ದೇವನದೇ ಎಲ್ಲ

ಸುಮಧುರ ಸರಿಗಮ ಕಲಿಯಬಲ್ಲೆ
ಕಂಠ ದೇವನ ಉಡುಗೊರೆ

ಸುಂದರ ಕೆತ್ತನೆ ಕಲಿಯಬಲ್ಲೆ
ಕರಗಳು ಕರ್ತನ ದೇಣಿಗೆ

ವೇಗದ ಓಟವ ಕಲಿಯಬಲ್ಲೆ
ಕಾಲುಗಳು ಸರ್ವಶಕ್ತನ ಕೊಡುಗೆ

ಹೃದಯ ಸ್ಪರ್ಶಿ ಬರಹ ಬರೆಯಬಲ್ಲೆ
ಪ್ರೇರಣೆ ಪ್ರೇರಕನ ವರದಾನ

ಮನಮುಟ್ಟುವ ಕವನಗಳ ಗೀಚಬಲ್ಲೆ
ಮನಸ್ಸು ಮನದಿನಿಯನ ಕಾಣಿಕೆ

ನವನವೀನ ವಸ್ತುಗಳ ಆವೀಷ್ಕರಿಸಬಲ್ಲೆ
ಕಣ ಕಣವೂ ಸೃಷ್ಟಿಕರ್ತನ ಅರ್ಪಣೆ.

ದೇವನಿಂದ ಬರದ ಹೊರತು ನನ್ನಲ್ಲೇನು ಇಲ್ಲ
ನನ್ನಲ್ಲಿರುವುದು ದೇವನದೇ ಎಲ್ಲ!
– ಪೆದ್ದರಿಚ್ಚ

ಕೊಳಕು

ಕಣ್ಣನು ಸೆಳೆಯುವ ಸುಂದರ ವದನ
ಉಸಿರು ಬಿಟ್ಟರೆ ಕದಲದ ಹೆಣ
ರುಚಿ ನೀಡುವ ಮೀನು ಮಾಂಸ ಅನ್ನ
ಅಳಸಿದರೆ ಕೊಳೆತು ನಾರುವ ಕಣ
ಜೀವವಿಲ್ಲದ ಹೆಣಕ್ಕೆ ಬಣ್ಣ ಬಳಿದರೆ
ಎದ್ದು ಕುಣಿಯದು
ಅಳಸಿದ ಅನ್ನಕೆ ಒಗ್ಗರಣೆ ಕೊಟ್ಟರೆ
ರುಚಿ ಪಡೆಯದು
ಕೊಳೆತು ನಾರುವ ಹೃದಯವ
ಬಚ್ಚಿಟ್ಟು ಒಳಗೆ
ಘಮ್ಮೆನ್ನುವ ಬಣ್ಣ ಬಳಿದು ಹೊರಗೆ
ಎಷ್ಟು ದಿನ ಬದುಕುವೆ ಪೆದ್ದರಿಚ್ಚ!

ಸಾಧಿಸು

ಹುಟ್ಟು ಸಾವಿನ ನಡುವಿನ ಜೀವನ
ಗುರಿ ಸಾಧಿಸಲು ಒಂದು ಪಣ
ಹಿರಿಯದಾಗಲಿ ಕಿರಿಯದಾಗಲಿ
ತೀರಿಸಬೇಕು ದೇವನ ಋಣ

ಹುಟ್ಟೆನಗೆ ದೇವನ ಉಡುಗೊರೆ
ಸಾಧನೆ ಆತ್ತನಿಗೆನ್ನ ಕಾಣಿಕೆ ಹೊರೆ
ಹಿರಿಯದಾಗಲಿ ಕಿರಿಯದಾಗಲಿ
ನನಗಿದೆ ಸಾಧಿಸಲು ಕರೆ

ಸಾಧಿಸದ ಜೀವನಕೆ ಎಲ್ಲೂ ಉಳಿವಿಲ್ಲ
ಗುರಿಕಂಡ ಜೀವನಕೆ ಇಲ್ಲೂ ಸಾವಿಲ್ಲ
ಹಿರಿಯದಾಗಲಿ ಕಿರಿಯದಾಗಲಿ
ಸಾಧಿಸದೆ ನಿನಗೆ ಬೆಲೆಯಿಲ್ಲ
– ಪೆದ್ದರಿಚ್ಚ

ಆಸರೆ

ಬಾಳಿನ ಕಡಲಲಿ ಸಾಗುವ ಎನಗೆ
ದೋಣಿಯ ಆಸರೆ
ಅಲೆಗಳ ಮೇಲೆ ತೇಲುವ ದೋಣಿಗೆ
ಹುಟ್ಟಿನ ಆಸರೆ
ದೋಣಿಯ ಮುಂದಕೆ ದೂಡುವ ಹುಟ್ಟಿಗೆ
ತೋಳಿನ ಆಸರೆ
ಹುಟ್ಟನು ಹಾಕುವ ತೋಳಿನ ರಟ್ಟೆಗೆ
ಮನಸ್ಸಿನ ಆಸರೆ
ಗೆಲುವನು ತುಂಬುವ ಮನಸಿನ ಆಳಕೆ
ದೇವನ ಆಸರೆ
-ಪೆದ್ದರಿಚ್ಚ

ಓ ಪ್ರೀತಿಯೇ

ಜೀವದ ಮೂಲವೇ
ಬಾಳಿನ ಸೆಲೆಯೇ
ಹೃದಯದ ಮಿಡಿತವೇ
ಕಣ್ಣಿನ ಸೆಳೆತವೇ…

ಕಿವುಡರ ದನಿಯೇ
ಕುರುಡರ ನೋಟವೇ
ಮೂಗರ ರಾಗವೇ
ಸರ್ವರ ಆಸೆಯೇ…

ಗೆಲುವಿಗೆ ಸ್ಪೂರ್ತಿಯೇ
ಸೋಲಿಗೆ ಶಮನವೇ
ಆತ್ಮಕೆ ಬಲವೇ
ದೇವನ ಒಲವೇ…

ಓ ಪ್ರೀತಿಯೇ ನಿನ್ನನೇ
ಅರಸುತಾ ಬರುವೆ
ಒಮ್ಮೆ ನೀ ಚುಂಬಿಸು
ನಿನ್ನಲೇ ಇರುವೆ…
-ಪೆದ್ದರಿಚ್ಚ

ಧರ್ಮ

ದೇವರು ಬೇಡವಾದರೂ
ಧರ್ಮ ಬೇಕು
ದೇವರನ್ನು ತಿಳಿಯದಿದ್ದರೂ
ಧಾರ್ಮಿಕತೆ ಬೇಕು
ಧರ್ಮದ ಆಳ ಅರಿಯದಿದ್ದರೂ
ಹೋರಾಟ ಬೇಕು
ಪರಿವರ್ತನೆ ಇಲ್ಲವಾದರೂ
ಧರ್ಮಗ್ರಂಥ ಬೇಕು
ಭಕ್ತಿಯ ಸವಿಯೇ ಇಲ್ಲದಿದ್ದರೂ
ದೇವಾಲಯ ಬೇಕು
ವಿಶ್ವಾಸದ ಸುಳಿವೇ ಕಾಣದಿದ್ದರೂ
ಬಾಹ್ಯ ಚಿಹ್ನೆ ಬೇಕು
ಓ ಪೆದ್ದರಿಚ್ಚ
ಮೊದಲು ಧರ್ಮವನ್ನು ತಿಳಿ
ನಂತರ ಪಾಲಿಸಲು ಕಲಿ
ಮತ್ತೆ ಕೃತ್ಯದಲಿ ಭೋದಿಸಿ ನಲಿ.

ಸಿಗದೇ ಏನು

ಸಿಗುವನೇ ದೇವನು!
ಸಿಗದೇ ಏನು…ಹುಡುಕಬೇಕಷ್ಟೇ…
ಕಾಣಲಾರೆವು ನಿಜ… ಆದರೆ
ಇರುವವನು ಅವನು…
ಮುಟ್ಟಲಾರೆವು ನಿಜ…ಆದರೆ
ಮಮಕಾರದ ಸೆಲೆ ಅವನು…
ಕೇಳಲಾರೆವು ನಿಜ…ಆದರೆ
ಮಾತಾನಾಡುವವನು ಅವನು…
ಸಿಗದೇ ಏನು…ಹುಡುಕಬೇಕಷ್ಟೇ!!!

ಹಸಿದಾಗ ಆಹಾರವನ್ನು
ಬಯಸುವುದಕ್ಕಿಂತ ಹೆಚ್ಚಾಗಿ
ದಾಹವಾದಾಗ ನೀರನ್ನು
ಅರಸುವುದಕ್ಕಿಂತ ಮಿಗಿಲಾಗಿ
ಉಸಿರುಗಟ್ಟುವಾಗ ಗಾಳಿಗಾಗಿ
ಹಾತೊರೆಯುವುದಕ್ಕಿಂತ ಮೇಲಾಗಿ
ಹುಡುಕುವೆನಾದರೆ…
ಸಿಗದೇ ಏನು…ಸಿಕ್ಕೇ ಸಿಗುವನು

ಅಡಗಿ ಕೂರನು ದೇವನು
ಕಣ್ಣು ಮುಚ್ಚಿದೆ ಕಾಣದು
ದೂರ ಹೋಗನು ಕರ್ತನು
ಕಿವಿಯು ಸೊರಗಿದೆ ಕೇಳದು
ಹುಡುಕಲಾರದೆ ದೇವನ
ಪ್ರತ್ಯಕ್ಷನಾಗನು ಅವನು
ಎಂದು ದೂರುವೆ ಏಕೆ ಪೆದ್ದರಿಚ್ಚ?

ಮಸಣದ ರಾಜ

ಮಸಣದ ರಾಜನು ಬೆಳೆಯುತಲಿಹನು
ತನ್ನಯ ರಾಜ್ಯವ ವಿಸ್ತರಿಸಿಹನು
ಎಲ್ಲೆಯ ಮೀರಿ ಕತ್ತಲ ನಾಡನು
ರಾಜಾರೋಷದಿ ಹರಡುತಲಿಹನು.

ಜೀವವ ಬಿಟ್ಟು ಎಲ್ಲವ ಆತನು
ಕರುಣೆಯ ತೋರದೆ ವಶಪಡಿಸಿಹನು
ಬಂಧಿಗೆ ತನ್ನ ಪ್ರಜೆಗಳ ಬಾಳನು
ಚಾಚು ತಪ್ಪದೆ ಕಲಿಸಿಹನು.

ಮಸಣದ ರಾಜನ ಆಳ್ವಿಕೆ ಅಡಿಯಲಿ
ಎಲ್ಲರು ಮೌನವ ತಾಳಿಹರು
ರೋಧನ ರಾಗದಿ ತನ್ಮಯರಾಗಿ
ನಗುವುದ ಶಾಶ್ವತ ಮರೆತಿಹರು.

ಮುಕ್ತಿಯ ಹೊಂದಲು ದಾರಿಯು ಒಂದಿದೆ
ನಗುವಿನ ಕಿಂಡಿಯು ತೆರೆದಿಹುದು
ಕಿಂಡಿಯ ಆಚೆಗೆ ಪ್ರೀತಿಯ ಮಾರ್ಗವು
ನಿನ್ನನು ಊರಿಗೆ ಒಯ್ಯುವುದು.
-ಪೆದ್ದರಿಚ್ಚ

ಆಟ

ಜೀವನ ಒಂದು ಪಂದ್ಯಾಟ
ಮೂವರ ನಡುವಿನ ಜೂಟಾಟ

ಸೋಲನು ಅರಿಯದ ದೇವನು ಮೇಲೆ
ಗೆಲುವನು ಕಾಣದ ಸೈತಾನ ಕೆಳಗೆ
ಸೋಲು ಗೆಲುವಿನ ಆಟದ ನಡುವಲಿ
ಆಡಲು ಅರಿಯದ ಮಾನವ ಜೊತೆಗೆ

ದೂರ್ತನು ನರನನು ಕಾಡುವನು
ದೇವನು ನರನನು ಹರಸುವನು
ದೂರ್ತನ ಅರಿಯದ ದುರ್ಬಲ ಮಾನವ
ಸೋಲನೆ ಗೆಲುವೆಂದು ನಂಬುವನು

ದೇವರ ಜೀವದ ಕುಡಿಯಿದೆ ನಿನ್ನಲಿ
ದೂರ್ತನ ಏಕೆ ಬಯಸುವೆ ನೀ
ನಿನ್ನಯ ಸೋಲಲಿ ಗೆಲುವಿದೆ ಅವನಲಿ
ದೇವರ ಏಕೆ ತೊರೆಯುವೆ ನೀ.

ನೀತಿಯ ಆಟವ ಆಡುವ ದೇವನ
ಜೊತೆಯಲಿ ಆಡು ಗೆಲ್ಲುವೆ ನೀ
ಮೋಸದ ಆಟವ ಆಡುವ ದೂರ್ತನ
ಬೆರೆತರೆ ಖಂಡಿತ ಸೋಲುವೆ ನೀ
– ಪೆದ್ದರಿಚ್ಚ

ತೋರ್ವ ಗುರು

ದೇವನಿಹನು ಜೊತೆಯಲಿ
ಕಾಣದಾದೆ ಬಾಳಲಿ
ಅಂಧಕಾರ ಎದೆಯಲಿ

ಮುಸುಕು ಎನ್ನ ಮೊಗದಲಿ
ನೂರು ಆಸೆ ಮನದಲಿ
ಬೆರೆತು ಹೋದೆ ಜಗದಲಿ

ಮಂಕು ಕವಿಯೇ ಅರಿವಲಿ
ದರ್ಪ ಬೆಳೆಯೇ ಗುಣದಲಿ
ಪರಮಾತ್ಮ ಸಿಗನು ಇಹದಲಿ

ಇರಲು ಗುರುವು ಎದುರಲಿ
ತೋರ್ವ ಬೆರಳ ನಗುತಲಿ
ದೇವನ್ ಅಪ್ಪಲ್ ತೋಳಲಿ

ದೇವನ್ ಅರಿತು ಹರಸಲಿ
ಶಿರವ ಬಾಗಿ ನಮಿಸಲಿ
ನೂರು ವರುಷ ಬಾಳಲಿ!
-ಪೆದ್ದರಿಚ್ಚ