ಗುಡಿಸಲು

ನನ್ನೊಳಗೆ ಎರಡು ಮನೆಗಳು
ನನಗೊಂದು ಪರನಿಗೊಂದು!!!
ನನಗೆ ಸುಂದರ ಅರಮನೆ
ಪರನಿಗೆ ಗುಡಿಸಲ ಮನೆ
ನಿನ್ನಲಿ ಪರನಿಗೆ
ಗುಡಿಸಲು ನೀಡಿ
ಅವನಲಿ ನಿನಗಾಗಿ
ಅರಮನೆಯನೇಕೆ
ಬಯಸುವೆ ಪೆದ್ದರಿಚ್ಚ!

ಭಾಗ್ಯವಂತ

ಭಾಗ್ಯವಂತ ನೀನು!!!

ಬಿದ್ದಾಗ ನೀನು ಜೊತೆಗಿದ್ದು ನಿನ್ನ
ಮೇಲೆತ್ತಿ ಬೆನ್ನ ತಟ್ಟಲು ಕೆಲವರಿದ್ದರೆ!

ಅತ್ತಾಗ ನೀನು ಜೊತೆಗಿದ್ದು ನಿನ್ನ
ಕಣ್ಣ ಹನಿಯ ಒರೆಸುವ ಕೆಲವರಿದ್ದರೆ!

ಸಾಧನೆಯ ಶಿಖರದಲ್ಲಿ ತೊಟ್ಟ ಮುಖುಟದಲಿ
ವಿನಯತೆಯ ಮುತ್ತುಗಳು ಮಿನುಗಿತ್ತಿದ್ದರೆ!

ಅನೀತಿ ಅನ್ಯಾಯದ ಕರಿಮೋಡದ ಕತ್ತಲಲಿ
ಕಿಚ್ಚೆದೆಯ ನ್ಯಾಯ ನೀತಿಯ ಕಿಡಿಯಾದರೆ!

ಕಡು ಕಷ್ಟ ಕಂಡು ದಯೇ ತೋರಿ ನಿರುತ
ಕಲ್ಲಾಗದೆ ಕಿರು ಹೃದಯ ಮಂಜಂತೆ ಕರಗಿದರೆ!

ನಿನ್ನವರೇ ಇರಿದಾಗ ನಿನ ಬೆನ್ನ ಹಿಂದೆ
ಕ್ಷಮಿಸುವ ಶುಚಿ ಮನವು ನಿನದಾದರೆ!

ಶೋಷಿಪರ ದ್ವೇಷಿಸದೆ ಕಡುಗೋಪದಿಂದ
ಕ್ಷಮಿಸುತ ಮಿತಿಮೀರಿ ಅವರ ಪ್ರೀತಿಸಿದರೆ!

ಜೊತೆಗಿರುವವನು ಜೊತೆಯಾಗುವವನು
ಜೊತೆ ಜೊತೆಯಲಿ ನಿನ್ನೊಂದಿಗೆ ಸದಾ ನಡೆವವನು
ಆಗಿರಲು ನಿನ್ನ ದೇವನು
ಸ್ವರ್ಗವೇ ನೀನು ನೀನೇ ಸ್ವರ್ಗವು ಪೆದ್ದರಿಚ್ಚ!

ಹೆಸರು

ನಿನ ಹೆಸರು ನಿನದಲ್ಲ
ಅದು ಪಡೆದಿರುವ ಸಾಲ
ಹೆಸರಲಿ ನಿನ ಬೆಲೆಯಿಲ್ಲ
ಅದು ಜೊತೆಬರುವ ಬಾಲ

ಗುರುತಷ್ಟೇ ನಿನ ಹೆಸರು
ನಿನ ಕರೆಯಲು ಈ ಜಗದಿ
ನಿನ್ನೆಸರು ಸತ್ತ ಬಳಿಕ
ಆರಂಭ ನಿನ್ನ ಸರದಿ

ಪದವೊಂದು ನಿನ್ನೆಸರು
ಇಂದು ಅದಕ್ಕೊಂದು ಜಾತಿ
ಅಡಗಿದೆ ಅದರಿಂದೊಂದು
ಧರ್ಮದ ಕರಿ ಮೂತಿ

ಹೆಸರಂತೆ ನೀನಾದರೆ
ನಿನಗಿನ್ನೊಂದು ಹೆಸರು
ಆ ಹೆಸರಲ್ಲಿ ನೀ ಒಂದಾದರೆ
ಆ ಹೆಸರಿಗೊಂದು ಉಸಿರು

ನಿನ್ನೆಸರು ನಿನಗಾಗಲಿ
ನಿನ ಬಾಳ ಧ್ಯೇಯ
ನಿನ್ನಿಂದ ಹೆಸರಾಗಲಿ
ಗುರಿ ಕಟ್ಟುವ ಪಾಯ

ನಿನ್ನೆಸರು ಬದುಕಿದರೆ
ಬದುಕಿರುವೆ ನೀನು
ನಿನ್ನಿಂದ ಕೊಲೆಯಾದರೆ
ಬರೀ ಗೋರಿ ನೀನು!!!
-ಪೆದ್ದ ರಿಚ್ಚ

ಮುಂದೆ ನಿಂತು

ಬಡವನ ಮುಂದೆ ನಿಂತು ಶ್ರೀಮಂತ ಎಂದುಕೊಳ್ಳಬೇಡ
ದೇವನ ಮುಂದೆ ನಿಂತು ನೋಡು!
ನಿನ್ನ ಸಿರಿತನ ಹುಲ್ಲಿಗೆ ಸಮಾನ ಎಂದಾಗುತ್ತದೆ!!!

ದಡ್ಡನ ಮುಂದೆ ನಿಂತು ಬುದ್ದಿವಂತ ಎಂದುಕೊಳ್ಳಬೇಡ
ದೇವನ ಮುಂದೆ ನಿಂತು ನೋಡು!
ಮೆದುಳೆಲ್ಲಾ ಸಗಣಿಯಂತೆ ಕಾಣಿಸುತ್ತದೆ!!!

ದುರ್ಬಲನ ಮುಂದೆ ನಿಂತು ಶಕ್ತಿಶಾಲಿ ಎಂದುಕೊಳ್ಳಬೇಡ
ದೇವನ ಮುಂದೆ ನಿಂತು ನೋಡು!
ಹುಸುಕಿನಂತೆ ಗಾಳಿಯಲ್ಲಿ ಮಾಯವಾದಂತನಿಸುತ್ತದೆ!!!

ರೋಗಿಯ ನೋಡಿ ಆರೋಗ್ಯದಿಂದ್ದಿದ್ದೇನೆ ಎಂದುಕೊಳ್ಳಬೇಡ
ದೇವನ ಮುಂದೆ ನಿಂತು ನೋಡು!
ನಿನ್ನಲ್ಲಿನ ಕುಷ್ಠ ತೆರೆದುಕೊಂಡತಾಗುತ್ತದೆ!!!

ಪಾಪಿಯ ಮುಂದೆ ನಿಂತು ಸಂತನೆಂದುಕೊಳ್ಳಬೇಡ
ದೇವನ ಮುಂದೆ ನಿಂತು ನೋಡು!
ಪಾಪದ ಸರಮಾಲೆಯೇ ನಿನ್ನಲ್ಲಿ ಹೊಳೆಯುವುದು ಗೊತ್ತಾಗುತ್ತದೆ!!!

ಗುಡ್ಡವನ್ನೇರಿದಾಕ್ಷಣ ಆಗಸವನ್ನು ಮುಟ್ಟಬಲ್ಲೆ ಎಂದುಕೊಳ್ಳಬೇಡ ಪೆದ್ದರಿಚ್ಚ!

ಹೃದಯ ಬಿಚ್ಚುವ ಮಾತು

ನಾನೊಂದು ಓಪನ್ ಬುಕ್
ಆದ್ರೆ ದಿಸ್ಟರ್ಬ್ ಮಾಡ್ಬೇಡಿ
ನಾನೊಬ್ಬ ಬಿಂದಾಸ್ ಮನ್ಶ್ಯಾ
ಆದ್ರೆ ಸಲಹೆ ಕೊಡ್ಬೇಡಿ
ಏನಕ್ಕೂ ಕೇರ್ ಮಾಡಲ್ಲ
ಆದ್ರೆ ಟೀಕೆ ಮಾಡ್ಬೇಡಿ
ನಂಗೆ ಎಲ್ಲಾದ್ರೂ ಸೈ
ಆದ್ರೆ ನಿಮ್ ಮನೆಗ್ ಕರಿಬೇಡಿ
ನಂಗೆ ಎಲ್ಲಾರು ಸೈ
ಆದ್ರೆ ನಮ್ ಮನೆಗೆ ಬರ್ಬೇಡಿ
ನಂಗೆ ಎಲ್ಲಾ ಧರ್ಮ ಒಂದೇ
ಆದ್ರೆ ನಂಗೆ ಬಾಯಿ ಎನ್ಬೇಡಿ
ನಾನು ಸಮಾಜ ಸೇವಕನ್ ತರಾ
ಕಷ್ಟದಲ್ಲಿ ನನ್ ಕರೀಬೇಡಿ
ನಾನೊಬ್ಬ ದಾನಶೂರ
ಆದ್ರೆ ಸಹಾಯ ಕೇಳ್ಬೇಡಿ

ಹೃದಯವಂತಿಕೆ ಇಲ್ಲದ ನೀನು
ಹೃದಯ ಬಿಚ್ಚುವ ಮಾತೇಕಾಡುವೆ ಪೆದ್ದರಿಚ್ಚ?

ಹುಟ್ಟು

ಹುಟ್ಟಿನ ದಿನವನ್ನು ಅರಿಯುವುದು
ಸಂತಸಕ್ಕೆ ಕಾರಣ
ಹುಟ್ಟಿನ ಕಾರಣವನ್ನು ಅರಿಯುವುದು
ಸಾಧನೆಗೆ ಪ್ರೇರಣ

ದೇವರ ಸೃಷ್ಟಿ ಯಾವುದೂ ವ್ಯರ್ಥವಲ್ಲ
ಇದನ್ನರಿಯದೆ ಬಾಳು ಸವೆಯುವುದರಲ್ಲಿ ಅರ್ಥವಿಲ್ಲ

ಹುಟ್ಟು ಸಾವಿನ ನಡುವೆ ಸಾವಾಗಬೇಡ
ಸಾವಿಗೆ ಅಂಜಿ ಬಾಳಿಗೆ
ನೋವಾಗಬೇಡ

ಸತ್ತರು ಕೆಲವರು ಬದುಕಿರುತ್ತಾರೆ
ಬದುಕಿದ್ದರೂ ಕೆಲವರು ಸತ್ತಿರುತ್ತಾರೆ
ಆಯ್ಕೆ ನಿನ್ನದು
ಸಾಧನೆ ನಿನ್ನದು

– ಪೆದ್ದರಿಚ್ಚ

ಸಮರ

ಹೊಸತು ಹಳತರ ಸಮರ
ಹೊಸತರಷ್ಟೆ ಹೊಸತು
ಹಳತರಷ್ಟೆ ಹಳತು

ಹಳತರಲ್ಲಿ ಹೊಸತನದ ಚಿಗುರು
ಹೊಸತರಲ್ಲಿ ಹಳೆತನದ ಬೇರು
ಇರುವಾಗ ಮಾತ್ರ ಸಾಧ್ಯ
ಸವಿಯಲು ಯಶಸ್ಸು ನೂರು

ಹೊಸತನವ ತೊರೆಯಬೇಡ
ಹಳೆತನವ ಮರೆಯಬೇಡ
ಎರಡು ಬೇಕು ಜೀವನಕೆ
ಸಾಗಲು ಬಾಳಲಿ ಬಹು ದೂರ

ಬೇರಿಲ್ಲದೆ ಮರವೆಲ್ಲಿ
ಚಿಗುರಿಲ್ಲದೆ ಸಸಿಯೆಲ್ಲಿ
-ಪೆದ್ದರಿಚ್ಚ

ದಡ್ಡ

ತಾನೇ ಬುದ್ದಿವಂತ ಎಂದುಕೊಳ್ಳುವವನು
ನಿಜವಾಗಿಯೂ ದಡ್ಡ
ತಾನೇ ದಡ್ಡ ಎಂದುಕೊಳ್ಳುವವನು
ದಿಟವಾಗಿಯೂ ಬುದ್ದಿವಂತ

ಕಲಿತು ಅರಿತಷ್ಟು
ಒಬ್ಬ ದಡ್ಡನಾಗುತ್ತಾನೆ
ತಿಳಿದು ಮರೆತಷ್ಟು
ಒಬ್ಬ ಬುದ್ದಿವಂತನಾಗುತ್ತಾನೆ

ಎಲ್ಲವನ್ನು ಅರಿಯುವುದು
ಬುದ್ದಿವಂತಿಕೆಯೂ ಅಲ್ಲ
ಎಲ್ಲವನ್ನು ಅರಿಯುವುದು
ಯಾರಿಗೂ ಸಾಧ್ಯವೂ ಇಲ್ಲ

ತಿಳಿದಿಲ್ಲ ತನಗೆಲ್ಲಾ ಎಂದಾಗ
ಇನ್ನೂ ತಿಳಿಯಲು ಕಲಿಯುವನು
ತಿಳಿದಿದೆ ತನಗೆಲ್ಲಾ ಎಂದಾಗ
ಇನ್ನು ಕಲಿಯಲು ಮರೆಯುವನು

ಎಲ್ಲಾ ತಿಳಿಯದ ಜಾಣನಿಗೆ
ಇರಬಹುದು
ದೈವ ಜ್ಞಾನದ ಕೊರತೆ
ಏನೂ ಅರಿಯದ ದಡ್ಡನಿಗೆ
ಸಿಗಬಹುದು
ದೈವ ಜ್ಞಾನದ ಒರತೆ
-ಪೆದ್ದರಿಚ್ಚ

ಹಸುಗೂಸು

ಅರಿಯೋ ಪೆದ್ದರಿಚ್ಚ ಹಸುಗೂಸು ನೀನು
ಆಳೆತ್ತರಕ್ಕೆ ಬೆಳೆದ ಹಸುಗೂಸು ನೀನು…

ದೇಹ ಶಕ್ತಿ ಬೆಳೆದಿದೆ ಆತ್ಮ ಶಕ್ತಿ ಸಾಲದು
ತೋಳ ಬಲ ಎದ್ದಿದೆ ಮನದ ಬಲ ಕಾಣದು…

ಬೆಳೆದ ದೇಹ ಸಾಲದು ನಿನ್ನ ಬಾಳ ಪಾಲಿಗೆ
ಮನಸ್ಸು ಆತ್ಮ ಸೇರಲಿ ನಿನ್ನ ದೇಹ ಸಾಲಿಗೆ
ದೇಹ ತೃಪ್ತಿ ನೀಡದು ಮೂರು ದಿನದ ಬಾಳಿಗೆ
ಆತ್ಮ ಶಕ್ತಿ ಬೇಕಿದೆ ನೂರು ದಿನದ ರೇಸಿಗೆ

ಬೆಳೆಸಿ ನಿನ್ನ ದೇಹವ ನಶಿಸಿ ನಿನ್ನ ಆತ್ಮವ
ಅಂಬೆಗಾಲಿನಲ್ಲಿ ನೀನು ಎಷ್ಟು ದೂರ ಸಾಗುವೆ
ಅರಿತು ನಿನ್ನ ಆತ್ಮವ ಬೆಳೆಯೋ ಮೂರ್ಖ ಮಾನವ
ಅರಿವೆ ನಿನಗೆ ಬರದೆ ನೀನು ಬಹಳ ದೂರ ಓಡುವೆ

ಕೊಂಡಿ

ಮೂರು ದಿನದ ನಮ್ಮ ಬಾಳು
ಒಂದು ಸರಪಳಿಯ ಸಾಲು
ಸರಪಳಿಗಳಿರುವುವು ನೂರು
ಹಿಡಿದವುಗಳ ಜೀವನ ಸಾರು
ಹಿಡಿಯುವ ಮುನ್ನ ಅರಿತಿರು…
ಒಂದು ಕೊಂಡಿ ಒಯ್ಯುವುದು
ಇನ್ನೊಂದು ಕೊಂಡಿಗೆ
ತಪ್ಪು ಕೊಂಡಿಯನ್ನು ಹಿಡಿದಲ್ಲಿ
ಬೀಳುವೆ ನೀನು ಗುಂಡಿಗೆ
-ಪೆದ್ದರಿಚ್ಚ