ನೆರೆಯವನು

ಹುಡುಕಿ ಹೊರಟೆ ನೆರೆಯವನ
ಎಂದೂ ನೆರೆಯವನಾಗದೆ ಪರರಿಗೆ
ಹುಡುಕಿ ಹೊರಟೆ ಪಡೆಯಲು ನೆರವ
ಎಂದೂ ನೆರವ ನೀಡದೆ ಜನರಿಗೆ

ಅರಿತೆ ನಾ ಆಗ…
ಮೊದಲು ನೆರೆಯವನಾಗದೆ ಬಾಳಲಿ
ನೆರೆಯವನ ಕಾಣಲು ಇಹದಲಿ
ಆಗಸಕೆ ಏಣಿ ಹಾಕುವಷ್ಟು ಕಠಿಣ ಪೆದ್ದರಿಚ್ಚ.

ಕೊಚ್ಚೆ ನೀರು

ಕಾಮಲೆಯ ಕಣ್ಣಿಗೆ
ಎಲ್ಲವೂ ಹಳದಿಯಂತೆ
ಕೊಳಕು ತುಂಬಿದ ಹೃದಯಕ್ಕೆ
ಎಲ್ಲವೂ ಕೊಳಕಂತೆ
ಕೊಚ್ಚೆ ನೀರಲಿ ಈಜುವಾಗ
ಸಿಹಿ ನೀರನು ಕಾಣುವುದೇಗೆ ಪೆದ್ದರಿಚ್ಚ!

ತಪ್ಪಿನಲಿ ಸರಿ ಹೆಕ್ಕುವುದಕ್ಕಿಂತ
ಸರಿಯಲ್ಲಿ ತಪ್ಪನ್ನೇ ಹುಡುಕುವುದು
ಸುಟ್ಟರೂ ಹೋಗದ ನಮ್ಮ ಗುಣ
ತಪ್ಪಿನ ಗುಂಗಿನಲಿ ಮೆರೆದು ಸಾಗುತ
ಸತ್ಯದ ರಂಗನು ಅರಿಯ ಮರೆತರೆ
ನಾವಿನ್ನು ಬರೀ ಬದುಕಿರುವ ಹೆಣ

ಚಿನ್ನದ ತಟ್ಟೆಯಲ್ಲಿರುವ
ಭೊಗಸೆ ಕಹಿ ವಿಷಕ್ಕಿಂತ
ಮಣ್ಣಿನ ಕುಡಿಕೆಯಲ್ಲಿರುವ
ಒಂದನಿ ಸಿಹಿ ಅಮೃತ
ಒಳಿತಲ್ಲವೇ ಪೆದ್ದರಿಚ್ಚ!

ತಾಯಿ – ಪತ್ನಿ

ತಾಯಿಯೂ ಹೆಣ್ಣು
ಪತ್ನಿಯೂ ಹೆಣ್ಣು
ಆದರೆ ತಾಯಂತೆ ಕಣ್ಣು
ಪತ್ನಿ ತೊಡುವ ಗಾಜಿನ ಕಣ್ಣು
ವಯಸ್ಸಾದ ಕಣ್ಣಿಗೆ ಗಾಜಿಲ್ಲದೆ ಬಲವಿಲ್ಲ
ಗಾಜಿನ ಕಣ್ಣಿಗೆ ಕಣ್ಣಿಲ್ಲದೆ ಬೆಲೆಯಿಲ್ಲ

ಒಬ್ಬಳು ನೀಡಿದವಳು ತುತ್ತು
ಇನ್ನೊಬ್ಬಳು ಕೊಡುವವಳು ಮುತ್ತು
ಶ್ರೇಷ್ಟರಾರು ಅರಿಯಲು ಹೋದರೆ
ಬಾಳಿಗೆ ಬರುವುದು ಕುತ್ತು!

ಇಬ್ಬರು ತಾಯಿಯರೇ
ಒಬ್ಬಳು ಆತನಿಗೆ
ಇನ್ನೊಬ್ಬಳು ಆತನ ಮಕ್ಕಳಿಗೆ
ಇಬ್ಬರೂ ಸೊಸೆಯರೇ
ಒಬ್ಬಳು ಆತನ ಅಜ್ಜಿಗೆ
ಇನ್ನೊಬ್ಬಳು ತನ್ನ ತಾಯಿಗೆ
ಆದರೂ ಮುಗಿಯದ ಸಮರ
ಅವರವರ ಒಳಗೆ!

ತಮ್ಮೊಳಗಿರುವ ದೇವನ
ಅರಿತಾಗ ಬಾಳು ಪಾವನ
ಕಂಡಾಗ ಎಲ್ಲರಲಿ ಆತನ
ಆಗುವರು ಪ್ರೀತಿಯ ಸಾಧನ!
ದೇವನ ಈ ಚಿಂತನ
ಮುಗಿಸುವುದು ಈ ಕದನ!
-ಪೆದ್ದರಿಚ್ಚ

ಬೆಪ್ಪ

ದುಡ್ಡೆ ಎಂದರೆ ದೊಡ್ಡಪ್ಪ
ಆಗುವೆ ನೀ ದೊಡ್ಡ ಬೆಪ್ಪ
ಸಾಲದು ಸುರಿದರೆಷ್ಟೂ ಕಪ್ಪ
ಬಾಳಸಾಗರದಲಾಗದು ತೆಪ್ಪ!

ಗಂಧದಕಡ್ಡಿಯನು ಕೊಳ್ಳಬಹುದೇನೋ
ಆದರೆ ಭಕ್ತಿಯನ್ನೇಗೆ ಪಡೆಯಲಿ?
ಮೇಣದಬತ್ತಿಯನು ಕೊಳ್ಳಬಲ್ಲೆನೇನೋ
ಆದರೆ ಬೆಳಕನ್ನೇಗೆ ಕೇಳಲಿ?

ಹಾಸಿಗೆಯನ್ನು ಕೊಳ್ಳಬಹುದೇನೋ
ಆದರೆ ನಿದ್ದೇಗೇನು ಮಾಡಲಿ?
ನಗಲು ನಗನೀಡಿದರೆ ಟಿಕೆಟ್ ಉಂಟು
ಆದರೆ ಸಂತಸಕೆಲ್ಲಿಗೆ ಹೋಗಲಿ?

ನೂರು ಸೌಂದರ್ಯವರ್ಧಕಗಳು ಹಣಕೆ
ಆದರೆ ಸೌಂದರ್ಯ ಸಿಗದು ಮೊಗಕೆ!
ಸಾವಿರ ಪುಸ್ತಕಗಳಿವೆ ರೊಕ್ಕಕೆ
ಆದರೆ ವಿದ್ಯೆ ಹತ್ತದು ತಲೆಗೆ!

ಮನೆಯನ್ನೇನೋ ಕಟ್ಟಿದೆ ಹಣಬಲದಿ
ಆದರೆ ಮನಶಾಂತಿಗೇನು ಮಾಡಲಿ?
ಆಹಾರವನ್ನೇನೋ ಕೊಂಡೆ ಸಿರಿತನದಿ
ಆದರೆ ರುಚಿಯನ್ನೆಲ್ಲಿ ಕೊಳ್ಳಲಿ?

ದುಡ್ಡಾಗುವುದೇಗೆ ದೊಡ್ಡಪ್ಪ
ಅರಿತು ಆಗದಿರು ಮತ್ತೊಬ್ಬ ಬೆಪ್ಪ!
ನೀ ನೀಡುವ ಕಾಣಿಕೆಯ ಕಪ್ಪ
ಬಾಳ ಸಾಗರದಲಾಗದೆಂದೂ ತೆಪ್ಪ!
-ಪೆದ್ದರಿಚ್ಚ

ಪವಾಡ

ಪವಾಡಗಳಿಗಾಗಿ ಬಯಸಬೇಡ
ನಿನಗಿಂತ ದೊಡ್ಡ ಪವಾಡ ಇನ್ನೊಂದಿಲ್ಲ
ಪವಾಡಗಳ ನೋಡಲು ಬಯಸಬೇಡ
ನೀ ನೋಡುವುದೇ ದೊಡ್ಡ ಪವಾಡ
ಪವಾಡಗಳ ಕೇಳಲು ಹಂಬಲಿಸಬೇಡ
ನೀ ಕೇಳುವುದೇ ದೊಡ್ಡ ಪವಾಡ
ಪವಾಡದ ಸ್ಪರ್ಶಕ್ಕಾಗಿ ಹಾತೊರೆಯಬೇಡ
ಸ್ಪರ್ಶಸುಖವೇ ಒಂದು ಪವಾಡ
ಪವಾಡಗಳಿಗಾಗಿ ಬಯಸಬೇಡ ಪೆದ್ದರಿಚ್ಚ
ನಿನ್ನ ಬಯಕೆಯ ಶಕ್ತಿಯೇ ಒಂದು ಪವಾಡ!

ಕೊಳಕು

ಸಾಗರವೆಂದೂ ಕೊಳಕನು
ಒಳಗಿಟ್ಟುಕೊಳ್ಳುವುದಿಲ್ಲ ಅದುಮಿ
ಅಲೆಗಳಲ್ಲಿ ದಬ್ಬುವುದು ಹೊರಗೆ!
ಮಾನವ ಕೊಳೆತು ನಾರುವನು
ಅಡಗಿಸಿಟ್ಟುಕೊಂಡು ಒಳಗೆ
ಆತಂಕದ ಅಲೆಯಲಿ ದಬ್ಬಲಾಗದೆ ಹೊರಗೆ!

-ಪೆದ್ದ ರಿಚ್ಚ

ಮಹಾಯುದ್ಧ

ಮೂರನೆಯ ಮಹಾಯುದ್ಧ ನನ್ನೊಳಗೆ
ಅಂತ್ಯ ಕಾಣದ ಸಮರ ಪ್ರತಿ ಘಳಿಗೆ
ಈ ದೇಹ ಆತ್ಮದ ಸಮರದಲಿ
ಗೆಲುವಿನ ಭರವಸೆಯಿಲ್ಲ
ಸೋಲಿನ ನೆರಳಿಲ್ಲ
ಕಾಳಗದ ಸುಡು ಕಾವಲಿ
ಸೊರಗುತ್ತಿದೆ ವದನ!
ಯುದ್ಧ ಗೆಲ್ಲುವ ಆಸೆ
ಆದರೆ ಯಾವ ಪಕ್ಷ ಸೇರಲಿ?
ಇಬ್ಬರೂ ನನ್ನವರೇ!
ಇಬ್ಬರ ಗೆಲುವಿನಲೂ ನಲಿವಿದೆ!
ಎರಡೂ ಸೋಲಿನಲೂ ನೋವಿದೆ!
ವ್ಯತ್ಯಾಸ ಒಂದೇ….
ಅವುಗಳ ಕಾಲಾವಧಿ!
-ಪೆದ್ದ ರಿಚ್ಚ

ಕಾಯುವ ದೇವ

ಜಗವ ಕಾಯ್ವ ಸೃಷ್ಟಿಕರ್ತ
ಎನ್ನ ಕಾಯನೇ?
ಬೆಳಕ ನೀಡ್ವ ದಿವ್ಯ ದೇವ
ಬೆಳೆಯ ನೀಡನೆ?
ಉಸಿರ ನೀಡ್ವ ಜಗದ ಒಡೆಯ
ಜೀವ ನೀಡನೆ?
ಹಸಿವ ನೀಡ್ವ ಪೊರೆವ ದೈವ
ಅನ್ನ ನೀಡನೇ?
ತಲೆಯ ಒಳಗೆ ಮೆದುಳ ನೀಡಿ
ಬುದ್ದಿ ನೀಡನೇ?
ಎದೆಯ ಒಳಗೆ ಹೃದಯ ಕೊಟ್ಟು
ಪ್ರೀತಿ ನೀಡನೇ?

ಮನದಿ ನಿನ್ನ ನೆನಸು ಮನವೇ
ನಿರುತ ದೇವನ
ನೆನೆದ ಮನವ ನೆನೆದು ಕ್ಷಣದಿ
ಬರುವ ಆತನ
ನಂಬಿ ಬದುಕು ಅರಿತು ಅವನ
ಬಾಳು ಪಾವನ
-ಪೆದ್ದರಿಚ್ಚ

ಗುಟ್ಟು

ಗುಟ್ಟಾಗಿ ಏನೂ ಉಳಿಯದು
ರಟ್ಟಾಗದೆ ಏನು ಇರದು
ಒಳಿತಾಗಲಿ ಕೆಡುಕಾಗಲಿ
ಜನ ಜನರಿಗೂ ತಿಳಿವುದು.

ನಿನ್ನೆಯ ಗುಟ್ಟು ಇಂದು ಗುಟ್ಟಲ್ಲ
ಒಬ್ಬರ ಗುಟ್ಟು ಮತ್ತೊಬ್ಬರಿಗೆ ಗುಟ್ಟಲ್ಲ
ಪ್ರೀತಿಯ ಸುಳಿಯಲ್ಲಿ ಗುಟ್ಟಿನ ಅಲೆಯಿಲ್ಲ
ಗುಟ್ಟಿನ ಸುಳಿಯಲ್ಲಿ ಪ್ರೀತಿಗೆ ಬಲವಿಲ್ಲ.

ಗುಟ್ಟಿನಲಿ ಭಯವಿದೆ
ಪ್ರೀತಿಯಲಿ ಬಲವಿದೆ
ಮನಬಿಚ್ಚಿ ಹೇಳಿದೊಡೆ
ಮಿತಿಯಿಲ್ಲದ ಒಲವಿದೆ
-ಪೆದ್ದರಿಚ್ಚ

ಗೊಂದಲ

ಬುದ್ದಿ ಇರದವನಲ್ಲ ಮೂರ್ಖ…
ತನ್ನ ದೇವರ ಅರಿಯದವನು
ಕಣ್ಣು ಕಾಣದವನಲ್ಲ ಕುರುಡ…
ತನ್ನೊಳಗೆ ದೇವರ ಕಾಣದವನು.
ಕಿವಿ ಕೇಳದವನಲ್ಲ ಕಿವುಡ…
ದೇವರ ಸ್ವರವನ್ನು ಕೇಳದವನು.

ಗೆಲುವು ಗೆಲುವಲ್ಲ
ಆತನ ಅರಿಯುವ ತನಕ
ಸೋಲು ಸೋಲಲ್ಲ
ಆತ ಜೊತೆಗಿರುವ ತನಕ
ನೋವು ನೋವಲ್ಲ
ಆತನ ಒಲವಿರುವ ತನಕ
ನಲಿವು ನಲಿವಲ್ಲ
ಆತನಲಿ ಬೆರೆಯುವ ತನಕ
– ಪೆದ್ದರಿಚ್ಚ