ದೂರದ ಕಾಣದ ಕಡಲು
ಎನ್ನಲಿ ಹಂಬಲದ ಸಾಲು
ಒಂದಲ್ಲ ಒಂದು ದಿನ
ಅಲ್ಲಿ ಪಡೆವೆ ಎನ್ನ ಪಾಲು
ಅಲೆಗಳ ಅಬ್ಬರವೇ ಸಾಕು
ಆತನ ನಂಬಲು ನಾನು
ವಿಶಾಲ ಕಡಲಲಿ ಬೇಕಿನ್ನೆನು
ಕಾಲಿರಿಸುವೆ ದಿಟದಿ ನಾನು
ಕರೆಯುವನು ಎನ್ನ ಅವನು
ಮರೆಯದೆ ಅನುದಿನವು
ಬೆರೆತಿರುವೆ ಜಗದಿ ನಾನು
ಗಳಿಸುತ ಅರಿಯದೆ ಸಾವು
-ಪೆದ್ದ ರಿಚ್ಚ
ದೂರದ ಕಾಣದ ಕಡಲು
ಎನ್ನಲಿ ಹಂಬಲದ ಸಾಲು
ಒಂದಲ್ಲ ಒಂದು ದಿನ
ಅಲ್ಲಿ ಪಡೆವೆ ಎನ್ನ ಪಾಲು
ಅಲೆಗಳ ಅಬ್ಬರವೇ ಸಾಕು
ಆತನ ನಂಬಲು ನಾನು
ವಿಶಾಲ ಕಡಲಲಿ ಬೇಕಿನ್ನೆನು
ಕಾಲಿರಿಸುವೆ ದಿಟದಿ ನಾನು
ಕರೆಯುವನು ಎನ್ನ ಅವನು
ಮರೆಯದೆ ಅನುದಿನವು
ಬೆರೆತಿರುವೆ ಜಗದಿ ನಾನು
ಗಳಿಸುತ ಅರಿಯದೆ ಸಾವು
-ಪೆದ್ದ ರಿಚ್ಚ
ಮನಸ್ಸು ಬರಡಾಗಿತ್ತು
ಹೊಸ್ತಿಲಲ್ಲಿ ಕುಳಿತ ನನಗೆ
ಬರಡು ನೆಲದ ಸ್ನೇಹ.
ಆ ಸ್ನೇಹದಲಿ ಒಂದು ಸಮಾಧಾನ.
ಆದರೆ…!
ಆ ನೆಲದ ನಿರೇಕ್ಷೆಯನು ಕಾಣದಾದೆ.
ಅದರ ಸ್ನೇಹ ಮೋಡದೊಡನೆ…
ಮೋಡ ಮಳೆಗರೆಯಿತು
ನೆಲ ನೆನೆಯಿತು
ಚಿಗುರೊಡೆಯಿತು
ಎಲ್ಲಾ ಹಸನಾಗಿ ಹಸುರಾಯಿತು…
ಬರಡು ನೆಲವನು ಕಾಣುತ್ತಿದ್ದ
ಎನ್ನಲ್ಲಿ ಇನ್ನೂ ಬರಡೇ ಬರಡು…
ಮನಸ್ಸು ಮೌನಕ್ಕೆ ಜಾರಿತ್ತು
ಮರದ ಬುಡದಲಿ ಮರಕ್ಕೊರಗಿ
ಕುಳಿತು ನೋಡಲು ಸ್ಮಶಾನ ದರ್ಶನ
ಅದರ ಮೌನದ ಸ್ನೇಹವಾಯಿತು
ಆ ಸ್ನೇಹದಲೊಂದು ಸಂತೃಪ್ತಿ….
ಅದರ ನಿರೇಕ್ಷೆಯನು ಕಾಣದಾದೆ.
ಮಸಣಕ್ಕಾದರೋ ಕೋಗಿಲೆಯ ಸ್ನೇಹ…
ಕೋಗಿಲೆ ಹಾಡಿತು
ಮಧುರ ಸಂಗೀತವಾಯಿತು.
ಮೌನ ಗಾನವಾಯಿತು.
ಮಸಣದ ಮೌನದಲಿ ಮೌನಿಯಾಗಿದ್ದ
ಎನ್ನಲಿ ಎನ್ನೂ ಅದೇ ಮೌನ…
ಬಾಳು ಫಲಕಾಣದೆ ವಿಫಲವಾಗಿತ್ತು
ಬೇಸತ್ತು ಕಿಟಕಿಯಿಂದ ಹೊರನೋಡಲು
ಬೋರು ಮರ ಕಣ್ಣು ಹೊಡೆಯಿತು
ಆ ಬೋರು ಮರದ ಸ್ನೇಹದಲಿ
ಎಲ್ಲಾ ಮರೆಸುವ ಸಾಂತ್ವನ…
ಆದರೆ…!
ಅದರ ನಿರೀಕ್ಷೆಯನು ಕಾಣದಾದೆ…
ಬೋರು ಮರಕ್ಕೆ ವಸಂತನ ಸ್ನೇಹ.
ಆತನ ದರ್ಶನವಾಗುತ್ತಲೇ
ಮರ ಚಿಗುರಿತು
ಹೂವು ಅರಳಿತು
ಹದಿಹರೆಯದ ಬಾಲೆಯಂತೆ
ಮರ ಮೈತುಂಬಿ ನಿಂತಿತು
ನಾನೋ ಬೋರು ಮರದ
ಸಾಂತ್ವನದಲಿ ಮಿಂದು
ಇನ್ನೂ ಬೋರು ಬಿದ್ದಿರುವೆನು…
ಚಟಗಳ ಹಾವಳಿ…
ಅವುಗಳು ಇರಿಯುತ್ತಿದ್ದವು
ನೋವಿನ ಕಣ್ಗಳಲಿ ಹೊರ ನೋಡಲು
ಗುಲಾಬಿ ಮುಳ್ಳುಗಳು ಹಾ ಎನ್ನಲು
ಆ ಸ್ನೇಹದಲಿ ಮುದ ಕಂಡೆ.
ಆದರೆ…!
ಅವುಗಳ ನಿರೀಕ್ಷೆಯನು ಕಾಣದಾದೆ.
ಅವಕ್ಕೋ ಸೂರ್ಯನ ಕಿರಣಗಳ ಸ್ನೇಹ…
ಚಿಗುರು ಅಂಕುರವಾಯಿತು
ಅಂಕುರ ಮೊಗ್ಗಾಯಿತು
ಮೊಗ್ಗು ಹೂವಾಯಿತು.
ಮುಳ್ಳುಗಳ ಒಡನಾಟದಲ್ಲೆ
ಮುದ ಕಂಡ ನಾನು
ಮುಳ್ಳು ಪೊದೆಯಾಗಿಯೇ ಉಳಿದೆ.
ಅಂತರಂಗದಲ್ಲಿ ಕತ್ತಲು
ರಾತ್ರಿಯ ಆ ಘೋರ ಕತ್ತಲ
ಅಪ್ಪುಗೆಯಲಿ ಮೈ ಮರೆತೆ.
ನಮ್ಮಿಬ್ಬರದು ಅನ್ಯೋನ್ಯ ಸ್ನೇಹ
ಆದರೆ…!
ಕತ್ತಲ ನಿರೀಕ್ಷೆಯನು ಕಾಣದಾದೆ.
ಅದಕ್ಕೋ ಉದಯ ರವಿಯ ಸ್ನೇಹ…
ರವಿ ಮೂಡಲು
ಬೆಳಕು ಮೂಡಿತು
ಕತ್ತಲು ಸರಿಯಿತು
ನಗೆ ಚೆಲ್ಲಿತು
ಕತ್ತಲೆಯ ಅಪ್ಪುಗೆಯಲ್ಲೇ ಮೈ ಮರೆತ
ಎನ್ನಲಿ ಇನ್ನೂ ಕತ್ತಲೆಯ ಆರ್ಭಟ…
ನಿರೀಕ್ಷೆಯಿರದ ಬಾಳು
ನಿಸ್ಸಾರ ಗೋಳು
ನಿರೀಕ್ಷೆಯಿರಲಿ
ಜೊತೆಗೆ ಸ್ನೇಹವಿರಲಿ
ಆದರೆ ಆ ಸ್ನೇಹ…!!!
ನಿನ್ನ ದೇವನಲಿರಲಿ…
ಬರಡು ಹಸನಾಗುವುದು
ಮೌನ ಮಾತಾಗುವುದು
ಸೋಲು ಗೆಲುವಾಗುವುದು
ಮುಳ್ಳು ಹೂವಾಗುವುದು
ಕತ್ತಲು ಬೆಳಕಾಗುವುದು
ಎಲ್ಲಾ ಹೊಸದಾಗುವುದು
– ಪೆದ್ದರಿಚ್ಚ
ನಡೆದಾಡುವ ಪ್ರತಿಯೊಬ್ಬನೂ
ಕಾಲು ಜಾರುತ್ತಾನೆ
ಜಾರದಂತೆ ಎಚ್ಚರಿಕೆಯಿರುವವನು
ಗುರಿ ಸೇರುತ್ತಾನೆ.
ಕಾಲು ಜಾರಲು
ಹೆಚ್ಚು ಸಮಯ ಬೇಡ
ಕಾಲು ಜಾರಿದ
ಬಳಿಕ ಒದ್ದಾಡ ಬೇಡ
ಬುದ್ದಿವಂತನಾದರೆ ನೀನು
ಕಾಲು ಜಾರದಂತೆ ನಡೆ
ಛಲವಂತನಾದರೆ ನೀನು
ಮತ್ತೇ ಜಾರದಂತೆ ತಡೆ
ಕಾಲು ಜಾರಿಸಲು
ಕಾದಿಹರು ನೂರು ಜನ
ಕಾಲೆತ್ತಿ ನಡೆಯಲು
ವರಪ್ರಸಾದದ ಮಜ್ಜನ
ಕಾಲು ಜಾರದಂತೆ
ದೇವನ ಕರಮುಗಿದು ಪ್ರಾರ್ಥಿಸು
ಕಾಲು ಜಾರಿದರೆ
ಮೊರೆಯಿಡು ಹೇಳುತ ಎನ್ನ ಮನ್ನಿಸು
ಗುರಿ ಮುಂದಿರಲಿ
ಜಾರುವ ಕಾಲ ನೋಡಬೇಡ
ಗುರು ಜೊತೆಗಿರಲಿ
ಬಿದ್ದರೂ ನಡೆಯಲೆದರಬೇಡ
– ಪೆದ್ದರಿಚ್ಚ
ಎಲ್ಲೆಲ್ಲೂ ಇರುವ ನನ್ನ ಓ ದೇವನೆ
ನನ್ನಲ್ಲಿ ನೀ ಎಲ್ಲಿರುವೆ?
ಕಣ ಕಣದಲೂ ಮಿನುಗುವ ಓ ಕರ್ತನೆ
ಮನದಲ್ಲಿ ನೀ ಹೇಗಿರುವೆ?
ಬೆಳಕಿನ ಕಿರಣದಲೂ ನೀ ಇರುವೆ
ನನ್ನಲ್ಲೇಕೆ ಈ ಕಪ್ಪು ಕತ್ತಲು?
ನಗುವ ಮೊಗದಲಿ ನಗುವಾಗಿರುವೆ
ನನ್ನಲ್ಲೇಕೆ ನೋವಿನ ಬಟ್ಟಲು?
ಸ್ನೇಹ ಪ್ರೀತಿಯಲಿ ನೀ ಇರುವೆ
ನನ್ನಲ್ಲೇಕೆ ಈ ಕಾಡುವ ವಿರಹ?
ನಿನ್ನ ಬಯಸಿ ಬಯಸಿ ಸೋತಿರುವೆ
ಕಾಣದೆ ನಿನ್ನ ಪ್ರೀತಿಯ ಬರಹ!
ಬೇರೇನೂ ಕೇಳೇನು ದೇವಾ
ಬೇರೇನೂ ಕೇಳೇನು
ನೀಡೆನಗೆ ದಯಮಾಡಿ
ನಿನ್ನರಿವ ಛಲದ ಜತೆಗೆ
ನಿನ್ನರಿವ ಬಲವ!
– ಪೆದ್ದರಿಚ್ಚ
ಬದಲಾಗುವುದು ಎಲ್ಲವೂ ಇಲ್ಲಿ
ಹೊಸ ತನಕೆ ಮಣೆ ಹಾಕುವುದು
ಬದಲಾಗದಿರೆ ಎಲ್ಲವೂ ಜಗದಲಿ
ಬೇಜಾರು ಮನೆ ಮಾಡುವುದು
ಬಾಲ್ಯವು ಬೇಗನೆ ಮರೆಯಾಗುತಲೆ
ಹದಿ ಹರೆಯವು ಚಿಗುರೊಡೆಯುವುದು
ಸುಂದರ ದಿನಗಳು ಕೊನೆಯಾಗುತಲಿ
ಯೌವನವು ಗರಿ ಬಿಚ್ಚುವುದು
ಮನೆಯಲಿ ಮನೆತನ ಬೆಳಗುವ ಬರದಲಿ
ದೇಹವು ಕುಗ್ಗಿ ಬಗ್ಗುವುದು
ಬದುಕುವ ಆಸೆ ಮಿಡಿಯುವ ಸಮಯದಿ
ಮರಣವು ಕದದಲಿ ಕಾಯುವುದು
ಅಗಲಿಕೆಯೊಂದು ಬರುವಿಕೆಗೆ
ಮರೆಯದೆ ನಾಂದಿ ಹಾಡುವುದು
ಒಂದರ ನಾಶವು ಮತ್ತೊಂದರ ಜನನಕೆ
ಒಡನೆಯೇ ದಾರಿ ಮಾಡುವುದು
– ಪೆದ್ದರಿಚ್ಚ
ನಗುವಿರಲಿ ಅಳುವಿರಲಿ
ಸೈರಣೆಯಿರಲಿ
ಮರೆಯಾಗುವುದು ಕಾಲದಲಿ
ನೋವಿರಲಿ ನಲಿವಿರಲಿ
ಸೈರಣೆಯಿರಲಿ
ಬದಲಾಗುವುದು ದಿನಗಳಲಿ
ಕಷ್ಟವಿರಲಿ ಸುಖವಿರಲಿ
ಸೈರಣೆಯಿರಲಿ
ಎಲ್ಲಾ ಸರಿಸಮ ಪ್ರೀತಿಯಲಿ
ಸಿಹಿಯಿರಲಿ ಕಹಿಯಿರಲಿ
ಸೈರಣೆಯಿರಲಿ
ನಗುವಿರಲಿ ಮೊಗದಲಿ
ಶೋಷಣೆಯಿರಲಿ ಶೋಧನೆಯಿರಲಿ
ಸೈರಣೆಯಿರಲಿ
ನಂಬಿಕೆಯಿರಲಿ ದೇವನಲಿ
ಸೈರಣೆಯಿರಲಿ ಸದಾ ನಿನ್ನಲಿ
ಏಕೆನೆ,
ಕತ್ತಲೆ ಬೆಳಕಾಗದಿರದು ಜಗದಲಿ
– ಪೆದ್ದರಿಚ್ಚ
ಮೋಡದಿ ಕರಗಿ
ಇಳಿಯುವ ಮಳೆಗೆ
ಬೀಳುವ ಭಯವೇಕೆ?
ಮುಂಗಾರಿನ ಹನಿಗೆ
ಹರಿಯುವ ನೀರಲಿ
ಸೇರುವ ಭಯವೇಕೆ?
ಸಾಗರ ಸೇರಲು
ಹರಿಯುವ ನದಿಗೆ
ಹರಿಯುವ ಭಯವೇಕೆ?
ಸೂರ್ಯನ ಕಾವಿಗೆ
ಏರುವ ಆವಿಗೆ
ಹಾರುವ ಭಯವೇಕೆ?
ಭುವಿಯೊಳ ಸೇರಿ
ಚಿಗುರುವ ಬೀಜಕೆ
ಕೊಳೆಯುವ ದಿಗಿಲೇಕೆ?
ತಾಯಿಯ ಗರ್ಭದಿ
ಬೆಳೆದಿಹ ಮಗುವಿಗೆ
ಜನನದ ದಿಗಿಲೇಕೆ?
ದೇವನ ಅಪ್ಪುಗೆ
ಪಡೆಯುವ ಆತ್ಮಕೆ
ಅಂತ್ಯದ ಭಯವೇಕೆ?
ದೇವನ ಆಸರೆ
ಅನುದಿನ ಇರಲು
ಸಾವಿನ ಭಯವೇಕೆ?
– ಪೆದ್ದರಿಚ್ಚ
ಸ್ವರ್ಗಕ್ಕೊಂದು ಪ್ರವೇಶ
ಸೂಪರ್ ಆಫರ್
ಬಂಪರ್ ಆಫರ್
ಸೀಮಿತ ಆಫರ್
ಎಲ್ಲರಿಗೂ ಸಾಧ್ಯ
ಎಲ್ಲೆಲ್ಲಿಯೂ ಸಾಧ್ಯ
ಒಂದೊಂದು ಪೈಸೆಯ
ಮೂರೇ ನಾಣ್ಯಗಳು!!!
ಆಫರ್ ಎಂದ ಕೂಡಲೆ
ಕಿವಿ ನಿಮಿರಿದವು
ಫುಡಾರಿಯೊಬ್ಬನ
ಜನಸೇವೆಯ ಆಸೆ ಗರಿಕೆದರಿತು…
ನನಗೆ ಮಾತ್ರವೇಕೆ
ಇಡೀ ಊರಿನ ಜನರ ವೆಚ್ಚವನು
ನಾ ಭರಿಸುವೆ…
ಆದರಲ್ಲಿ…
ಸ್ವರ್ಗದ ಬಾಗಿಲಿಗೆ
ಹಾಕಲೇ ಬೇಕು ಮೂರು ನಾಣ್ಯಗಳು…
ಅವರವರಿಗೆ ಅವರವರೇ ಭರಿಸಬೇಕು…
ಸ್ವರ್ಗದ ಆಸೆಯನ್ನು ಬಿಟ್ಟಿದ್ದ
ಬಡತನವನ್ನು, ಬಡವನನನ್ನು
ಅರಿಯದ ಸಿರಿವಂತನೊಬ್ಬ
ಆಫರ್ ಕೇಳಿ ಜಿಗಿದೆದ್ದ…
ದೊಡ್ಡ ನೋಟನ್ನು
ಹಿಡಿದು ಹೋದ
ಆದರಲ್ಲಿ….
ನೋಟುಗಳಿಗೆ ಬೆಲೆಯಿಲ್ಲ…
ನಾಣ್ಯಗಳ ಮಾರಟವಿಲ್ಲ…
ಚಿಲ್ಲರೆ ನೀಡುವ ಪರಿಯಿಲ್ಲ…
ಆಫರ್‌ನ ಸುದ್ದಿ
ಬುದ್ದಿವಂತನಿಗೆ ಬೇಗ ತಲುಪಿತು
ನೋಟಿನ ಸುದ್ದಿಯು ತಿಳಿಯಿತು
ಬುದ್ದಿಯೊಂದು ಹೊಳೆಯಿತು
ಕಾರ್ಡ್ ಬಳಸುವ ಯೋಚನೆ…
ಆದರಲ್ಲಿ…
ಕಾರ್ಡ್‌ಗೂ ಬೆಲೆಯಿಲ್ಲ…
ಹೋದ ದಾರಿಗೆ ಸುಂಕವಿಲ್ಲ…
ಸಾಧಾರಣ ಮಂದಿ
ನಾಣ್ಯ ಹರಸಿ ಹೊರಟರು
ನಾಣ್ಯಕ್ಕೆ ಬೆಲೆ ಕಟ್ಟಿದರು
ಬಿಕ್ಷುಕನಲ್ಲಿ ಬೇಡಿದರು
ಬಡವನನ್ನು ಹಿಡಿದು ಬಡಿದರು
ನಾಣ್ಯದ ಸುಳಿವಿಲ್ಲ
ಮೂರು ಕಾಸಿನ ನಾಣ್ಯವಿಲ್ಲದೆ
ಸ್ವರ್ಗದ ಬಾಗಿಲು ತೆರೆಯಲ್ಲ…
ಬಾಳೇ ಹಾಗೆ ಪೆದ್ದರಿಚ್ಚ
ಮೂರು ಕಾಸುಗಳು
ನೀನು ಸಾಗಿ ಬಂದ
ಬಾಲ್ಯದ ಮೂರು ವರ್ಷಗಳು!
ನಿನ್ನಲ್ಲಿನ ನೋಟು, ಕಾರ್ಡುಗಳು
ನಿನ್ನ ಈಗಿನ ವರ್ಷಗಳು!!!
ನೀನು ಬದಲಾಗದೇ
ಮತ್ತೇ ನೀನು ಮಗುವಿನಂತಾಗದೆ
ಸ್ವರ್ಗವನ್ನು ಸೇರಲಾರೆ…
ಮತ್ತೇ ಮಗುವಿನಂತಾದರೆ
ಸ್ವರ್ಗವನ್ನು ಸೇರದೆ ಇರಲಾರೆ….
ಜಗಕೊಬ್ಬನೇ ಅರಸ
ಆ ದೇವನೊಬ್ಬನೇ ಅರಸ
ನಾವೆಲ್ಲಾ ಆತನ ಸೇವಕರು…
ಆತನೊಬ್ಬನೇ ಅರಸ
ಜಗದ ಸೃಷ್ಠಿಕರ್ತ ಅವನು…
ಬೇರಾರು ಆಗನು ಅರಸ
ಎಲ್ಲರ ಪೊರೆವವನು ಅವನು…
ಎಲ್ಲವನ್ನು ಅರಿತ ಅರಸ
ಸಕಲ ವಲ್ಲಭ ಅವನು…
ಅರಸನಾಗುವ ಮೊದಲು
ಆತನ ದಾಸನಾಗು
ನಿನ್ನವರ ಆಳುವ ಮೊದಲು
ಆತನ ಆಳಾಗು
ರಾಜ್ಯ ವಿಸ್ತರಿಸುವ ಮೊದಲು
ಆತನ ಪರಿಧಿಯಲ್ಲಿರು
ಎಲ್ಲವ ಜಯಿಸುವ ಮೊದಲು
ಆತನ ಪ್ರೀತಿಯ ಜಯಿಸು
ಕೊಡುವ ಮೊದಲು
ಆತನಿಂದ ಪಡೆ
ಉಚಿತವಾಗಿ ಪಡೆದುದನು
ಉಚಿತವಾಗಿ ಕೊಡು
ಆಗ ಆ ಅರಸನ ಪ್ರತಿಬಿಂಬ
ನೀನಾಗುವೆ
ಆ ಅರಸನಂತೆ ನೀನಾಗುವೆ
ಎಲ್ಲವನ್ನು ಗಳಿಸಿ
ದೇವನ ಸಾಮ್ರಾಜ್ಯದಿಂದ
ಹೊರಬಿದ್ದರೆ ಏನು ಸುಖ ಪೆದ್ದರಿಚ್ಚ?
ಕೂಗುತಿದೆ ದನಿಯೊಂದು ಒಳಗಿನಿಂದ
ಕರೆಯುತಿದೆ ಒಂದಾಗಲು ಹುಟ್ಟಿದಾಗಿನಿಂದ
ತಡೆಯಲಾರೆ ಆ ಧನಿಯ
ಮರೆಯಲಾರೆ ಆ ಸ್ವರವ
ಅರಿಯಲಾಗದೆ ಪೇಚಾಡುತಿಹೆ
ಬರುತಿಹುದದು ಎಲ್ಲಿಂದ
ಸಂತನಾಗಬಲ್ಲೆನಂತೆ ನಾನು….
ಗದ್ದಲದ ಸಂತೆಯಲ್ಲಿ
ಮೌನದ ಸಂತನಾಗುತ
ದ್ವೇಷದ ಬಿರುಗಾಳಿಯಲ್ಲಿ
ಪ್ರೀತಿಯ ಹಿಬ್ಬನಿಯಾಗುತ
ಅನ್ಯಾಯದ ಸುಳಿಯಲ್ಲಿ
ನ್ಯಾಯದ ತಳಿಯಾಗುತ
ಸ್ವಾರ್ಥದ ಬೆಂಕಿಯಲ್ಲಿ
ತ್ಯಾಗದ ಮುಧ ನೀಡುತ…
ಕೂಗುತಿದೆ ದನಿಯೊಂದು ಒಳಗಿನಿಂದ
ಕರೆಯುತಿದೆ ಎನ್ನನು ಹುಟ್ಟಿದಾಗಿನಿಂದ
ನಾನೂ ಸಂತನಾಗಬಲ್ಲೆ!
ತಪಸ್ಸು ಮಾಡಬೇಕಿಲ್ಲ
ಮರದ ಕೆಳಗೆ ಕೂರಬೇಕಿಲ್ಲ
ಒಂದು ಕಾಲಲಿ ನಿಲ್ಲಬೇಕಿಲ್ಲ
ಮೊಣಕಾಲನು ಊರಬೇಕಿಲ್ಲ
ಹರಕೆಯ ಸರವು ಬೇಕಿಲ್ಲ
ಪೂಜೆಯ ನೆರವು ಬೇಕಿಲ್ಲ
ಗುಡಿಯಲಿ ಸೆರೆಯಾಗಬೇಕಿಲ್ಲ
ಎಲ್ಲರ ತೊರೆಯಬೇಕಿಲ್ಲ
ಹೃದಯದಲಿ ಪ್ರೇಮವಿರಲು
ನಗುವಿನಲಿ ನಲಿವಿರಲು
ಮನದಲಿ ಭರವಸೆಯಿರಲು
ಸಂತೆಯಲು ಸಂತನಾಗಬಲ್ಲೆ ಪೆದ್ದರಿಚ್ಚ!