ಪದಗಳು

ಪದಗಳಿಲ್ಲ ಮಗುವಿನ ಅಳುವಲಿ
ತಾಯಿ ಅದರ ನೋವ ಅರಿವಳು
ಪದಗಳಿಲ್ಲ ಮಗುವಿನ ನಗುವಲಿ
ಜನರು ಅದರ ನಲಿವನು ಅರಿವರು.
ಪದಗಳಿಲ್ಲ ನೀರವ ಮೌನದಲಿ
ಕೆಲವರು ಅದರ ಮರ್ಮವ ತಿಳಿವರು
ಪದಗಳಿಲ್ಲ ಮಧುರ ರಾಗದಲಿ
ಹಲವರು ಅದರ ಮುಧದಿ ನಲಿವರು
ಪದಗಳಿಲ್ಲ ಸುಂದರ ಚಿತ್ರಗಳಲಿ
ಇತಿಹಾಸವನೇ ಅದರಲಿ ಕಲಿವರು
ಪದಗಳಿಲ್ಲ ಸೆಳೆವ ನೋಟದಲಿ
ಪ್ರೇಮಿ ಪ್ರೀತಿಯ ಮೀಯುವನು
ಪದಗಳಿಲ್ಲ ಚೀರುವ ಕೂಗಿನಲಿ
ಕೇಳಿ ಭಯದಿ ಮಿಡಿವರು

ಪದಗಳ ಬಳಸುವ ನೀನೇ
ಪದಗಳಿಲ್ಲದ ಭಾಷೆ ಅರಿಯುವಾಗ
ಪದಗಳಿಲ್ಲದೆ ಅರಿವ ದೇವನಿಗೆ
ನಿನ್ನ ಪ್ರಾರ್ಥನೆಯಲಿ
ಪದಗಳ ಹಾರವನ್ನೇಕೆ
ಹಾಕುವೆ ಪೆದ್ದರಿಚ್ಚ?

ಸ್ವರ್ಗದ ಏಣಿ

ಸ್ವರ್ಗದಿಂದ ಏಣಿಯೊಂದ
ಭುವಿಗೆ ದೇವ ಬಿಟ್ಟನು
ಹತ್ತಿ ಇಳಿಯಲು ಅದರಲಿ
ವರವ ಜನಕೆ ಕೊಟ್ಟನು
ಭುವಿಗೆ ಬಂದ ದೇವನು
ಇಳಿದು ಏಣಿಯ ಮೆಟ್ಟಿಲು
ಸ್ವರ್ಗ ಜನರಿಗೆ ಏರಲು
ಅದನು ಬಿಟ್ಟು ಹೋದನು.
ದೂತ ಸಂತ ಗಣಗಳು
ಏಣಿ ಹತ್ತಿ ಇಳಿವರು
ಬೆನ್ನು ತಟ್ಟಿ ನೀಡಲು
ಸ್ವರ್ಗ ಸೇರುವ ಕರೆಯನು.
ಅಂತರಂಗದ ಕಣ್ಣಲಿ
ಏಣಿ ಕಂಡರು ಕೆಲವರು
ನಂಬಲಾಗದ ಮೊಂಡರು
ಕಾಣದೆ ಆದರು ಕುರುಡರು.

ಸ್ವರ್ಗಕೆ ಏರುವ ಏಣಿಗೆ
ಕೆಲವೇ ಕೆಲವು ಮೆಟ್ಟಿಲು
ಏರಿ ಹೋಗೋ ಜೀವಕೆ
ಇಹುದು ಸ್ವರ್ಗ ತೊಟ್ಟಿಲು.

ಹಸಿದ ಬಡವರ ಹೊಟ್ಟೆಗೆ
ಅನ್ನ ನೀಡಲು ಕಾಣುವೆ
ಭವ್ಯ ಸ್ವರ್ಗ ಸೇರಲು
ಏರ‍್ವೆ ಮೊದಲ ಮೆಟ್ಟಿಲು.

ದಾಹ ಇರುವ ಜೀವಕೆ
ನೀರ ಎರೆಯಲು ಕಾಣುವೆ
ಪರಂಧಾಮವ ಸೇರಲು
ಏರ‍್ವೆ ದ್ವಿತೀಯ ಮೆಟ್ಟಿಲು

ದಾರಿ ಕಾಣದ ಬಡವಗೆ
ಆಶ್ರಯವ ನೀಡಲು
ದೈವ ಸನ್ನಿಧಿ ಸೇರಲು
ಏರ‍್ವೆ ಮೂರನೆ ಮೆಟ್ಟಿಲು

ಮಾನ ಮುಚ್ಚಲು ದೇಹಕೆ
ಉಡಲು ಬಟ್ಟೆಯ ಕೊಟ್ಟರೆ
ದೇವರಾಜ್ಯವ ತಲುಪಲು
ಏರ‍್ವೆ ನಾಲ್ಕನೆ ಮೆಟ್ಟಿಲು.

ನೋವ ನುಂಗುವ ರೋಗಿಗೆ
ಆರೈಕೆ ಪ್ರೀತಿಯ ನೀಡಲು
ದೇವ ಲೋಕವ ಸೇರಲು
ಏರ‍್ವೆ ಐದನೆ ಮೆಟ್ಟಿಲು.

ಬಂಧಿಯಾದ ಜನರನು
ಕಂಡು ಸಾಂತ್ವನ ನೀಡಲು
ಪ್ರೀತಿ ಅರಮನೆ ಸೇರಲು
ಏರ‍್ವೆ ಆರನೆ ಮೆಟ್ಟಿಲು.

ಸಾವನಪ್ಪಿದ ಜನರಿಗೆ
ಅಂತ್ಯ ಕ್ರಿಯೆಯನು ಮಾಡಲು
ಸರಗ ತಲುಪುವ ಏಣಿಯ
ಏರ‍್ವೆ ಏಳನೆ ಮೆಟ್ಟಿಲು.

ಬನ್ನಿ ಮಿತ್ರರೇ ನೋಡುವ
ಸ್ವರ್ಗಕೇರುವ ಏಣಿಯ
ದೇವ ಲೋಕವ ಸೇರುವ
ಏರಿ ಏಣಿಯ ಮೆಟ್ಟಿಲ.

-ಪೆದ್ದರಿಚ್ಚ

ಮೂರು ಶೋಧನೆಗಳು

ಬಾಳು ಮೂರೇ ದಿನವಾದರು
ಶೋಧನೆಗಳು ನೂರು
ಪರವಾಗಿಲ್ಲ ಕಿತ್ತು ತಿಂದರೂ
ಸುಲಭವಾಗಿರಬೇಕು ಬಾಳು
ಕೇಡಿಗನ ಯುಕ್ತಿ ತಿಳಿದಿದ್ದರೂ
ಬಲೆಗೆ ಬೀಳದವರು ಯಾರು!
ಬೇಡವೆನ್ನಲೂ ಮನಸ್ಸಾದರೂ
ಶೋಧನೆಯ ಗೆಲ್ಲುವವರು ಯಾರು!

ಕೈ ಕೆಸರಾದರೆ ಬಾಯಿ ಮೊಸರು
ಎಂದು ಹೇಳಿದರು ಹಿರಿಯರು
ದುಡ್ಡಿದೆ ಯೋಗುರ್ಟ್ ತಿನ್ನುವೆ
ಎಂದರು ಮೊಸರರಿಯದ ಕಿರಿಯರು.
ಧರೆಯಲಿ ಬೆವರ ಸುರಿಸಿದರು
ಚಿನ್ನ ಬೆಳೆಯಲು ಹಿರಿಯರು
ಬೆವರೇಕೆ ಸುರಿಸಬೇಕು ಎಂದರು
ಎ.ಸಿ. ಯಲ್ಲಿ ಕುಳಿತ ಯುವಕರು.

ಸತ್ಯಕ್ಕೆ ಸಾವಿಲ್ಲ ಎಂಬ ಸತ್ಯಕೆ
ಅಪಘಾತವಾಗಿದೆ ಎಡವಿ ಅಧಿಕಾರದ ದಾಹಕೆ
ಸಿರಿವಂತನಾರು ಬಡವನಾರು ಅರಿಯದಾಗಿದೆ
ಮಾತಾಡದ ಕರಡು ಪತ್ರಕೆ
ಸತ್ಯಕೆ ಜೀವಾವದಿ ಶಿಕ್ಷೆ ಸಿಕ್ಕಿದೆ
ಅಧಿಕಾರದ ಮೋಸವ ತಿಳಿಯದೆ.

ನಾಳೆಯ ಅರಿಯುವ ಸಲ್ಲದ ಯೋಚನೆ
ಕೊರೆದಿದೆ ಬಾಳಲಿ ಜಾದು ಕಲ್ಪನೆ
ಸುಲಭದಿ ಲಾಟರಿ ಗಳಿಸುವ ವರ್ತನೆ
ಹುಡುಕಿದೆ ಬಾಳಿಗೆ ಜಾತಕ ಯೋಜನೆ
ಜಾದು ಜಾತಕ ಮಾಡವು ಅರಿಯದೆ
ಕಾಣದ ಸುಂದರ ನಾಳಿನ ಸ್ಥಾಪನೆ.
-ಪೆದ್ದರಿಚ್ಚ

ಬದಲಾಗು

ಬದಲಾಗಬೇಕು ಇಂದಲ್ಲಾ ನಾಳೆ
ತೊಳೆದು ಒಳಗಿರುವ ಪಾಪದ ಕೊಳೆ
ಹರಿಯುವುದು ಆಗ ಪ್ರೀತಿಯ ಹೊಳೆ
ಸುರಿಯುವುದು ಆಗ ದಿವ್ಯ ಸುರಿಮಳೆ.

ಬದಲಾಗಬೇಕು ನೋಡುವ ರೀತಿ
ಉಕ್ಕಿ ಹರಿಯಬೇಕು ಕಣ್ಣಲಿ ಪ್ರೀತಿ
ತೊಲಗಬೇಕು ಬದಲಾಗುವ ಭೀತಿ
ಬೇಕಾದರೆ ಮನದಿ ಶಾಂತಿ ಪ್ರೀತಿ.

ಬದಲಾದರೆ ನಿನಗೆ ಹೊಸತನದ ನಲಿವು
ಅಚಲನಾದರೆ ಕೊನೆಗೆ ನಿಸ್ಸಾರ ನೋವು
ನೆಲೆನಿಂತ ಹೆಜ್ಜೆಗೆ ಬರದೆಂದೂ ಗೆಲುವು
ಅಲ್ಲಾಡದ ಗೆಜ್ಜೆಗೆ ಸಿಗದೆಂದೂ ಒಲವು.

ಬದಲಾಗಲು ನೀನು ಕಾಯುವೆ ಏಕೆ
ಸಮಯ ನಿಲ್ಲದು ಮರೆಯದಿರು ಜೋಕೆ
ಕೊರಗಿ ಜಾರದಿರು ಬಾಳಿನಲಿ ಹಿಂದಕೆ
ಬದಲಾಗಿ ಸಾಗುತಿರು ಸಂತಸದಿ ಮುಂದಕೆ.
-ಪೆದ್ದರಿಚ್ಚ.

ಉಪವಾಸ

ಮಾಡಬೇಕು ಆಗಾಗ ಉಪವಾಸ
ಅರಿಯಲು ನಿನ್ನಲಿ ಹಸಿವಿನ ಭಾಸ
ತಿಳಿಯಲು ನಿನ್ನಲಿ ದೇವನ ವಾಸ
ಕಟ್ಟಲು ನಿನ್ನಲಿ ದೇವನಿಗೆ ನಿವಾಸ

ಉಪವಾಸದ ಬಗೆಗಳು ನೂರು
ಬಿಡುವುದಲ್ಲ ಕೇವಲ ಅನ್ನ ನೀರು
ಸಮಯ ಬದಿಗಿಡಲು ಕಾರುಬಾರು
ಕಾಣಲು ನಿನ್ನಲಿ ಪ್ರೀತಿಯ ಸೂರು

ಉಪವಾಸ ಒಂದು ಅವಕಾಶ
ತಡೆಯಲು ನಿನ್ನ ಶೀಘ್ರ ವಿನಾಶ
ಮೌನದಿ ಓದಲು ದೇವರ ಕೋಶ
ಮರಳಿ ಪಡೆಯಲು ಸ್ವರ್ಗ ಪ್ರವೇಶ.

ಉಪವಾಸ ಸೂಪರ್ ಸಾಧನ
ಅರಿಯಲು ಉಳಿಸದೆಮ್ಮನು ಧನ
ಕರವೆತ್ತಿ ನೀಡುತ ಸ್ವಲ್ಪ ದಾನ
ಪಡೆಯಲು ದೇವರ ವರದಾನ.
-ಪೆದ್ದರಿಚ್ಚ

ಬೊಗಸೆ

ಬೊಗಸೆಯಷ್ಟು ಛಲ ಮನದೊಳಗೆ
ಬೊಗಸೆಯಲಿ ಹಿಡಿಯದಷ್ಟು ಗಳಿಸಲು
ಎರಡೂ ಕರಗಳಲಿ ತುಂಬಿದ ಘಳಿಗೆ
ಅರಿತೆ ನನ್ನೊಳಗೆ ನಾನಿಲ್ಲ ಬಾಳಲು.

ಸುಂದರವಾದುದ ಕಂಡಷ್ಟೂ ಬಾಚಿಕೊಂಡೆ
ಮನದೊಳಗಿನ ಆಸೆ ನೀಗಲು
ನೋಡಿದಷ್ಟು ಇನ್ನೂ ತಿಳಿದುಕೊಂಡೆ
ಮರೆತಿರುವೆ ನನ್ನನೇ ಕಾಣಲು.

ನನ್ನ ನಾಳೆಗೆ ಹೆದರಿ ಗಳಿಸಿರುವೆ
ಸುಖವಾಗಿ ಮುಂದೆ ಬಾಳಲು
ನಾಳೆಯ ಅರಸುತಾ ಸೋತಿರುವೆ
ಇಂದಿನ ದಿನವನು ಸವಿಯಲು.

ದರ್ಜಿ ಹೊಲಿಯಬಲ್ಲನು ಉಡುಪು ನೂರು
ದೇಹಕೆ ಸೊಬಗನು ನೀಡಲು
ಬೆತ್ತಲೆ ಸಾಗಬೇಕು ನೀನು ತಿಳಿದಿರು
ಬಾಳ ಯಾತ್ರೆಯು ಮುಗಿಯಲು
-ಪೆದ್ದರಿಚ್ಚ

ಸಾಗರ – ನದಿ

ಸಾಗರ ನಾನು ನದಿಯು ನೀನು
ನೀ ಸೇರಬೇಕು ನನ್ನನು
ನನ್ನಿಂದ ಹೊರಟವಳು ನೀನು.

ಇಳಿಜಾರಿನಲ್ಲಿ ನೀ ಎಂದೂ ಹರಿಯಬೇಕು
ಹರಿಯುತಿರಬೇಕು
ಇಂದಲ್ಲ ನಾಳೆ ನೀ ನನ್ನ ಸೇರಬೇಕು.

ಕಾಣುವುವು ನೂರು ಹಸಿರು ಬೆಟ್ಟಗುಡ್ಡಗಳು
ಆಗದು ನೆಲೆಯೂರಲು
ಬರಲೇ ಬೇಕು ನೀನು ನನ್ನ ಸೇರಲು.

ಜಾರಬಲ್ಲೆ ನೀನು ಹಾಲಂತೆ ಜಲಪಾತದಲಿ
ದರ್ಪದ ಅಬ್ಬರದಲಿ
ಹರಿದು ಒಂದಾಗಲೇ ಬೇಕು ನನ್ನ ಅಪ್ಪುಗೆಯಲಿ.

ದೇವರೆಂದು ನಿನ್ನ ಹೊಗಳುವರು ಜನರು
ಮೈಮರೆಯದಿರು
ನಿನ್ನ ಮನೆಯ ನೀ ಸೇರದೆ ಇರದಿರು.

ಶಾಶ್ವತವಾದ ನೆಲೆಯು ಸಿಗದೆಲ್ಲೂ ನಿನಗೆ
ಸಾಗುತಿರು ಮುಂದಕೆ
ಕಾಯುತಿರುವೆ ಬಾ ನಿನ್ನೀ ಮನೆಗೆ.

ಹರಿವಿದೆ ನಿನಗೆ ಹರಿಯುತಿರು ಮೆಲ್ಲಗೆ
ಅಳದಿರು ದಾರಿ ತಪ್ಪಿದರೆ
ಸೆಳೆತವಿದೆ ನಿನ್ನಲಿ ಬಾ ನಿನ್ನ ಗುಡಿಗೆ.
– ಪೆದ್ದರಿಚ್ಚ

ಏಕೆ?

ಮಿಡಿಯದ ಮೂರ್ತಿಯ ಪ್ರೀತಿಯ ಬಯಸುತ
ಮಿಡಿಯುವ ಹೃದಯವ ತೊರೆಯುವೆ ಏಕೆ?
ನುಡಿಯದ ಮೂರ್ತಿಯ ಆಲಿಸೋ ಭರದಲಿ
ನುಡಿಯುವ ತುಟಿಗಳ ಮರೆಯುವೆ ಏಕೆ?

ಹಸಿವೆಯೇ ಅರಿಯದ ಮೂರ್ತಿಗೆ ಬಡಿಸುತಾ
ಹಸಿವಿನ ಕೂಗಿಗೆ ಉಣಿಸುವೆ ಏಕೆ?
ದಾಯವೇ ಇಲ್ಲದ ಕಲ್ಲಿಗೆ ಕುಡಿಸುತಾ
ದಾಹದ ಗಂಟಲ ಉರಿಸುವೆ ಏಕೆ?

ಏನನೂ ನೋಡದ ಕಲ್ಲಿಗೆ ನಮಿಸುತಾ
ನೋಡುವ ಪರರನು ತ್ಯಜಿಸುವೆ ಏಕೆ?
ಏನನೂ ಪಡೆಯದ ಪ್ರತಿಮೆಗೆ ನೀಡುತಾ
ಬೇಡುವ ಬಡವನ ಅಳಿಸುವೆ ಏಕೆ?

ಗಾಯನ ಕೇಳದ ಮೂರ್ತಿಗೆ ಹಾಡುತಾ
ಕೇಳುವ ಕಿವಿಗಳ ತಡೆಯುವೆ ಏಕೆ?
ಸ್ಪಂದನೆ ಅರಿಯದ ಪ್ರತಿಮೆಯ ಬೇಡುತಾ
ಸ್ಪಂದಿಸೋ ಪರರನು ಬಡಿಯುವೆ ಏಕೆ?

ನಿನ್ನಯ ದೇವನ ನಿನ್ನಯ ಪರರಲಿ
ಬಾಳಲಿ ಕಾಣಲು ಹೆಣಗುವೆ ಏಕೆ?
ನಗುವನು ಕಾಣದೆ ಎಲ್ಲರ ಮೊಗದಲಿ
ಸ್ವರ್ಗವು ಸಿಗದು ತಿಳಿಯದು ಏಕೆ?
– ಪೆದ್ದರಿಚ್ಚ

ಆಸೆ ಪಂಜರ

ಆಸೆ ಮನದಿ ಎನ್ನ ನೂರು
ಅಗೋ ಬೆಟ್ಟದಷ್ಟು ದೂರ
ಹೆಜ್ಜೆ ಹಾಕಿ ಅತ್ತ ಹೋಗಲು
ಸೋಮಾರಿತನದ ಮೈಯಿ ಭಾರ.

ರವಿಯ ಬೆಳಕನು ನಾನು ಕಾಣಲು
ಆಸೆ, ಸೇರಲು ಗೆಲುವ ತೀರ
ಎದ್ದು ಸಾಗಲು ಎನಗೆ ಆಗದು
ಕಳೆದುಕೊಂಡಿಹೆ ಬಾಳ ಸಾರ.

ಸೃಷ್ಟಿ ಕರ್ತನ ನಾನು ಸೇರಲು
ಅಡ್ಡಿ ಎನಗೆ ಆಸೆ ಪಂಜರ
ಸೆರೆಯ ಗೋಡೆ ಎನಗೆ ಕಲಿಸದು
ಬಾಳ ಹಾದಿಯ ಮುದ್ದು ಅಕ್ಷರ.

ಓ ದೇವನೆ ಬಿಡಿಸ ಕಲಿಸು
ಗಂಟು ಬಿದ್ದಿಹ ಆಸೆ ದಾರ
ನಿನ್ನ ಆಸೆಯ ಮತ್ತೇ ಚಿಗುರಿಸು
ಸುರಿಸಿ ಮನದಿ ವರದ ಗೊಬ್ಬರ.
– ಪೆದ್ದರಿಚ್ಚ

ಮಾತು

ಮಾತಿನಲಿ ಮುತ್ತಿದೆ
ಮಾತಿನಲಿ ಮತ್ತಿದೆ
ಮಾತಿನಲಿ ಪ್ರೀತಿಯಿರಲು
ಬಾಳಿಗೊಂದು ಗತ್ತಿದೆ.

ಮಾತಿನಲಿ ಬಲವಿದೆ
ಮಾತಿನಲಿ ಛಲವಿದೆ
ಮಾತಿಗೊಂದು ಮೂಲವಿರಲು
ಬಾಳಿಗೊಂದು ಫಲವಿದೆ.

ಮಾತಿನಲಿ ನಲಿವಿದೆ
ಮಾತಿನಲಿ ಒಲವಿದೆ
ಮಾತುಗಳು ಕೆಲವಿರಲು
ಬಾಳಿಗೊಂದು ಗೆಲುವಿದೆ.

ಮಾತಿನಲಿ ಸಿಹಿ ಇದೆ
ಮಾತಿನಲಿ ಕಹಿ ಇದೆ
ಮಾತಿನಲಿ ಸ್ನೇಹಿಯಿರಲು
ಬಾಳಿಗೊಂದು ಸಹಿ ಇದೆ.

ಮಾತಿನಲಿ ಗುಣವಿದೆ
ಮಾತಿನಲಿ ಪಣವಿದೆ
ಮಾತಿನಲಿ ಪ್ರಾಣಯಿರಲು
ಬಾಳಿಗೊಂದು ಋಣವಿದೆ.

ಮಾತಿನಲಿ ಅಲೆಯಿದೆ
ಮಾತಿನಲಿ ಸೆಲೆಯಿದೆ
ಮಾತಿನಲಿ ಕಲೆಯಿರಲು
ಬಾಳಿನಲಿ ಬೆಲೆಯಿದೆ.

ಮಾತಿನಲಿ ಅರಿವಿದೆ
ಮಾತಿನಲಿ ತಿರುವಿದೆ
ಮಾತಿಗೊಂದು ಗುರಿಯಿರಲು
ಬಾಳಿನಲಿ ಹರಿವಿದೆ.

ಮಾತಿನಲಿ ಪ್ರೀತಿಯಿದೆ
ಮಾತಿನಲಿ ನೀತಿಯಿದೆ
ಮಾತಿನಲಿ ಮಿತಿಯಿರಲು
ಬಾಳಿನಲಿ ಶಾಂತಿಯಿದೆ.

ಮಾತಿನಲಿ ತೇವವಿದೆ
ಮಾತಿನಲಿ ಭಾವವಿದೆ
ಮಾತಿನಲಿ ದೇವನಿರಲು
ಬಾಳಿನಲಿ ಜೀವವಿದೆ.
-ಪೆದ್ದರಿಚ್ಚ