌನವೂ ಕಾಡುವ ಕತ್ತಲೆಯು
ಅಡಗಿದೆ ಏನೋ ನಿನ್ನಯ ಸೊಭಗಲಿ
ಆಸೆಯ ಕೆಣಕುವ ನರ್ತನವು
ಕನಸಲಿ ಕಾಣುವ ನಿನ್ನಯ ವದನದಿ
ತಪ್ಪಿದೆ ಎನ್ನಯ ವರ್ತನೆಯು
-ಪೆದ್ದರಿಚ್ಚ
ಹುಡುಕುತಿರುವೆ

ಬಾಳಿನ ಕತ್ತಲೆಯ ಪಯಣದಿ
ಹುಡುಕುತಿರುವೆ
ಬೆಳಕಿನ ಕಿಡಿಯೊಂದನು
ಯಾಕೋ ಅರಿಯದಾದೆ
ತನ್ನೊಳಗಿರುವ
ಜ್ವಾಲೆಯ ಕಣವೊಂದನು!
ಹೊರಗಿನ ಬೆಳಕಿರದು ನಿರಂತರ
ಹಟಮಾಡುತಿಹೆ
ಶೇಖರಿಸಿಡಲು ಕಿಡಿಯೊಂದನು
ಯಾಕೋ ಅರಿಯದಾದೆ
ತಿಳಿಯಲು
ಸೂರ್ಯನೂ ಮರೆಯಾಗುವನು!
-ಪೆದ್ದರಿಚ್ಚ
ಬುದ್ದಿವಂತಿಕೆ
ಬುದ್ದಿವಂತಿಕೆ ಹರಿಯುತ್ತಿರಬೇಕು
ಹರಿವ ನೀರಿನಂತೆ
ಹಸನಾಗಿಸುತಾ ತೀರವನು
ಪ್ರತಿಯೊಂದು ಘಳಿಗೆ
ನಿಂತರೆ ನಾರುವುದು
ತನ್ನೊಳಗೆ ಮೊದಲು
ನಂತರ…
ಬಡಿವುದು ಎಲ್ಲರ ಮೂಗನು!
ಬುದ್ದಿವಂತಿಕೆ ಹರಿಯುತಿರಬೇಕು
ಶುದ್ದ ನೀರಿನಂತೆ
ಪರಿಶುದ್ದವಾಗುತಾ ಪ್ರತಿದಿನ
ಆ ಸಾಗರದೆಡೆಗೆ
ನಿಂತರೆ ಸಾಯುವುದು
ತನ್ನೊಳಗೆ ಮೊದಲು
ನಂತರ…
ಸುಟ್ಟುಬಿಡುವನು ರವಿಯು!
ಬುದ್ದಿವಂತಿಕೆ ಹರಿಯುತ್ತಿರಬೇಕು
ತಣಿಸುವ ನೀರಿನಂತೆ
ಹಸನಾಗಿಸಬೇಕು ಇಳೆಯನು
ತನ್ನತನವನು ತೊರೆದು
ನಿಂತರೆ ನಲಿವು ಮರೆಯಾಗುವುದು
ತನ್ನೊಳಗೆ ಮೊದಲು
ನಂತರ…
ತೊರೆವರೆಲ್ಲರು ಅದನು!
-ಪೆದ್ದರಿಚ್ಚ
ಪೆದ್ದಣ್ಣ
ನಿನ್ನದು ಎಂಬುದು ಯಾವುದು ಇಲ್ಲ
ಹಂಚುತಾ ಬಾಳು ಪೆದ್ದಣ್ಣ
ನಿನ್ನಯ ಎಲ್ಲವೂ ದೇವನ ಕೊಡುಗೆಯು
ನಲಿಯುತಾ ನೀಡೋ ಮಂಗಣ್ಣ
ಬೆತ್ತಲೆ ಬಂದೆ ಅಳುತಾ ಈ ಧರೆಗೆ
ತಿಳಿಯದೇ ನಿನಗೆ ಪೆಂಗಣ್ಣ
ಬೆತ್ತಲೆ ಮರಳುವೆ ಅಳಿಸುತಾ ಕೊನೆಗೆ
ಅರಿಯೋ ಬೇಗ ಕೊಂಗಣ್ಣ
-ಪೆದ್ದರಿಚ್ಚ
ಅಕ್ಷರ

ಅಕ್ಷರ ಕಲಿತರೆ ಸಾಕೆ ಗೆಳೆಯರೆ
ಅನ್ನವ ಬೆಳೆವರು ಯಾರಿಹರು
ದುಡಿಯುವ ರೈತರು ಸುಮ್ಮನೆ ಕುಳಿತರೆ
ತಿನ್ನುವ ಅನ್ನಕೆ ಯಾರಿಹರು
ಕರೆಯನು ಮಾಡಲು ನೇಗಿಲು ಸಾಗದು
ಬೆವರಿನ ಸ್ಪರ್ಶಕೆ ಕಾಯುತಿದೆ
ಯಂತ್ರದಿ ಅನ್ನವ ಬೆಳೆಯಲು ಆಗದು
ಸ್ನೇಹಕೆ ಭುವಿಯು ಕರೆಯುತಿದೆ
ಬೆವರನು ಸುರಿಸಲು ಆಗದೆ ಹೋದರೆ
ದುಡಿಯುವ ರೈತನ ದೂರದಿರು
ಜ್ಞಾನದ ಮಧವು ತಿಳಿಯದೆ ಹೋದರೆ
ಜನಪರ ರೈತನ ಜರಿಯದಿರು
ಅಕ್ಷರ ಕಲಿತ ದರ್ಪದಿ ಬಾಳುತಾ
ಅನ್ನದ ದಾನಿಯ ಮರೆಯದಿರು
ಅಜ್ಞಾನದಿ ಉರಿವ ಸ್ವಾರ್ಥದಿ ನಿನ್ನಯ
ರೈತನ ಉಸಿರ ತೆಗೆಯದಿರು
-ಪೆದ್ದರಿಚ್ಚ
ಆಸೆ

ಆಸೆ ಉರಿವ ಬೆಂಕಿಯಂತೆ,
ನಿಲ್ಲದು…
ಸೆಳೆಯುತಾ ಸಿಕ್ಕಿದೆಲ್ಲವನು,
ಉರಿವುದು…
ವಿಚಿತ್ರ ಆದರೂ ಸತ್ಯ
ಉರಿಯಲು ನೆರವಿತ್ತ
ಪ್ರತಿಯೊಂದನೂ…
ಸುಟ್ಟು ಬೂದಿ ಮಾಡುವುದು.
ಎದುರಾದರೆ ಕೆಲವೊಮ್ಮೆ ನೀರನು
ಸುಮ್ಮನಾಗಬಹುದು…
ಮನದಿ ಉರಿಯುತಿರುವ
ಆಸೆಯ ನೀಲಿ ಬೆಂಕಿಯನು
ಸಿಹಿ ನೀರಿನ ಸುರಿಮಳೆಯಿಂದ
ನಂದಿಸಿ ಕಾಪಾಡು ದೇವಾ
ನಾಶವಾಗುವ ಮೊದಲು ನಾನು!
-ಪೆದ್ದರಿಚ್ಚ