ಸೆರೆಯಾಳು

ಸೆರೆಯಾಗಿಲ್ಲ
ತೀರದ ನಡುವೆ ನದಿ
ಸಾಗರದ ನಡುವೆ ಭುವಿ
ರೆಕ್ಕೆಗಳ ನಡುವೆ ಹಕ್ಕಿ

ಸೆರೆಯಲ್ಲ
ಗಾಳಿ ದಿಕ್ಕಿಗೆ, ಭುವಿ ರವಿಗೆ
ಸಸಿ ಬೇರಿಗೆ, ಎಲೆ ರೆಂಬೆಗೆ
ಉದರದಲಿ ಮಗು ಒಕ್ಕಳ ಬಳ್ಳಿಗೆ

ಅದು ಸೆರೆಯಲ್ಲ ಜೀವಿಸುವ ರೀತಿ ಸರಿ
ಆತನ ಮಹಿಮೆಯಲ್ಲಿ ಬೆರೆಯುವ ಪರಿ

ಸೆರೆಯಾಳು ನೀನು
ಮಾಡಿದರೆ ಮಾಡಬಯಸಿದನು
ಬಿಟ್ಟು ಮಾಡಬೇಕಾದುದನು!
ಸೆರೆಯಾಳು ನೀನು
ಬಾಳಿದರೆ ಕೇಳಿ ಹೊರದನಿಯನು
ಬಿಟ್ಟು ನಿನ್ನ ಒಳದನಿಯನು!

ಅರಿಯದಿರೆ ನಿನ್ನ ಬಾಳದೆಸೆಯನು
ಮರೆತು ನಿನ್ನ ಬಾಳ ದಿಸೆಯನು
ನಿನ್ನೊಳಗೆ ನೀನೇ ಸೆರೆಯಾಳು
ಓ, ಪೆದ್ದರಿಚ್ಚ!

ದೊಡ್ಡವರು

ದೊಡ್ಡವರಾರು?

ಗಗನಚುಂಬಿ ಮನೆಯಲ್ಲಿರುವವರು?
ಅವರು ನಡೆದಾಡಲು ಹೆದರುವುದನ್ನು ಕಂಡೆ

ಕೈ ತುಂಬಾ ಹಣವಿರುವವರು?
ಅವರು ಆಸ್ಪತ್ರೆಯಲ್ಲಿ ನರಳುವುದನು ಕಂಡೆ

ಎಲ್ಲವನು ಅರಿತ ವಿದ್ವಾಂಸರು, ಮೇಧಾವಿಗಳು?
ಅವರು ಬಾಳ ದಾರಿಯಲಿ ಹೆಣಗುವುದನ್ನು ಕಂಡೆ

ಹಿಂದೆ ಮುಂದೆ ಜನರಿರುವವರು?
ವಾಹನದಲಿ ಅವರ ಹೆಣಸಾಗಿಸುವುದನು ಕಂಡೆ

ಕ್ಲಬ್, ಪಬ್ಬುಗಳಲಿ ಕುಣಿದು ನಲಿಯುವವರು?
ಅವರು ಖಿನ್ನರಾಗಿ ಬೆವರುವುದನ್ನು ಕಂಡೆ

ಪೆದ್ದರಿಚ್ಚಾ,
ದೊಡ್ಡವರು ಅವರು
ಮಗುವಿನಂತಹ ಮನಸ್ಸಿರುವವರು
ದೊಡ್ಡವರು ಅವರು
ಮನಸ್ಸಿನಲ್ಲಿ ದೇವರನ್ನು ಕಾಣುವವರು

ಪ್ರವಾಸ

ಹೋಗೋಣ ಪ್ರವಾಸಕೆ
ಬರುವಿರೇನು ಜೊತೆಗೆ
ಕ್ಷಮಿಸಿ!!!ನಾನೊಬ್ಬ ಪೆದ್ದ ರಿಚ್ಚ
ಕರೆದುಕೊಂಡು ಹೋಗಲಾರೆ ನನ್ನೊಳಗೆ
ಹೋಗಿ ಬರುವೆ ಮೊದಲು ಅಲ್ಲಿಗೆ
ಬಂದು ಹೇಳುವೆ ನಿಮಗೆ
ನೀವೂ ಹೋಗಿರಂತೆ ಅಲ್ಲಿಗೆ
ನಿಮ್ಮ ಅಂತರಂಗದ ಬಳಿಗೆ!

ಚಪ್ಪಲಿ

ಧೂಳು ತಪ್ಪಲಿ ಎಂದು
ದೇವಾಲಯದ ಹೊರಗೆ ಚಪ್ಪಲಿ
ಸರಿ! ಆದರೆ
ಮನದಲ್ಲಿನ ಧೂಳಿಗೆ
ಏನನ್ನೊರಗಿಡಲಿ
ಆ ಧೂಳಿರದ ದೇವರೆಡೆ
ಕರಗಳನ್ನೇಗೆ ಎತ್ತಲಿ
ಪೆದ್ದರಿಚ್ಚಾ?

ತಾರತಮ್ಯ

ನಾವು ಉಸಿರಾಡುವ ಗಾಳಿ
ವಜ್ರದ ಮೂಗುನತ್ತನ್ನು
ಧರಿಸಿದ ಮೂಗನ್ನು ಹುಡುಕದು
ನಾವು ಕುಡಿಯುವ ನೀರು
ತುಟಿಗೆ ಹಚ್ಚಿದ ಬಣ್ಣವನ್ನು ನೋಡದು
ಸೂರ್ಯನಿಂದೊರಡುವ
ಉಜ್ವಲ ಕಿರಣಗಳು
ಮೈಯ ಬಣ್ಣವನ್ನು ಪರಗಣಿಸದು
ನಿಸರ್ಗದಲ್ಲಿ ಯಾವುವು
ತಾರತಮ್ಯ ಮಾಡದಿರುವಾಗ
ನನ್ನ ಕಣ್ಣಿಗೆ ಆ ಶಕ್ತಿ ಎಲ್ಲಿಂದ ಬಂತು?

ಸಂಗಾತಿ

ಕತ್ತಲೆಯಲ್ಲಿ ನಡೆಯುವವನಿಗೆ
ಬೆಳಕು ಬೇಕು
ಅದು ಅವನೊಳಗಿನಿಂದ ಮಿನುಗಬೇಕು

ಜೀವನದಲಿ ಬೇಸರವಾದಾಗ
ಕೇಳಲು ಸಂಗೀತಬೇಕು
ಅದು ಅವನೊಳಗೆ ಉಲಿಯಬೇಕು

ಕಷ್ಟ ಸಂಕಟಗಳ ಅಲೆ ಅಪ್ಪಳಿಸಿದಾಗ
ಎದ್ದೇಳಲು ಶಕ್ತಿ ಬೇಕು
ಅದು ಅವನೊಳಗಿಂದ ಪುಟಿಯಬೇಕು

ಮುಂದೆ ಸಾಗಲು ಬಾಳಲಿ
ಸಂಗಾತಿ ಬೇಕು
ಅದು ಅವನೊಳಗೆ ಲಭಿಸಬೇಕು

ತನ್ನೊರಗೆ ಸೌಂದರ್ಯ ಕಾಣಲು
ಸುಂದರ ಕಣ್ಣು ಬೇಕು
ಅದು ಮನದ ಮೊಗದಲ್ಲಿರಬೇಕು

ಇದನ್ನರಿಯಲು ಪೆದ್ದರಿಚ್ಚ
ನಿನ್ನೊಳಗೆ ವಿಶ್ವಾಸವಿರಬೇಕು
ಅದು ಸಾಸಿವೆ ಕಾಳಿನಷ್ಟಿದ್ದರೂ ಸಾಕು!

ತ್ಯಾಗ

ಸೋಲಿಲ್ಲದೆ ಗೆಲುವಿಲ್ಲ
ನೋವಿಲ್ಲದೆ ನಲಿವಿಲ್ಲ
ಕತ್ತಲೆಯಿಲ್ಲದೆ ಬೆಳಕಿಲ್ಲ
ಕಹಿಯಿಲ್ಲದೆ ಸಿಹಿಯಿಲ್ಲ

ಕಳೆದುಕೊಳ್ಳದೆ ಗಳಿಸಲಾಗುವುದಿಲ್ಲ
ಪ್ರೀತಿಯಿಲ್ಲದೆ ಕಳೆದುಕೊಳ್ಳಲಾಗುವುದಿಲ್ಲ
ತ್ಯಾಗಕ್ಕೆ ಪ್ರೀತಿಯೇ ಸೆಲೆ
ಪ್ರೀತಿಗೆ ತ್ಯಾಗದಿಂದಲೇ ಬೆಲೆ

ಕಳೆದುಕೊಳ್ಳದೆ ಗಳಿಸಿದರೆ
ನಿನ್ನನ್ನೇ ಕಳೆದುಕೊಳ್ಳುವೆ
ಪೆದ್ದರಿಚ್ಚ!

ಕುರುಡರ ದೇವರು

ಯಾರು ದೇವರು?
ಪ್ರಕೃತಿಯಲಿ ಕುಳಿತು
ಬೆಳೆಸುವವನು ಅವನು
ಬೆಳೆಯುವವನು ನಾನು
ಅಂಗಡಿಯಲ್ಲಿ ಕುಳಿತು
ಮಾರುವವರು ಅವನು
ಕೊಳ್ಳುವವನು ನಾನು
ನ್ಯಾಯಾಲಯದಲ್ಲಿ ಕುಳಿತು
ತೀರ್ಪು ನೀಡುವವನು ಅವನು
ನ್ಯಾಯ ಬೇಡುವವನು ನಾನು
ಶಾಲೆಯಲ್ಲಿ ಕುಳಿತು
ಕಲಿಸುವವನು ಅವನು
ಕಲಿಯುವವನು ನಾನು
ಅರಮನೆಯಲ್ಲಿ ಕುಳಿತು
ಆಳುವವನು ಅವನು
ಆತನ ಆಳು ನಾನು
ರಂಗಮಂಚದಲ್ಲಿ ಕುಳಿತು
ಆಡಿಸುವವನು ಅವನು
ಆಡುವವನು ನಾನು
ಸಂಗೀತ ಕಛೇರಿಯಲಿ ಕುಳಿತು
ನುಡಿಸುವವನು ಅವನು
ಉಲಿಯುವವನು ನಾನು
ಮೇಲೆತ್ತರದಲ್ಲಿ ಕುಳಿತು
ಜಾದೂಗಾರ ಅವನು
ಒಂದು ಜಾದೂ ನಾನು

ಏನೇ ಆಗಲಿ
ನನ್ನ ಮನದ ತಕ್ಕಡಿಯಲಿ
ಅವನ ಅಳೆದು ನೋಡುವ ತನಕ
ಆತ ಕುರುಡರು ಕಂಡ
ಆ ಆನೆಯಂತೆ ಪೆದ್ದರಿಚ್ಚ!

ಪ್ರಾಣಿ

ಆಗ
ಊರಿಗೊಂದೋ, ನಾಡಿಗೊಂದೋ
ಸುಂದರ ಜೀವಿಗಳ ಮೃಗಾಲಯ
ಈಗ ಎಲ್ಲೆಲ್ಲೂ
ವಿಚಿತ್ರ ಪ್ರಾಣಿಗಳ ಸಂಗ್ರಹಾಲಯ
ನಮ್ಮೊಳಗಿರುವ ಪ್ರಾಣಿ
ಎದ್ದಿರುವುದರಿಂದಲೇ ಏನೋ
ಸ್ನೇಹ ಬಯಸಿ
ಕಾಡಿನ ಪ್ರಾಣಿಗಳ ನಾಡ ಪ್ರವಾಸ
ನಮ್ಮೊಳಗಿನ ಪ್ರಾಣಿಗಳ
ಸಂಖ್ಯೆ ಬೆಳೆದಿದ್ದರಿಂದಲೋ ಏನೋ
ನೀಡಲಾಗುತ್ತಿದೆ
ಬೀದಿನಾಯಿಗಳಿಗೆ ವನವಾಸ
ನಿನ್ನೊಳಗಿನ ಪ್ರಾಣಿಯಂತಾಗಿ
ಪ್ರಾಣಿಗಳಲ್ಲೇ ನಿಜ ಪ್ರೇಮವನ್ನು
ಹುಡುಕುವ ಎಂತಾ
ವಿಚಿತ್ರ ಪ್ರಪಂಚ ನಿನದು
ಪೆದ್ದರಿಚ್ಚ!