ಕ್ಷಮೆ

ಅಂಬೆಗಾಲಲಿ ನಡೆವಾಗ
ನನ್ನ ಕರಹಿಡಿಯದಿದ್ದರೆ
ಪುಟ್ಟ ಹೆಜ್ಜೆಯನಿಡುವಾಗ
ಆಕೆ ಕೈಯತಟ್ಟದಿದ್ದರೆ
ತೊದಲು ನುಡಿಯುವಾಗ
ನನ್ನ ಬೆನ್ನ ತಟ್ಟದಿದ್ದರೆ
ತಿನ್ನಲೊಲ್ಲೆ ಎನ್ನುವಾಗ
ತುತ್ತ ನೀಡದಿದ್ದರೆ
ಎಡವಿ ಬಿದ್ದು ನರಳುವಾಗ
ಎತ್ತಿ ಹಿಡಿಯದಿದ್ದರೆ
ಸೋಲ ಸವಿಯುವಾಗ ಎನಗೆ
ಗೆಲುವ ತೋರದಿದ್ದರೆ
ಕಾಲು ತಪ್ಪಿ ಸಾಗಿದಾಗ
ಎನ್ನ ದಾರಿಗೆಳೆಯದಿದ್ದರೆ
ನನ್ನ ಬಾಳೆಲ್ಲಾ ಗೋಳಾಗಿ
ಧೂಳಾಗುತ್ತಿದ್ದೆನು…
ತಪ್ಪು ಎಂಬ ರೋಗವು
ಮನುಜನನ್ನು ತಡೆವುದು
ಕ್ಷಮೆಯ ಮದ್ದು ಸಿಕ್ಕ ಒಡನೆ
ಬಾಳ ಚಿಗುರು ಒಡೆವುದು…
-ಪೆದ್ದರಿಚ್ಚ

ದೇವನಾರು?

ಒಂದು ಸಸಿಯ ನೆಡುವೆ
ನೀನೇ ಕಾಡಿನ ರಾಜನೆನುವೆ
ಸೃಷ್ಟಿ ಕರ್ತ ದೇವನಾರು?
ಭೂಮಿಯ ಒಮ್ಮೆ ಉಳುವೆ
ನೀನೇ ಭುವಿಯ ಒಡೆಯನೆನುವೆ
ಸರ್ವಶಕ್ತ ದೇವನಾರು?
ಒಂದು ಕಣವ ಅರಿವೆ
ನೀನೇ ವಿಜ್ಞಾನಿ ಎನುವೆ
ಎಲ್ಲವ ಅರಿತ ದೇವನಾರು?
ಶಿಲೆಗೆ ರೂಪ ನೀಡುವೆ
ನೀನೇ ಶಿಲ್ಪಿ ಎನುವೆ
ಕಲೆ ನೀಡಿದ ದೇವನಾರು?
ಒಂದಕ್ಷರವ ಕಲಿಸುವೆ
ನೀನೇ ಗುರು ಎನುವೆ
ಬುದ್ದಿ ನೀಡಿದ ದೇವನಾರು?
ಒಂದು ತುತ್ತು ದಾನ ಮಾಡುವೆ
ಸಮಾಜ ಸೇವಕನೆಂದು ಮೆರೆವೆ
ಎಲ್ಲರ ಕಾಯುವ ದೇವನಾರು?
ಮಗುವಿಗೆ ಜನ್ಮ ನೀಡುವೆ
ನೀನೆ ಜನನಿ/ಕ ಎನುವೆ
ಜೀವ ನೀಡಿದ ದೇವನಾರು?
ಕರ ಎತ್ತಿ ಹರಸುವೆ
ನೀನೇ ದೇವರು ಎನುವೆ
ವರ ನೀಡುವ ದೇವನಾರು?

ಧನಿ ಅವನು ದಾಸ ನೀನು
ಉಸಿರಿರುವರೆಗೆ ನಿನ್ನ ಬಾಳು
ನಿನ್ನ ಅತೀ ಬುದ್ದಿವಂತಿಕೆಯು
ದೇವರ ದಡ್ಡತನಕ್ಕಿಂತ ಕೀಳು ಪೆದ್ದರಿಚ್ಚ!

ಒಳಗಿನ ಕುಷ್ಠ

ಕುಷ್ಟದ ರೋಗವು ಆಗಿತ್ತು
ದೇಹದ ತುಂಬಾ ಹರಡಿತ್ತು
ಮದ್ದಿಗೆ ಹೆದರಿ ಇಂದದು ಏಕೋ
ಹೃದಯದಿ ಅಡಗಿದೆ ಎನಿಸಿತ್ತು!

ದೇಹದ ಕುಷ್ಟಕೆ ಮದ್ದುಂಟು
ಗಾಯದ ನೋವಿಗೆ ಬೆಲೆಯುಂಟು
ಸಿಕ್ಕರೆ ಒಳಗಿನ ಕುಷ್ಠದ ಬಲೆಗೆ
ಸಾಯದೇ ಬದುಕುವ ನೋವುಂಟು.

ಹೊರಗಿನ ಗಾಯವ ನೋಡುವರು
ಗಾಯವ ಬೇಗನೆ ಮರೆಯುವರು
ಒಳಗಿನ ಗಾಯಕೆ ಔಷದಿ ಸಿಗದೆ
ನೋವಿನ ಕಹಿಯನು ಕುಡಿಯುವರು…

ಒಳಗಿನ ಕುಷ್ಠವ ಅರಿಯುವ ದೇವನೆ
ಬೇಗನೆ ಮದ್ದನು ಕರುಣಿಸ ಬಾ
ಕುಷ್ಟದ ನಾತದಿ ನಾರುವ ಮನದಲಿ
ಪ್ರೀತಿಯ ಸಿಂಚನ ಮೂಡಿಸ ಬಾ…

-ಪೆದ್ದರಿಚ್ಚ

ನಕಲಿ

ನಕಲಿ ಜಗದಲಿ ಎಲ್ಲವೂ ನಕಲಿ
ಅಸಲನು ಅರಸುವ ಆಸೆಯೂ ನಕಲಿ
ನಗುವೂ ನಕಲಿ ನಗವೂ ನಕಲಿ
ಅಳುವಲಿ ಸುರಿಸುವ ಕಂಬನಿ ನಕಲಿ!

ಹುಟ್ಟು ಸಾವಿನ ಅಸಲಿನ ನಡುವೆ
ಅನ್ನವೂ ನಕಲಿ ಚಿನ್ನವೂ ನಕಲಿ
ಕತ್ತಲು ಬೆಳಕಿನ ಸತ್ಯದ ನಡುವೆ
ಯೋಚನೆ ನಕಲಿ ಯೋಜನೆ ನಕಲಿ!

ನಕಲನು ಅಳೆಯುವ ಸಾಧನ ನಕಲಿ
ನಕಲನು ಸರಿಸುವ ಭರವಸೆ ನಕಲಿ
ನೋಟು ನಕಲಿ ಕೋಟು ನಕಲಿ
ನ್ಯಾಯ ಮೂರ್ತಿಯ ತಕ್ಕಡಿ ನಕಲಿ!

ನಕಲಲಿ ಬೆರೆತಿಹ ಅಸಲಿ ಮಾನವ
ಕಾಣು ನೀ ನಿನ್ನಲಿ ದೇವನ ರೂಪವ
ಅರಿಯುವೆ ಆಗನೀ ಅಸಲಿನ ಬೆಲೆಯ
ತೊರೆದು ಬಾಳುವೆ ನಕಲಿನ ಕೊಳೆಯ!
– ಪೆದ್ದರಿಚ್ಚ

ಯಾಕೋ ಏನೋ!

ಯಾಕೋ ಏನೋ
ಕೆಟ್ಟದ್ದೇ ಹೆಚ್ಚು ಇಷ್ಟ ಆಗುತ್ತದೆ…
ಯಾಕೋ ಏನೋ
ಬೇಡವಾಗಿದ್ದೆ ಬೇಕೆನಿಸುತ್ತದೆ…
ಯಾಕೋ ಏನೋ
ಬೇಡ ಬೇಡ ಎಂದಾದರೂ ಅದನ್ನೇ ಮಾಡುವ ಮನಸ್ಸಾಗುತ್ತದೆ…
ಯಾಕೋ ಏನೋ
ಮನಸ್ಸಿಗೆ ವಿರುದ್ಧವಾದುದೇ
ಆಗಿ ಹೋಗುತ್ತದೆ…
ಯಾಕೋ ಏನೋ
ಒಳಿತು ಕೆಡುಕನು
ಅರಿಯುವುದೇ ಕಷ್ಟವಾಗುತ್ತಿದೆ…
ಯಾಕೋ ಏನೋ
ಬಾಳು ಅನೀತಿಯೆಡೆಗೆ ವಾಲುತ್ತಿದೆ…
ಯಾಕೋ ಏನೋ
ಸತ್ಯದ ಸುಳಿವೇ ಇಲ್ಲವೆನಿಸುತ್ತಿದೆ…
ಯಾಕೋ ಏನೋ
ಧೂರ್ತರೇ ದೂತರಾಗಿ ಕಾಣಿಸುತ್ತಿದ್ದಾರೆ…
ಯಾಕೋ ಏನೋ
ಅಡ್ಡದಾರಿಯೇ ಹೆದ್ದಾರಿಯಾಗುತ್ತಿದೆ…
ಯಾಕೋ ಏನೋ
ಅಶ್ಲೀಲತೆಯೇ ಸೌಂದರ್ಯವಾಗುತ್ತಿದೆ…
ಯಾಕೋ ಏನೋ
ಪರರ ನೋವೇ ಮನರಂಜನೆಯಾಗುತ್ತಿದೆ…
ಯಾಕೋ ಏನೋ
ಹೊರತಾದುದೇ ಸಂಪ್ರದಾಯವಾಗುತ್ತಿದೆ…
ಯಾಕೋ ಏನೋ
ಅಧರ್ಮವೇ ಧರ್ಮಪಾಲನೆಯಾಗುತ್ತಿದೆ…
ಯಾಕೋ ಏನೋ
ಅವಿಶ್ವಾಸವೇ ಮಾನವಧರ್ಮವಾಗುತ್ತಿದೆ…
ಯಾಕೋ ಏನೋ
ಪ್ರೀತಿಯ ಗಿಡ ನೆಡ ಬೇಕೆನಿಸುತ್ತಿದೆ
ದಯಾಮಾಡಿ
ಶಾಂತಿಯ ನೀರ ಚಿಮುಕಿಸ ಬನ್ನಿ…
– ಪೆದ್ದರಿಚ್ಚ

ಶತ್ರು…

ಹೊರಟೆ ಒಂದಿನ ಹುಡುಕಿ
ನನ್ನ ವೈರಿಯನು
ಕೇಳಿ ಅರಿತಿದ್ದೆ
ಇರುವರು ನೂರಾರು…
ಎಷ್ಟು ಹುಡುಕಿದರು ಸಿಗಲಿಲ್ಲ
ಅವಿತು ಕುಳಿತಿದ್ದರೋ ಏನೋ!

ಸುಮ್ಮನೆ ಹುಡುಕಿದರೆ
ಸಿಗರು ಎಂದುಕೊಂಡೆ
ಸುಮ್ಮನೆ ಕುಳಿತುಕೊಂಡೆ
ಒಂದು ಪಟ್ಟಿ ಮಾಡುವ
ಯೋಜನೆ ಮನದೊಳಗೆ…

ನನ್ನ ಏಳಿಗೆಯನ್ನು ಕಂಡು
ಅಸೂಯೆಪಡುವ
ನೆರೆಯವನು ವೈರಿಯೇ?
ಇಲ್ಲಾ….
ಅವನಾವ ಕೇಡನ್ನು
ಎಸಗಿಹನು ಎನಗೆ…
ಅವನೇಗೆ ವೈರಿ ನನಗೆ?

ನಾ ಕೇಳಿದ್ದನ್ನು ತಕ್ಷಣ ನೀಡದ
ನನ್ನ ಪರಿಚಿತನು ವೈರಿಯೇ?
ಅವನಾರು ನೀಡಲು….
ಇಲ್ಲಾ….
ಅವನಾವ ಕೇಡನು
ಎಸಗಿಹನು ಎನಗೆ…
ಅವನೇಗೆ ವೈರಿ ನನಗೆ?

ನನ್ನ ದಾರಿಯಲಿ ಅಡ್ಡನಿಂತ
ಅಪರಿಚಿತ ಎನ್ನ ವೈರಿಯೇ?
ಇಲ್ಲಾ….
ದಾರಿ ಬದಲಿಸಬಹುದಲ್ಲಾ ನಾನು….
ಅವನಾವ ಕೇಡನು
ಎಸಗಿಹನು ಎನಗೆ…
ಅವನೇಗೆ ವೈರಿ ನನಗೆ?

ಎಲ್ಲಿಹನು ವೈರಿ
ನನ್ನ ಕಾಡುವ ವೈರಿ?
ಕುಳಿತಲ್ಲಿ ತಿಳಿಯಿತು ನನ್ನ ತಲೆಗೆ
ಮನೆ ಇದೆ ಎನ್ನ ಮನದಲಿ
ಆ ಎನ್ನ ವೈರಿಗೆ…
ಒಳಿತು ಸಾಕು ಎನುವ
ಪ್ರೀತಿ ಬೇಡ ಎನುವ
ಭಯದ ಬೆಂಕಿ ಕಾರ್ವ
ಸ್ವಾರ್ಥ ಚಿಗುರ ಬಿಡುವ
ಹಿಂದೆ ಹಿಂದೆ ಸರಿವ
ವೈರಿ ಇಹನು ಒಳಗೆ…

ನಿನ್ನ ಶತ್ರುವನು ನಿನ್ನರಮನೆಯಲ್ಲಿಟ್ಟು
ಪರರ ಗುಡಿಸಲಲೇಕೆ ಹುಡುಕುವೆ ಪೆದ್ದರಿಚ್ಚ?

ಸೊಬಗು

ಬಳಸಲಿ ಏನನು
ಅಳೆಯಲು ನಾನು
ದೇವನು ನೀಡಿದ ಸಿರಿಸೊಬಗು
ಅರಿಯದೆ ಬಳಸದೇ
ಹೆಡ್ಡನ ತರದಲಿ
ದೂರುವೆ ದೇವನ ದಿನದಿನವು

ತಪ್ಪನು ದೇವನು
ಮಾಡಲು ಶಕ್ತನೇ
ತನ್ನಯ ಸೃಷ್ಟಿಯ ಕಾರ್ಯದಲಿ
ತನ್ನದೇ ರೂಪದಿ
ರೂಪಿಸಿ ಎನ್ನನು
ಪೊರೆಯದೆ ಬಿಡನು ಪ್ರೀತಿಯಲಿ

ಬೇಧವ ಮಾಡನು
ದೇವನು ಎಂದಿಗೂ
ತನ್ನಯ ಪ್ರೀತಿಯ ಸೃಷ್ಟಿಯಲಿ
ಸೊಭಗನು ನೀಡಿ
ಹರಸಿಹನೆನ್ನನು
ಬೆರೆಯಲು ಸೃಷ್ಟಿಯ ಸೊಭಗಿನಲಿ

ಅರಿಯದೆ ಸತ್ಯವ
ಹೋಲಿಸಿ ಪರರಲಿ
ಕಾಣುವೆ ಇಲ್ಲದ ಭೇದವನು
ಒಳಗಿನ ಸೊಗಸನು
ಅಳಿಯದ ಮನಸನು
ಕಾಣದೆ ದೇವನ ದೂರುವೆನು.

ತೇಲುವ ಅಲೆಯಲಿ
ಕಾಣದು ರತ್ನವು
ಅಡಗಿದೆ ಸಾಗರದಾಳದಲಿ
ಎನ್ನಾತ್ಮದ ಆಳಕೆ
ಇಳಿಯುವೆ ನಾನು
ನಲಿಯುವೆ ನಿರುತ ದೇವನಲಿ.
– ಪೆದ್ದ ರಿಚ್ಚ

ಗಾಜಿನ ಮನೆ

ಗಾಜಿನ ಮನೆಯಲಿ ಎನ್ನಯ ಜೀವನ
ಧೂಳು ತುಂಬಿದೆ ಮನೆಯೊಳಗೆ
ಸೂರ್ಯನ ಬೆಳಕನು ಕಾಣುವ ಹಂಬಲ
ಕತ್ತಲು ಕವಿದಿರೆ ಮನದೊಳಗೆ.

ಧೂಳನು ಕಾಣದೆ ಸೂರ್ಯನ ದೂರುವೆ
ಬೆಳಕನು ಈಯಲು ಮೊರೆಯಿಡುವೆ
ಒಳಗಿನ ಧೂಳನು ಕಾಣದೆ ಬಾಳುವೆ
ಕತ್ತಲ ಜಗದಿ ಬಲವಿರದೆ.

ಗಾಜಿನ ಮನೆಯನು ಕೆಡವುವ ಯೋಚನೆ
ಬೆಳಕನು ಹರಿಸಲು ಮನೆಯೊಳಗೆ
ಒಡೆಯನು ದೇವನು ಗಾಜಿನ ಮನೆಗೆ
ಕೆಡವದೇ ಬಾಳುವೆ ಕೊನೆವರೆಗೆ.

ಬೆಳಕನು ಸವಿಯಲು ಸುಲಭದ ದಾರಿ
ಧೂಳನು ಸರಿಸು ಮನೆಯೊಳಗೆ
ಹೊರಗಿನ ಧೂಳನು ಸರಿಸುತಾ ಮಳೆಯಲಿ
ಸೂರ್ಯನೇ ಬರುವನು ಗುಡಿಯೊಳಗೆ.

ಧೂಳನು ಸರಿಸಲು ಸೂರ್ಯನ ಕಾಣುವೆ
ಮಿರುಗುವೆ ಆತನ ಕಿರಣದಲಿ
ಬೆಳಕನು ಸವಿಯುತ ನಿನ್ನನೇ ಮರೆವೆ
ಬೆರೆಯುತಾ ಆತನ ಹೊಳಪಿನಲಿ.
– ಪೆದ್ದರಿಚ್ಚ

ಕುರುಡರು

ಕಣ್ಣಿದ್ದರೆ ಸಾಲದು ನೋಡಲು
ಕರುಣೆ ಬೇಕು ಮನದಲಿ
ನೋಡಲು ದಿಟ್ಟಿಸಿ ಕಾಣದು
ಪ್ರೀತಿ ಬೇಕು ಎದೆಯಲಿ!

ಕನ್ನಡಕ ತೊಟ್ಟರೇನು ಸುಖ
ಮನಸ್ಸು ಮಾಡದೇ ನೋಡಲು
ನಗು ತೊಟ್ಟರೇನು ಮುಖ
ಕರವ ಎತ್ತದೆ ನೀಡಲು!

ಕಣ್ಣಿಲ್ಲದವರು ನೋಡುತಿಹರು
ಅಂತರಂಗದ ಕಣ್ಣನು ತೆರೆದು
ಕಣ್ಣಿದ್ದವರು ಕಾಣದೆ ನಿಂತಿಹರು
ಮನದೊಳಗಿನ ಆತ್ಮವ ಮರೆತು.

ಕಣ್ತೆರೆದು ನೋಡು ನೀ ಪೆದ್ದರಿಚ್ಚ
ಕಾಣುವೆ ದೇವನ ನಿನ್ನ ಪರನಲಿ
ಮಬ್ಬಾಗಿದ್ದರೆ ತೊಡು ಪ್ರೀತಿಯ ಚಷ್ಮಾ
ಗಳಿಸುವೆ ಮುಕ್ತಿಯ ಜಗದಲಿ!

ಎಲ್ಲಿರುವೆ ದೇವಾ!

ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?
ಅರಸುತಾ ನಿನ್ನನು ಸಾಗಿರುವೆ,
ಕಾಣದೆ ನಿನ್ನನು ಬಳಲಿರುವೆ.

ಇರುವೆಯಾ ಮಗುವಿನ ನಗುವಿನಲಿ
ಇಲ್ಲಾ ಇರುವೆಯಾ ಪ್ರೇಮಿಯ ಅಳುವಿನಲಿ
ಇರುವೆಯಾ ಸವಿಗಾನದ ನಾದದಲಿ
ಇಲ್ಲಾ ಇರುವೆಯಾ ಮೌನದ ಭಾವದಲಿ.
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಇರುವೆಯಾ ಬಾನಿನ ಅಂದದಲಿ
ಇಲ್ಲಾ ಇರುವೆಯಾ ಸಸಿಯ ಗಂಧದಲಿ
ಇರುವೆಯಾ ಸಿಹಿ ಮಕರಂದದಲಿ
ಇಲ್ಲಾ ಇರುವೆಯಾ ಸ್ನೇಹದಾನಂದದಲಿ.
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಇರುವೆಯಾ ಕವಿಗಳ ಕವನದಲಿ
ಇಲ್ಲಾ ಇರುವೆಯಾ ಶಿಲ್ಪಿಯ ಕಲೆಗಳಲಿ
ಇರುವೆಯಾ ಪಾಣನ ಕಂಠದಲಿ
ಇಲ್ಲಾ ಇರುವೆಯಾ ಪಾಣ್ಬೆಯ ನಾಟ್ಯದಲಿ
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಇರುವೆಯಾ ತಾಯಿಯ ಪ್ರೇಮದಲಿ
ಇ ಇರುವೆಯಾ ತಂದೆಯ ತ್ಯಾಗದಲಿ
ಇರುವೆಯಾ ನೆಂಟರ ಮುದ್ದಿನಲಿ
ಇಲ್ಲಾ ಇರುವೆಯಾ ಗುರುವಿನ ಗುದ್ದಿನಲಿ.
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಇರುವೆಯಾ ನಿನ್ನೆಯ ಧೂಳಿನಲಿ
ಇಲ್ಲಾ ಇರುವೆಯಾ ನಾಳೆಯ ಗೋಳಿನಲಿ
ಇರುವೆಯಾ ಇಂದಿನ ಬಾಳಿನಲಿ
ಇಲ್ಲಾ ಇರುವೆಯಾ ಕಾಣದ ಗೀಳಿನಲಿ.
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಇರುವೆಯಾ ತಲೆಯ ತತ್ವದಲಿ
ಇಲ್ಲಾ ಇರುವೆಯ ಹೃದಯದ ಸತ್ವದಲಿ
ಇರುವೆಯಾ ಪ್ರೇಮದ ಕೃತ್ಯದಲಿ
ಇಲ್ಲಾ ಇರುವೆಯಾ ಸೋಲದ ಸತ್ಯದಲಿ.
ಎಲ್ಲಿರುವೆ ದೇವಾ ನೀ ಎಲ್ಲಿರುವೆ?
ಹುಡುಕುತಲಿರುವೆ ನೀ ಎಲ್ಲಿರುವೆ?

ಏಕೆನೆ ದೇವನೆ ಮನದ ಈ ಗೂಡಲಿ
ಸದ್ದನು ಮಾಡದೆ ಕುಳಿತಿರುವೆ
ಅರಿಯದೇ ನಿನ್ನ ಬಾಳಲಿ ಎನ್ನ
ಹುಡುಕುತಾ ಹುಡುಕುತಾ ದಣಿದಿರುವೆ.
– ಪೆದ್ದರಿಚ್ಚ