
ಬರಬೇಡ ದೇವಾ
ಬಿಝಿಯಾಗಿಹೆ ನಾನು
ದೀಪವ ಹಚ್ಚುವೆನು ನಿನಗೆ
ಆ ಬೆಳಕ ನೋಡುತಾ
ಅಲ್ಲೇ ಇರು ನೀನು…
ಬರಬೇಡ ದೇವಾ
ಹಾಯಾಗಿರುವೆನು ನಾನು
ಧೂಪ ಹಚ್ಚುವೆನು ನಿನಗೆ
ಪರಿಮಳ ಸವಿದು
ಅಲ್ಲೇ ಇರು ನೀನು…
ಬರಬೇಡ ದೇವಾ
ಸುಖವಾಗಿರುವೆ ನಾನು
ಗುಡಿಯ ಕಟ್ಟುವೆ ನಿನಗೆ
ಸುಪ್ಪತ್ತಿಗೆಯಲಿ ಮಲಗಿ
ಅಲ್ಲೇ ಇರು ನೀನು…
ಬರಬೇಡ ದೇವಾ
ಎಲ್ಲಾ ತಿಳಿದಿಹೆನು ನಾನು
ಗೀತೆ ಹಾಡುವೆ ನಿನಗೆ
ಮಧುರ ಗಾಯನ ಕೇಳಿ
ಅಲ್ಲೇ ಮಲಗು ನೀನು…
-ಪೆದ್ದರಿಚ್ಚ








