
ಮಾನವ ನೀ ಮಲಗಿರು
ನೀ ಮಲಗಿದ್ದರೇ ಒಳಿತು
ನೀ ಎದ್ದರೆ ಧರೆಗಿಳಿದ ಸ್ವರ್ಗ
ಮರೆಯಾಗುವುದು
ಹೊನ್ನ ಬೆಳಕಿನ ಸೀರೆಯುಟ್ಟು
ಕಿಲಕಿಲನೆ ನಗುತ್ತಾ
ಮಧುಮಗಳಂತೆ
ಕುಣಿದು ಕುಪ್ಪಳಿಸುತ್ತಿದ್ದ ಭೂಮಿಯು
ಕಣ್ಣೀರಿಡುವಳು…
ಗೊರೆಕೆಯ ಸದ್ದಿದ್ದರೂ
ಪರ್ವಾಗಿಲ್ಲ ಮಲಗಿಯೇ ಇರು!
ಹಗೆ ಸಾರುವ ನಿನ್ನ ನುಡಿಗಳು
ನಿನ್ನ ಬಾಯಿಯಿಂದ ಹೊರಬೀಳುತ್ತಲೇ
ಸೃಷ್ಟಿಕರ್ತ ದೇವನ
ಸ್ತುತಿಸಿ ಹಾಡುವ ಹಕ್ಕಿಗಳ
ರಸಮಂಜರಿ ತೆರೆಕಾಣುತ್ತದೆ…
ತಡವಾದರೂ ಅಡ್ಡಿಯಿಲ್ಲ
ಮಲಗಿಯೇ ಇರು!
ನಿನ್ನ ವಕ್ರ ದೃಷ್ಟಿಯ ಕಣ್ಣಿನ ಕಾಂತಿ
ಬೆಳಕಿನ ಕಿರಣಗಳ ಸೇರುತ್ತಲೇ
ದೇವನ ನಗುವಲಿ
ತಮ್ಮ ನಗುವನು ಬೆರೆಸಲು
ಅರಳಿದ ಹೂವುಗಳು
ನಾಚಿ ಬಾಡುವುವು…
ನೀನು ನಿದ್ದೆಯಲಿದ್ದು
ನಿಷ್ಕ್ರಿಯನಾಗಿದ್ದರೂ ತೊಂದರೆಯಿಲ್ಲ
ಮಲಗಿಯೇ ಇರು!
ಕೇಡನ್ನೇ ಹರಸಿ ಸಾಗುವ ನಿನ್ನ
ಪಾದಗಳು ನೆಲವನ್ನು ಸ್ಪರ್ಶಿಸುತ್ತಲೇ
ಪ್ರೀತಿಯಿಂದ ತಂಪೆರವ ಗಾಳಿಯ
ಮೈಯೂ ಬಿಸಿಯಾಗುತ್ತದೆ…
ಏಳುವುದಾದರೆ ಎದ್ದೇಳು
ಮಗುವಿನಂತೆ ಎದ್ದೇಳು
ನಿನ್ನ ಮುಗ್ದ ಮೊಗದಿ
ಇಳೆಯ ಸ್ವರ್ಗದಲಿ
ದೂತನ ಆಗಮನವಾಗಲಿ!
ನಿನ್ನ ಮಧುರ ನುಡಿ
ಹಕ್ಕಿಗಳ ರಸಮಂಜರಿಯಲಿ
ಒಂದು ಸ್ವರವಾಗಲಿ!
ನಿನ್ನ ಪ್ರೀತಿಯ ಕಣ್ಣ ಕಾಂತಿ
ಅರುಳುವ ಹೂಗಳಲಿ
ಹೊಳೆಯುವ ಹೂವಾಗಲಿ!
ನಿನ್ನ ಕೋಮಲ ಪಾದ ಸ್ಪರ್ಶ
ಮುಧ ನೀಡುವ ಗಾಳಿಯಲಿ
ಎಲ್ಲರ ಚುಂಬಿಸಲಿ!
ನಿನ್ನಿಂದ ಈ ಧರೆ ಸ್ವರ್ಗವಾಗಲಿ
ಮಧುಮಗಳಂತೆ ದಿನ ಶೋಭಿಸಲಿ…
-ಪೆದ್ದರಿಚ್ಚ








