ಇಂದ್ರಿಯಗಳು

ಪೆದ್ದರಿಚ್ಚ,
ಬಳಸು ಪಂಚ ಇಂದ್ರಿಯಗಳನು
ಪ್ರೀತಿಸಲು ಪರರನು
ಆಗ ಕಾಣುವೆ ಎಲ್ಲರಲಿ
ದೇವರ ದೂತನನು
ಬಳಸಿದರೆ ಅವುಗಳನು
ನೋಯಿಸಲು ಇತರರನು
ಕಾಣುವೆ ಅವರಲಿ
ನಿನ್ನ ಕಾಡುವ
ಭೂತವನು!

ಅಂತರ

ಹಿಂದೊಂದು ಮುಂದೊಂದು
ಒಳಗೊಂದು ಹೊರಗೊಂದು
ಆಗೊಂದು ಈಗೊಂದು
ಬಣ್ಣ ಕಾಣದ ವ್ಯಕ್ತಿತ್ವ

ಕಾಣುವುದರ ಹಾಗೂ
ಇರುವುದರ ನಡುವೆ
ಒಂದು ಅಂತರ
ಇರುವಂತೆ ಕಾಣಲು
ಕಾಣುವಂತೆ ಇರಲು
ಒಳಗೊಳಗೆ ಒಂತರ
ಅಂತರಂಗದಲ್ಲಿನ
ದೈವ ಸ್ವರೂಪದಲಿ
ನಿನ ರೂಪ ಕಂಡ ನಂತರ
ಇರದಾವ ಅಂತರ
ಇದುವೇ ರೂಪಾಂತರ!
-ಪೆದ್ದ ರಿಚ್ಚ

ಆದಿಮಾನವ

ಪೆದ್ದರಿಚ್ಚನೊಳಗೊಬ್ಬ
ಯಾರೂ ಕಾಣದ ಆದಿಮಾನವ
ಅವನ ಅಜ್ಞಾನವೇ ಸುಜ್ಞಾನ
ಅವನ ಹಳತೇ ಹೊಸತು
ಅವನ ಅಂಧಕಾರವೇ ಬೆಳಕು
ಹೊಸತನ್ನು ಅರಿಯದವ
ಬೆಳಕನ್ನು ಕಾಣದವ
ನನಗೆಲ್ಲಾ ತಿಳಿದಿದೆ
ಎಂದು ಬಾಳುವ
ಸೆರೆಮನೆಯಲ್ಲಿನ ಕೈದಿ.
ಬಾವಿಯೊಳಗಿನ ಕಪ್ಪೆಯೇ ವಾಸಿ
ಅದರ ವಟಗುಟ್ಟುವಿಕೆಯಾದರೂ
ಕೇಳುತ್ತದೆ ಹೊರಗಿನ ಜನಕೆ
ಅವನೊಳಗಿರುವ ಬಾವಿಯಲ್ಲಿನ
ಆ ಆದಿ ಮಾನವನ ದನಿ
ಅವನಿಗೇ ಕೇಳಿಸುವಿದಿಲ್ಲ.

ಬಾಳಿನ ಈಜು

ಬಾಳೆಂಬ ಈಜು
ಕಣ್ಣಿಗೆ ಕಾಣದ ಗುರಿ
ಎಲ್ಲೆ ಇಲ್ಲದ ಸಾಗರ
ದಡ ಸೇರುವ ಛಲ…
ಮರುಕ ತೋರದ ಅಲೆ
ಎದೆ ಹಿಸುಕುವ ಅವುಗಳ ಅಬ್ಬರ
ಶಕ್ತಿ ಸಾಲದ ಮುರುಕು ದೇಹ…
ಆದರೂ ಬತ್ತದ ಭರವಸೆಯ ದೋಣಿ
ಆ ದೋಣಿಗೆ ಭಕ್ತಿಯ ಹುಟ್ಟುಗೋಲು…
ದಡ ಸೇರದೆ ಇರಲಾಗದು
ನೀರಲಿ ನೆಲೆಯೂರಲಾಗದು
ಕಾಣದ ದಾರಿಯಲಿ
ಸಾಗಲೇ ಬೇಕು
ಸಾಗುತಲೇ ಇರಬೇಕು
ಸಾಗರದಲಿ ಬಿಟ್ಟಾತನಲ್ಲಿಗೆ
ಸಾಗರದಲಿ ಸಾಗಬಹುದೆಂಬ
ಪುಟ್ಟ ಆಸೆಯೇ ಛಲಕ್ಕೆ ಆಸರೆ
ಸಾಗರದ ಬಯಲಿನಲಿ
ತೇಲುವ ಈ ಚಿಕ್ಕ ಜೀವದಲಿ
ಪುಟ್ಟ ಆಸೆಯ ನೀಡಿ
ಭರವಸೆ ಕೆರಳಿಸುವ ದೇವನೆ
ನಿನಗಿದೋ ವಂದನೆ!
– ಪೆದ್ದರಿಚ್ಚ

ಆಸೆಯ ಬಲೆ

ಆಸೆಗೆ ದಾಸನಾದರೆ
ಮೋಸ ಹೋಗುವೆ
ಆಸೆಗೆ ಮರುಳಾದರೆ
ಪುಡಿ ಮರಳಾಗುವೆ

ಆಸೆಯ ಒಲೆಯಲ್ಲಿ ಬೇಯುವ ನಿನ್ನನು
ದುಃಖದ ಕಣ್ಣೀರು ತಣಿಸದು
ಆಸೆಯ ಒಲವು ನೀಡುವ ಕಾವು
ಹೃದಯದ ನೋವನು ನೀಗದು

ಓ ಪೆದ್ದರಿಚ್ಛ
ಆಸೆಯ ಬಲೆಯಲಿ
ನಲುಗುವ ನಿನ್ನಲಿ
ಇರಲೊಂದು ಆಸೆ
ದೇವನಲೊಂದಾಗುವ ಆಸೆ!

ದೇವರು ಕಾಣೆಯಾಗಿದ್ದಾರೆ!

ದೇವರು ಕಾಣೆಯಾಗಿದ್ದಾರೆ!

ದೇವಾಲಯದಲ್ಲಿ ಹುಡುಕಿದೆ..ಇಲ್ಲಾ
ಪವಿತ್ರ ಪುಸ್ತಕಗಳಲ್ಲಿ ಹುಡುಕಿದೆ…ಇಲ್ಲಾ
ಧ್ಯಾನ ಮಂದಿರಗಳಲ್ಲಿ ಹುಡುಕಿದೆ..ಇಲ್ಲವೇ ಇಲ್ಲಾ

ಊರಲ್ಲಿ ಹುಡುಕಿದೆ….ಇಲ್ಲಾ
ಪರರಲ್ಲಿ ಹುಡುಕಿದೆ….ಇಲ್ಲಾ
ಪ್ರಕೃತಿಯಲ್ಲಿ ಹುಡುಕಿದೆ…ಇಲ್ಲವೇ ಇಲ್ಲಾ

ಕಾಣೆಯಾಗಿಲ್ಲ ದೇವರು
ಹುಡುಕಿದರೆ ಸರಿಯಾಗಿ
ಗ್ಯಾರಂಟಿ ಸಿಗುವರು

ನಿನ್ನ ಮನದಾಳದಲ್ಲಿ ದೇವರ ಕಾಣದೆ ಮೊದಲು
ಕಾಣಲಾರೆ ಆತನನು ಬೇರೆಲ್ಲೂ
ಓ, ಪೆದ್ದರಿಚ್ಚಾ!

ಹೃದಯ ಆಲಯ

ಇಲ್ಲ ಎಮ್ಮಲಿ ಇಂದು
ದೇವರು ಇದ್ದಾರೆ ಎಂಬ ಪರಿಜ್ಞಾನ
ದೇವರು ಇಲ್ಲದ ರೀತಿಯಲ್ಲಿ
ಬದುಕುವುದು ನಮ್ಮ ಅಜ್ಞಾನ

ನಿನ್ನ ಹೃದಯದ ಆಲಯವನ್ನು
ದೇವಾಲಯವನ್ನಾಗಿ ಪರಿವರ್ತಿಸದೇ
ಆ ಪರಿಜ್ಞಾನ ಬರದು ನಿನಗೆ
ಓ, ಪೆದ್ದರಿಚ್ಚಾ!

ಬೆಸ್ಟ್

ಮೊಬೈಲ್ ಇರ್ಬೇಕು ಲೇಟೆಸ್ಟ್
ಹೆಂಡ್ತಿ ಇರ್ಬೇಕು ಸ್ವೀಟೆಸ್ಟ್
ಹಣ್ಣು ಇರಬೇಕು ಟೇಸ್ಟ್
ತರಕಾರಿಲ್ಲಿ ಇರಬಾರ್ದು ವೇಸ್ಟ್
ಇರ್ಬೇಕು ಎಲ್ಲಾದೂ ಬೆಸ್ಟ್
ಪಾಸಾಗಿರ್ಬೇಕು ಎಲ್ಲಾ ಟೆಸ್ಟ್
ಕ್ವಾಂಟಿಟಿ ಅಲ್ಲ ಮಸ್ಟ್
ಕ್ವಾಲಿಟಿ ಮಾತ್ರ ಫಸ್ಟ್

ಹುಲು ಮಾನವನಾಗಿರುವ ನೀನೇ ಉತ್ತಮವಾದುದನ್ನು ಆರಿಸುವಾಗ…….

ಅತ್ಯುತ್ತಮನಾದ ದೇವನು
ಕೆಟ್ಟವನಾದ ನಿನ್ನನ್ನು ಸ್ವೀಕರಿಸಬೇಕೆಂಬುದು
ಯಾವ ನ್ಯಾಯ ಪೆದ್ದರಿಚ್ಚಾ?

ನಿಧಿ

ನಿಧಿಯ ಕಂಡುಕೊಂಡವರು
ವಿಧಿಯ ದೂರುವುದಿಲ್ಲ
ನಿಧಿಯ ಅರಿತವರು
ವಿಧಿಗೆ ಹೆದರುವುದಿಲ್ಲ
ನಿಧಿ ಎಲ್ಲರಿಗೂ ಏಕ ರೂಪದಲ್ಲ
ಇದನ್ನರಿಯದವರಿಗೆ ವಿಧಿಯೇ ಎಲ್ಲ
ನಿನ್ನಲ್ಲಿರುವ,
ನಿಧಿಯನ್ನರಿಯದೆ
ವಿಧಿಯನ್ನ ದೂರಬೇಡ
ಪೆದ್ದರಿಚ್ಚಾ!

ಕಳೆ

ಬಲು ಉದಾರಿ ದೇವನು
ಮನದಲಿ ಬಿತ್ತುವನು
ಹಸನಾದ ಮನವಿರಲು
ಬೆಳೆಗಿಲ್ಲ ಬರವೇನು

ಹಸನಾದ ಭೂಮಿಗೆ
ಬರದ ಭಯವೇಕೆ
ಪೊರೆವ ಹರನಿರಲು
ಸಲ್ಲದ ದಿಗಿಲೇಕೆ

ಹಸನು ಭೂಮಿಗೆ
ಬೆಳೆ ಜಾಸ್ತಿ, ಕಳೆ ಜಾಸ್ತಿ…

ಕಳೆ ಕಳೆ ಎಂಬ ಚಿಂತೆಯ ಕಳೆ
ಕಿತ್ತೊಗೆ ಮೊದಲು
ಬೆಳೆ ಬೆಳೆ ನಂಬಿಕೆಯ ಬೆಳೆ
ನೂರಕ್ಕಿಂತ ಮಿಗಿಲು ಪೆದ್ದರಿಚ್ಚಾ!