ಗುರಿ

ಗುರಿಯಿರದ ಬಾಳು ಗುರುವಿರದ ಬಾಳು
ಬೆಳಕರಿಯದ ಅನಾಥ ಗೋಳು
ನುಡಿ ಮಾತ್ರ ಸಾಕು ನಡೆಯೇಕೆ ಬೇಕು
ಎನಲು ಗುರು ಜೀವನ ಹಾಳು
ಗುರಿ ಮುಂದಿರಬೇಕು
ಗುರು ಜೊತೆಗಿರಬೇಕು
ಸ್ವರ್ಗಕ್ಕೆ ಇನ್ನೊಂದೇ ಮಾರು!
-ಪೆದ್ದರಿಚ್ಚ

ತೆರೆ

ಹುಟ್ಟೊಂದು ತೆರೆ ಸಾವೊಂದು ತೆರೆ
ಇದರ ನಡುವೆ ನಿನ್ನ ಜೀವನವ ತೆರೆ

ಬೆಳಕ ಮಾಸುವ ನಿನ್ನ ಮುಸುಕುವ
ಕಾಣದ ತೆರೆಗಳು ನಿನ್ನ ಕಣ್ಣ ಎದುರು
ತೆರೆಗಳಿರುವ ತನಕ ಸತ್ಯ ಕಾಣುವ ತವಕ
ಕಾಡುವ ಜೀವನ ಬರಿ ಎಡರು ತೊಡರು
ತೆರೆ ಆ ತೆರೆ ಕಣ್ಣೆದುರಿನ ಪೊರೆ
ಆಗಿಲ್ಲ ನಿನಗೆ ಬೇರಾವ ಸೆರೆ
ಹುಟ್ಟೊಂದು ತೆರೆ ಸಾವೊಂದು ತೆರೆ
ಇದರ ನಡುವೆ ನಿನ್ನ ಜೀವನವ ತೆರೆ
– ಪೆದ್ದರಿಚ್ಚ

ಉತ್ಸವ

ಎಮ್ಮ ಬಾಳೊಂದು ಉತ್ಸವ
ಸಂಭ್ರಮದ ಸಮ್ಮಿಲನ
ಸಹಸ್ರ ಭಾವನೆಗಳ ಮಿಶ್ರಣ
ಯಜಮಾನನಿಗೆ ಸತ್ಕಾರದ ಆನಂದ
ಅತಿಥಿಗೆ ಆತಿಥ್ಯದ ಪರಮಾನಂದ
ಆಮಂತ್ರಣ ಒಂದು
ಸಂಭ್ರಮ ಒಂದು
ನಲಿಯಲು ಕಾರಣ ನೂರೊಂದು!

ನಗಿಸಿ ನಲಿವರು, ನಕ್ಕು ನಲಿವರು
ಕುಣಿಸಿ ನಲಿವರು, ಕುಣಿದು ನಲಿವರು
ತೋರಿಸಿ ನಲಿವರು, ನೋಡಿ ನಲಿವರು
ಬಡಿಸಿ ಆನಂದಿಸುವರು
ತಿಂದು ಸಂತೃಪ್ತರಾಗುವರು
ಕುಡಿದು ಸಂತೋಷಿಸುವರು

ಸಂಭ್ರಮಕೆ ಕಾರಣ ಒಂದು
ರೀತಿ ಮಾತ್ರ ನೂರೊಂದು
ಬಾಳು ಹಾಗೇ ಪೆದ್ದರಿಚ್ಚ
ನೂರು ರೀತಿಯ ಸಂಭ್ರಮ
ಹೋಲಿಸಬೇಡ ಜೀವನ
ಕಂಡು ನಿನ್ನ ಪರನ
ನಿನಗೊಂದು ರೀತಿ
ಪರನಿಗೊಂದು ರೀತಿ
ಸಂಭ್ರಮಿಸು! ಸಂಭ್ರಮಿಸು
ಏಕೆನೆ ಬಾಳೊಂದು ಉತ್ಸವ

ಹೊಲ

ಈ ಜಗವೇ ಒಂದು ಸುಂದರ ಹೊಲ
ನಾನು ನೀನು ಕೂಲಿಕಾರರು
ಒಬ್ಬ ಉಳಲು
ಮತ್ತೊಬ್ಬ ನೆಡಲು
ಇನ್ನೊಬ್ಬ ಕೊಯ್ಯಲು!
ಇಲ್ಯಾರು ಶ್ರೇಷ್ಟನಲ್ಲ
ಒಬ್ಬ ಮತ್ತೊಬ್ಬನಿಗೆ ಕೀಳಲ್ಲ
ನಾವೆಲ್ಲಾ ಆತನ ಚಿತ್ತಾರದಲ್ಲಿ
ಗೀಚಿದ ಒಂದು ಸಾಲು

ನೀನು ಏನು ಮಾಡಿದೆ ಎನ್ನಬೇಡ
ನಾನೇನು ಮಾಡಿದೆ ಕೇಳಲು ಮರೆಯಬೇಡ
ಎಲ್ಲರಿಗೂ ನೀಡುವನು ದೇವನು
ದುಡಿಮೆಗೆ ಸರಿಯಾದ ಕೂಲಿಯನು
ಮೋಸ ಮಾಡನು ಅವನು
ನೋಡಿ ಸುರಿವ ಬೆವರನು!

ಚಿಂತೆ ಬೇಡ ಮನದಲಿ
ನೆನೆದು ಪರನ ಇಹದಲಿ
ದುಡಿದು ಈ ಹೊಲದಲಿ
ಧನ್ಯನಾಗು ಬಾಳಲಿ
-ಪೆದ್ದರಿಚ್ಚ

ಮಳೆನೀರು

ತೊಳೆಯುತಿದೆ ಮಳೆನೀರು
ಮಾನವನ ಸ್ವಾರ್ಥವನು
ನೆನೆಸುತಿದೆ ಹರಿವನೀರು
ಮರೆತಿರುವ ದೇವನನು

ಮಾನವನೇ ಅಬಲ ನೀನು
ಮುನಿಸಿಕೊಂಡ ಸೃಷ್ಟಿಯೆದುರು
ಮನ್ನಿಸಲು ಸಬಲ ನೀನು
ಕರಮುಗಿಯೇ ದೇವನೆದುರು

ನಿನ್ನಿಷ್ಟ ದೈವ ಜನರ ನಡುವೆ
ಕರಚಾಚಿ ಬಂದಿಹನು
ಮಳೇ ನೀರ ನಡುವೆ ನಿನಗೆ
ಪ್ರೀತಿ ಮಳೆಯ ಸುರಿಸಿಹನು

ಇನ್ನಾದರೂ ನಿನ ದೇವನಲಿ
ನಿನ್ನ ವಿಶ್ವಾಸವು ಬೆಳೆಯಲಿ
ಆತನಿರದೆ ನಿನ ಬಾಳಲಿ
ನೀನು ನೀರ ಕೊಳೆಯಲಿ
-ಪೆದ್ದ ರಿಚ್ಚ

ಮತಾಂತರ

ಮತಾಂತರ ಬೇಕು
ಬೇಕೆ ಬೇಕು…

ಹಿಂದು ಹಿಂದುವಾಗಬೇಕು
ಮುಸಲ್ಮಾನ ಮುಸಲ್ಮಾನನಾಗಬೇಕು
ಕೈಸ್ತ ಕ್ರೈಸ್ತನಾಗಬೇಕು
ಜೈನ ಜೈನನಾಗಬೇಕು
ಬೌದ್ದ ಬೌದ್ದನಾಗಬೇಕು
ಎಲ್ಲಕ್ಕೂ ಮಿಗಿಲಾಗಿ
ಮಾನವ ಮಾನವನಾಗಬೇಕು

ತನ್ನಲಿ ಮಾನವನನು
ಕಂಡವನಿಗಿಲ್ಲ ಒಂದು ಮತ
ಮತ್ತೊಬ್ಬನಲಿ
ಅವನನು ಕಂಡವನಿಗೆ
ಎಲ್ಲವೂ ಹಿತ

ಈ ಕಾಣದ
ಮಾನವನನ್ನು ಕಾಣಲು
ಕಂಡು ನಾವೂ ಮಾನವರಾಗಲೂ
ಮತಾಂತರಗೊಳ್ಳೋಣ
-ಪೆದ್ದರಿಚ್ಚ

ಜ್ಞಾನದ ಅರಮನೆ

ಹಣ್ಣನ್ನು ತೊಳೆದು ತಿನ್ನಬೇಕು ಎಂದು ಕಲಿತು
ಬಾಳೆಹಣ್ಣನ್ನು ತೊಳೆದು
ತಿನ್ನುವಂತಹ ಬುದ್ದಿವಂತರ
ಕಾಲದಲ್ಲಿ ಜೀವಿಸುವ ಭಾಗ್ಯ ನನ್ನದು
ಜೀವನದ ಎತ್ತರಕ್ಕೆ ಏರಬೇಕೆಂದು ತಿಳಿದು
ಬಾನೆತ್ತರದಲ್ಲಿ ವಿಮಾನಯಾನದಲಿ
ಸಂತುಷ್ಟನಾಗುವ ಭೋಗಿಗಳ
ನಾಡಿನಲಿ ಬಾಳುವ ಸೌಭಾಗ್ಯ ನನ್ನದು
ಹಸಿದವಗೆ ಅನ್ನ ನೀಡು – ಕಲಿತು ಇದನ್ನು
ಸಿಹಿ ನುಡಿಗಳಲ್ಲೇ ಹೊಟ್ಟೆ ತುಂಬಿಸುವ
ದಾನಿಗಳ ಸ್ವರ್ಗದಲ್ಲಿ ಬಾಳ್ವೆ ನನ್ನದು

ಪೆದ್ದರಿಚ್ಚ,
ಹಲವರು ಕಲಿವರು, ಕೆಲವರು ತಿಳಿವರು
ಜ್ಞಾನದ ಸುಧೆಯನು, ವಿರಳರು ಅರಿವರು
ಪರಮಾತ್ಮನ ನೆನೆದರೆ, ಅನುದಿನ ಗುಡಿಯಲಿ
ಜ್ಞಾನದ ಅರಮನೆ, ನಿನ್ನಯ ಮನದಲಿ

ಪ್ರವಾಹ

ಬಾಳ ಪ್ರವಾಹದಲಿ
ನನ್ನ ಮಗು ಕೊಚ್ಚಿಹೋಗಿದೆ!

ತಾಯ ಸೆರಗನ್ನು ಹಿಡಿದು ಸಾಗುತ್ತಿದ್ದ
ಎಲ್ಲರ ಕಂಡು ಕಿಲಕಿಲನೆ ನಗುತ್ತಿದ್ದ
ಸ್ವಚ್ಚಂದವಾಗಿ ಎಲ್ಲೆಲ್ಲೂ ನಲಿಯುತ್ತಿದ್ದ
ಸಿಹಿಸಿಹಿಯಾಗಿ ಎಲ್ಲರಲಿ ಮಾತನಾಡುತ್ತಿದ್ದ
ಯಾವ ಹಂಗಿಲ್ಲದೆ ಕೀಟಲೆ ಮಾಡುತ್ತಿದ್ದ
ಇರುವೆಡೆಯಲ್ಲಿ ಸ್ವರ್ಗವನ್ನು ರೂಪಿಸುತ್ತಿದ್ದ
ನನ್ನ ಆ ಮಗು ಕೊಚ್ಚಿ ಹೋಗಿದೆ!

ಸೆರಗಿಲ್ಲ ಇಂದು ಆಕೆ ಆಶ್ರಮದ ಮಹಿಳೆ
ನಗುವೆಲ್ಲಿಂದ ಊದುವಾಗ ದರ್ಪದ ಕಹಳೆ
ಸ್ವಚ್ಚಂದವಾಗಿರಲು ತಡೆವ ಸ್ವಾರ್ಥದ ಹೊಳೆ
ಮಾತಲಿ ತುಂಬಿರಲು ಅಸತ್ಯ, ಸಂದೇಹದ ಕೊಳೆ
ತೊಟ್ಟಿರಲು ಸಮಾಜ, ಜಾತಿ, ಧರ್ಮದ ಬಳೆ
ಮರೀಚಿಕೆ ಆಗಿದೆ ಎನ್ನಲಿ ಸ್ವರ್ಗಸುಖದ ಮಳೆ

ಪ್ರವಾಹದ ಕಲುಷಿತ ನೀರು ನಿಂತು
ಅದರಲಿ ನಿನ್ನ ಪ್ರತಿಬಿಂಬವ ಕಾಣುವವರೆಗೆ
ನಿನ್ನ ಮಗು ನಿನಗೆ ಕಾಣಸಿಗದು ಪೆದ್ದರಿಚ್ಚ!

ನೋಡು

ನೋಡುವಾಗ ಸರಿಯಾಗಿ ನೋಡು
ಮನಸ್ಸು ಮಾಡಿ ಮತ್ತೊಮ್ಮೆ ನೋಡು
ಸರಿಯಾಗಿ ಕಂಡದ್ದು ತಪ್ಪಾಗಿರಬಹುದು
ತಪ್ಪಾಗಿ ಕಂಡದ್ದು ಸರಿಯಾಗಿರಬಹುದು
ಕಪ್ಪಾಗಿ ವ್ಯಕ್ತವಾದುದು ಬಿಳಿಯಾಗಿರಬಹುದು
ಬಿಳಿಯಾಗಿ ಮಿನುಗಿದ್ದು ಕಪ್ಪಾಗಿರಬಹುದು
ದ್ವೇಷವಾಗಿ ತೋಚಿದ್ದು ಪ್ರೀತಿಯಾಗಿರಬಹುದು
ಪೀತಿಯಾಗಿ ತೋರಿದ್ದು ದ್ವೇಷವಾಗಿರಬಹುದು
ಕಾರುವ ಬೆಂಕಿಯಾಗಿ ಕಂಡದ್ದು
ಕೋಮಲ ಹೂವಾಗಿರಬಹುದು
ಕೋಮಲ ಹೂವಾಗಿ ಕಂಡದ್ದು
ಸುಡುವ ಬೆಂಕಿಯಾಗಿರಬಹುದು

ಓ ಪೆದ್ದರಿಚ್ಚ,
ಸರಿ ತಪ್ಪು ಇರುವುದು ನಿನ ಕಣ್ಣಲಿ
ಒಳಿತು ಕೆಡುಕು ಇರುವುದು ನಿನ ಮನದಲಿ
ನೋಡುವಾಗ ಸರಿಯಾಗಿ ನೋಡು
ಮನಸ್ಸು ಮಾಡಿ ಮತ್ತೊಮ್ಮೆ ನೋಡು.

ಕ್ಷಮೆ

ತಪ್ಪು ಮಾಡದವನು ಮಾನವನಲ್ಲ
ತಿದ್ದಿ ನಡೆಯದಿರೆ
ಜೀವನವಿಲ್ಲ
ಕ್ಷಮೆ ಬೇಡುವವನು ಚಿಕ್ಕವನಲ್ಲ
ಕ್ಷಮೆ ನೀಡುವವನು
ದೊಡ್ಡವನಲ್ಲ

ದ್ವೇಷದ ಅಂಧಕಾರದಲಿ
ಪ್ರೇಮದ ದೀಪ ಬೆಳಗಲಿ
ಪ್ರತಿಕಾರದ ಮರಳುಗಾಡಿನಲ್ಲಿ
ಕ್ಷಮೆಯ ಸಿಂಚನವಾಗಲಿ

ಸುಡುವ ಹಗೆಯಲಿ
ದಾನವನಾಗುವ ಬದಲು
ಕ್ಷಮೆಯ ಹೊಗೆಯಲಿ
ಮಾನವನಾಗು ಪೆದ್ದರಿಚ್ಚ!