ಜೀವನವೆಂಬ ಪುಸ್ತಕದಲಿ
ಬರೆಯುತಿರು ಅನುದಿನ
ನೀ ಪಡೆದ ಬಿಳಿ ಹಾಳೆಯಲಿ
ಲಿಖಿಸುತಿರು ಪ್ರತಿದಿನ
ಖಾಲಿ ಹಾಳೆಗಳಿರುವ ತನಕ
ಒಳಿತನೇ ಗೀಚುತಿರು…
ಪುಸ್ತಕ ಮುಗಿದರೇನು?
ಭಯಪಡಬೇಡ
ಬರೆಯುತಿರು ಅನುದಿನ
ಖಾಲಿ ಹಾಳೆ ತುಂಬಿತೇ
ಓದಿ ನೋಡು
ನಿನ್ನ ಮನ ತುಂಬುವುದೇ?
ಓದುಗನ ಹೃದಯದ
ಖಾಲಿ ಜಾಗ ತುಂಬುವುದೇ?
ಸೈ ಎಂದಾದರೆ
ಪುಸ್ತಕ ಹೋಗದು ಅಗಲಿ..
ಇಲ್ಲವೆಂದಾದರೆ
ಇರುವ ಸ್ವಲ್ಪ ಜಾಗದಲಿ
ತಿದ್ದುವ ಪ್ರಯತ್ನ ಸಾಗಲಿ…
ನಿನ್ನ ಪುಸ್ತಕದಲಿ
ನೀ ಬರೆವ ಬರಹ
ಭಾಷೆಯ ಪದಗಳಲ್ಲ
ಬೇಧದ ಶಬ್ದಗಳಲ್ಲ
ಪ್ರೀತಿಯ ಭಾವ…
ತಂಗಾಳಿಯನು ಸೂಸುವ
ಮಧುರ ರಾಗ…
ನಿನ್ನ ಪುಸ್ತಕದ ಹಾಳೆಯಲಿ
ಬರೆಯುವ ಲೇಖಕ ನೀನು
ಲೇಖನಿ ನಿನದು ಬರಹ ನಿನದು…
ಗೀಚುತಿರು ನೀನು
ಅಡ್ದಿಯಿಲ್ಲ ಏನು…
ನಿನ್ನ ಖಾಲಿ ಹಾಳೆಯಲಿ
ಹಗುರು ಸಲಿಗೆಯಿಂದ
ಗೀಚಲು ಬಿಡದಿರು ಇತರರ..
ಅರಿಯದಿರೆ ಕೇಳಿ ಕಲಿ
ಗೀಚುತಿರು…
ಪುಸ್ತಕ ನಿನದು
ಲೇಖನಿ ನಿನದು….
ನಿನಗೆ ಬೇಕಾದಂತೆ ಬರೆ
ನಿನಗೆ ತೋಚಿದಂತೆ ಕೊರೆ
ಪುಸ್ತಕ ನಿನದು
ಲೇಖನಿ ನಿನದು…
ಬೇರೊಂದು ಪುಸ್ತಕವ
ನೋಡಿ ಏಕೆ ಬರೆವೆ
ಬೇರೊಂದು ಪುಸ್ತಕದ
ಗೀಚಿದ ಸಾಲಿನ
ಅರಿಯವಾಗದು ನಿನಗೆ…
ನಿನ್ನ ಪುಸ್ತಕ ನೀನೇ ಲೇಖಕ
ಗೀಚುತಿರು ಅನುದಿನ…
ನೀ ಬರೆದ ಬರಹವನು
ಓದಲು ಬರುವನು
ಮೊದಲ ಹಾಳೆಯಿಂದಿಡಿದು
ಕೊನೆಯ ಪುಟದವರೆಗೂ
ಎಳೆ ಎಳೆಯಾಗಿ ಓದುವನು….
ಗೀಚಿದ ಸಾಲುಗಳನು
ಅದರ ನಡುವೆ ಇರುವುದನು…
ಆ ಬರಹದ ಕೈಯಲ್ಲಿಡು ನೋಡಿ
ನಿನ್ನ ತೀರ್ಪನು ಬರೆವನು…
ಆಗ ತೀರ್ಪುಗಾರ ಯಾರು?
ಪುಸ್ತಕ ಓದಿದ ಅವನಲ್ಲ ಪೆದ್ದರಿಚ್ಚ
ಅದನ್ನು ಬರೆದ ನೀನು…