ಬಾಡಿಗೆ ಮನೆ

ಮೂರೇ ದಿನದ ಜಗದ ಈ ಬಾಳಲಿ
ಬಾಡಿಗೆ ಮನೆಯಲಿ ಎನ್ನಯ ವಾಸ
ಎರವಲು ಪಡೆದಿಹೆ ನನ್ನಯ ದೇಹವ
ನೀಡಲು ಆತ್ಮಕೆ ಪುಟ್ಟ ನಿವಾಸ.

ಆತ್ಮದ ಒಡೆಯನೇ ಕಳುಹಿಸಿಹನೆನ್ನನು
ಬಾಡಿಗೆ ಮನೆಯನು ನೀಡುತ ಎನಗೆ
ಖಂಡಿತವಾಗಿಯೂ ಬಾಡಿಗೆ ಕೇಳ್ವನು
ಮರಳಲು ಆತ್ಮವು ಶಾಶ್ವತ ಮನೆಗೆ.

ಬಾಡಿಗೆ ಮನೆಯು ಚೆಂದವೇ ಆದರೂ
ಎಂದಿಗೂ ಆಗೆನು ಒಡೆಯನು ನಾನು
ಆತ್ಮಕೆ ಅರಮನೆ ಸ್ವರ್ಗದಿ ಇರಲು
ಬಾಡಿಗೆ ಸಂದಿಸಿ ಉಳಿಯಲೇ ಏನು
-ಪೆದ್ದರಿಚ್ಚ

ಏಳು ಮಹಾಪಾಪಗಳು

ಅದೃಷ್ಟವಂತ ನಾನು
ನೀಡಿಹನು ದೇವನು ಎಲ್ಲವನು
ಬಳಸಿ ಆತನ ವರದಾನವನು
ಗಳಿಸಿದೆ ಕೈ ತುಂಬಾ ಹಣವನು
ನನಗರಿವಿಲ್ಲದೆ
ಆ ಹಣ ಖರೀದಿ ಮಾಡಿದೆ
ಮೂಟೆ ಅಹಂಕಾರವನು.

ನಾನು ವಿಭಿನ್ನನು
ದೇವೆರೇ ಹಾಗೆ ಮಾಡಿಹರೆನ್ನನು
ಬಳಸಿ ಆತನ ವರದಾನವನು
ಬಯಸಿದೆ ಹಿಂದಿಕ್ಕಲು ಪರರನು
ನನಗರಿವಿಲ್ಲದೆ
ಹಣದಿಂದ ವಿಭಿನ್ನತೆಯ ಒಲವು
ರಾಶಿ ಹಾಕಿದೆ ಎನ್ನಲಿ
ಅಸೂಯೆಯ ಫಸಲನು.

ಸ್ನೇಹಮಯಿ ನಾನು
ಸ್ನೇಹಿತರಿಗೆ ಕೊರತೆಯಿಲ್ಲ ಏನೂ
ಸ್ನೇಹದ ಈ ಭಾಗ್ಯವನು
ಹಣದೊಂದಿಗೆ ಆನಂದಿಸಿದೆನು
ನನಗರಿವಿಲ್ಲದೆ
ಮನೆಮಾಡಿದೆ ಎನ್ನಲಿ ಹಣದಿಂದಾಗಿ
ಕಾಮದ ಕಾಮಧೇನು.

ಶ್ರಮಜೀವಿ ನಾನು
ಬೆವರ ಸುರಿಸಿ ಮೇಲೇರಿದೆನು
ಹಣವು ನನ್ನ ಜೇಬು ತುಂಬಲು
ವಿಶ್ರಾಂತಿಯನು ಬಯಸಿದೆನು.
ನನಗರಿವಿಲ್ಲದೆ
ಹಣವು ಕೊಂಡುಕೊಂಡಿದೆ
ಸೋಮಾರಿತನದ ಸಂಗೀತವನು.

ಪ್ರೀತಿಮಯಿ ನಾನು
ಬರಗಾಲವಿಲ್ಲ ನಗುವಿಗೇನು
ಬಳಸಿ ಜೇನಿನ ನುಡಿಗಳನು
ಗಳಿಸಿದೆ ಮಿತಿಯಿಲ್ಲದಷ್ಟು ಹಣವನು
ನನಗರಿವಿಲ್ಲದೆ
ಹಣದ ವಾಸನೆಯು
ಬೆಳೆಸಿದೆ ದ್ವೇಷದ ಹೆಜ್ಜೇನನು.

ರುಚಿಯಲಿ ನಿಸ್ಸೀಮ ನಾನು
ಪ್ರತಿಯೊಂದರ ರುಚಿಯನು
ಸರಿಯಾಗಿ ಗುರುತಿಸಿ ಹೇಳಬಲ್ಲೆನು
ಹಣವಿದೆ ಕೊಳ್ಳಬಲ್ಲೆನು ಎಲ್ಲವನು
ಎಂತಲೆ ಸವಿಯುತಿಹೆನು ಮೃಷ್ಟಾನ್ನವನು
ನನಗರಿವಿಲ್ಲದೆ
ಹಣವೆನ್ನಲಿ ಬೆಳೆಸಿದೆ
ಹೊಟ್ಟೆಬಾಕತನದ ದಟ್ಟ ಕಾಡನು.

ವಿಶಾಲ ಮನೋಭಾವಿ ನಾನು
ದೂರ ದೃಷ್ಟಿಯನು ಹೊಂದಿದವನು
ನಾಳಿನ ಸುಂದರ ಬಾಳಿಗೆ
ಒಂದಿಷ್ಟು ಸಿರಿಯ ಗಳಿಸೆಹೆನು
ನನಗರಿವಿಲ್ಲದೆ
ಹಣವೆನ್ನಲಿ ತೋಡಿದೆ
ದುರಾಸೆಯ ಆಳ ಬಾವಿಯನು.

ರಾಶಿ ಹಾಕುತ ಬಾಳಲಿ ಹಣವನು
ಮುಂದೆ ಒಯ್ಯುತಿಹೆ ಪಯಣವನು
ಅರಿವಿಲ್ಲದೇ ಖರೀದಿಸಿದೆ ದುರ್ಗುಣವನು
ಆಮಂತ್ರಿಸಿ ಎನ್ನ ಮರಣವನು
ನನಗರಿವಿಲ್ಲದೆ
ಹೊತ್ತು ಸಾಗುತಿಹೆ
ನಾನೇ ನನ್ನ ಹೆಣವನು.
-ಪೆದ್ದರಿಚ್ಚ

ಕೇಡಿನ ಮುಳ್ಳು

ಮುಳ್ಳಿನ ಗಿಡಕೆ ಗೊಬ್ಬರ ಸುರಿಯರು
ಮುಳ್ಳನು ಅರಿತಿಹ ಮಾನವರು
ಕೇಡನು ಅರಿಯದೆ ಬೆಳೆಸುತಲಿಹರು
ಯಾಕೋ ತಿಳಿಯದು ಈ ಜನರು.

ಹಣ್ಣಿನ ಗಿಡದ ಮುಳ್ಳನು ಯಾರೂ
ತಿನ್ನಲು ಬಯಸರು ಹಣ್ಣೆಂದು
ಸುಂದರ ಹಾವನು ಕೈಯಲಿ ಹಿಡಿಯರು
ಮುಡಿಯರು ಯಾರೂ ಹೂವೆಂದು.

ದೇವರು ನಮಗೆ ನೀಡಿಹ ಬುದ್ದಿಯ
ಅರಿಯಲು ಕೇಡಿನ ಛಾಯೆಯನು
ಬುದ್ದಿಯ ಬಳಸದೆ ತೊರೆದರೆ ಒಳಿತನು
ಸೇರ‍್ವೆವು ಕೇಡಿನ ಗುಹೆಯನ್ನು.

ಅರಿಯಲು ಕೇಡನು ಕಷ್ಟವು ಆಗದು
ಕೇಳಲು ಒಳಗಿನ ದನಿಯನ್ನು
ಸತ್ಯದ ಅರಸನು ಆಡುವ ಮಾತು
ತಪ್ಪಿಸಬಲ್ಲದು ಹಾನಿಯನು.

ಕೆಡುಕಿನ ಅರಮನೆ ಕತ್ತಲ ಕಡಲು
ಕೆಲವೇ ದಿನಗಳ ಸಂಭ್ರಮವು
ಒಳಿತಿನ ಗುಡಿಸಲು ಬೆಳಕಿನ ಹೊನಲು
ಎಂದೂ ಅಳಿಯದ ಸಂತಸವು.
-ಪೆದ್ದರಿಚ್ಚ

ಆತ್ಮ

ಆತ್ಮದ ಉಸಿರಾಟಕೆ
ನೀತಿಯ ಗಾಳಿಯು
ಆತ್ಮದ ದಾಹಕೆ
ನ್ಯಾಯದ ನೀರು
ಆತ್ಮದ ಹಸಿವಿಗೆ
ಪ್ರೀತಿಯ ತಿನಿಸು

ಮಲಿನವಾಗಿವೆ ಎಲ್ಲವೂ
ಸ್ವಾರ್ಥ ತುಂಬಿದ ಜಗದಲಿ
ದೀನ ಆತ್ಮಕೆ ನೀಡಿವೆ
ನೂರು ರೋಗದ ಬಳುವಳಿ
ದಾರಿ ಕಾಣದೆ ಸೋತಿದೆ
ಮಾಡಲಾಗದೆ ಚಳುವಳಿ

ಅನೀತಿ ಜೀವನ ತೊರೆಯುತಾ
ನೀತಿ ಗಾಳಿಯ ಉಳಿಸುವ
ಅನ್ಯಾಯ ಕೊಳೆಯ ತೊಳೆಯುತಾ
ನ್ಯಾಯ ನೀರನು ಹರಿಸುವ
ದ್ವೇಷ ಕತ್ತಲೆ ತೊಲಗಿಸಿ
ಪ್ರೀತಿ ದೀಪವ ಹಚ್ಚುವ
-ಪೆದ್ದರಿಚ್ಚ

ಅಳತೆ ಕೋಲು

ದಯಾಮಯಿ ದೇವನ
ಅಳತೆ ಕೋಲೊಂದೆ
ಅಳೆವನು ನಮ್ಮೆಲ್ಲರ
ನಮ್ಮೆಲ್ಲರ ಮುಂದೆ

ಆತನ ಅಳತೆ ಕೋಲನು
ನಮಗಾತ ನೀಡಿಹನಂತೆ
ಅಳೆವನೆಮ್ಮನು ಕೊನೆಗೆ
ಪರರ ನಾವು ಅಳೆದಂತೆ.

ಅಳತೆ ಕೋಲಲಿ ಇಲ್ಲ
ಯಾವುದು ಮೋಸ
ಸರಿಯಾಗಿ ಬಳಸಿದರೆ
ಎಮ್ಮಲಿ ದೇವನ ವಾಸ.

ಬಳಸಿದಂತೆ ನಾವು
ಬಳಸುವನು ಅವನು
ಅಳೆದಂತೆ ನಾವು
ಅಳೆಯುವನು ಅವನು.
-ಪೆದ್ದರಿಚ್ಚ

ಆಗ ಮಾತ್ರ

ಧೂಳಿರುವವರೆಗೆ
ಬಟ್ಟೆ ಕೊಳಕಾಗುವುದು
ಬಟ್ಟೆಗಿದೆ ಹೊಳಪು
ತೊಳೆದಾಗ ಮಾತ್ರ ತಿಳಿವುದು.

ಗಾಳಿ ಇರುವವರೆಗೆ
ಚಿನ್ನ ಕಪ್ಪಾಗುವುದು
ಚಿನ್ನಕ್ಕಿದೆ ಹೊಳಪು
ಬೆಂಕಿಯಲ್ಲಿಟ್ಟಾಗ ಮಾತ್ರ ತಿಳಿವುದು.

ಆಸೆ ಇರುವವರೆಗೆ
ದುಃಖ ಮನೆ ಮಾಡುವುದು
ಅಳಿಯದ ಒಂದು ಸುಖವು
ತೊರೆದಾಗ ಮಾತ್ರ ತಿಳಿವುದು.

ಶೋಧನೆ ಇರುವವರೆಗೆ
ಮನಸ್ಸು ಮೈಲಿಗೆಯಾಗುವುದು
ಮನಸ್ಸೊಂದು ಮಲ್ಲಿಗೆ
ತೆರೆದಾಗ ಮಾತ್ರ ತಿಳಿವುದು.

ಭಯ ಇರುವವರೆಗೆ
ದಾಸ್ಯ ಸಹಜವಾದುದು
ಹೊಸತನ ಹೊಸ್ತಿಲಲ್ಲಿದೆ
ಹೊರಟಾಗ ಮಾತ್ರ ತಿಳಿವುದು.

ಅಜ್ಞಾನ ಇರುವವರೆಗೆ
ಅವಿಶ್ವಾಸ ಸಹಜವಾದುದು
ಮನದಾಳದಲ್ಲಿಹರು ದೇವರು
ಅರಿತಾಗ ಮಾತ್ರ ತಿಳಿವುದು.
-ಪೆದ್ದರಿಚ್ಚ.

ವೈರ

ಮಸೆವ ಕಲ್ಲನು ಅರಿವವರೆಗೆ
ಕತ್ತಿಗಿತ್ತು ವೈರ
ಅರಿತ ಬಳಿಕ…
ಮಸೆವ ಕಲ್ಲಿನಿಂದ ಕತ್ತಿಗೆ ಬಲ ಜಾಸ್ತಿ
ಕಲ್ಲಿಗೆ ಬೆಲೆ ಜಾಸ್ತಿ…

ಕತ್ತರಿಸುವ ಕತ್ತರಿಯನು ಅರಿವವರೆಗೆ
ಬಟ್ಟೆಗಿತ್ತು ವೈರ
ಅರಿತ ಬಳಿಕ
ಕತ್ತರಿಯಿಂದ ಬಟ್ಟೆ ಧಿರಿಸಾಯ್ತು
ಕತ್ತರಿ ಕಲೆಯಾಯ್ತು.

ಕೆತ್ತುವ ಉಳಿಯ ಅರಿವವರೆಗೆ
ಕಲ್ಲಿಗಿತ್ತೂ ವೈರ
ಅರಿತ ಬಳಿಕ
ಕಲ್ಲು ಶಿಲೆಯಾಯ್ತು
ಉಳಿ ಕಲ್ಲಲಿ ಮರೆಯಾಯ್ತು.

ಮದ್ದನು ಅರಿವವರೆಗೆ
ರೋಗಿಗಿತ್ತು ವೈರ
ಅರಿತ ಬಳಿಕ
ಮದ್ದಿನಿಂದ ರೋಗ ದೂರಾಯ್ತು
ಮದ್ದಿಗೆ ಹೆಸರಾಯ್ತು.

ಪರನ ಅರಿವವರೆಗೆ
ಮನದಲ್ಲಿತ್ತು ವೈರ
ಅರಿತ ಬಳಿಕ
ಪರನಿಂದ ಮನವು ಮಗುವಾಯ್ತು
ಪರನಿಗೂ ನಗುವಾಯ್ತು.
– ಪೆದ್ದರಿಚ್ಚ

ಕೋಟೆ

ಕನಸಿನ ಲೋಕದಲ್ಲಿ
ನನ್ನದೊಂದು ಅರಮನೆ
ನಾನೇ ರಾಜ ನನ್ನದೇ ರಾಜ್ಯಭಾರ…
ದೊಡ್ಡ ಅರಮನೆಯಲಿ ಒಂಟಿ ಜೀವನ
ಅರಮನೆಯೊಳಗೆ ಬರಲು
ಯಾರಿಗೂ ಅನುಮತಿ ಇಲ್ಲ
ಬರುವುದೂ ನನಗೆ ಇಷ್ಟವಿಲ್ಲ
ಅಪ್ಪಿ ತಪ್ಪಿ ಬಂದವರಿಗೆ ಕಾದಿದೆ
ನನ್ನ ಕೋಪದ ಬಾಣಲೆ….
ಬಾರದಿರಲೆಂದು ಒಳಗೆ ಯಾರೂ
ಸುತ್ತ ಕಟ್ಟಿಹೆನು ಭೇಧಿಸಲಾಗದ ಕೋಟೆ…
ಅರಮನೆಯ ರಾಜ ಎಂಬ ದರ್ಪ
ನಾನೇ ಸರಿ ಎಂಬ ಅಹಂಕಾರ ಒಂದೆಡೆ
ಬೇರೆಲ್ಲರು ಮಂಧಮತಿಗಳು ಎಂಬ ತುಚ್ಛ ಭಾವ ಇನ್ನೊಂದೆಡೆ
ಆದ್ದರಿಂದಲೇ ಏನೋ
ಆಲಿಸುವ ಕಿವಿಗಳು ರಜೆ ಪಡೆದು
ವರುಷಗಳೇ ಕಳೆದಿವೆ…
ರಾಜನ ದರ್ಪದ ದಪ್ಪ ಪೋಷಕಿನಿಂದ
ಆತ್ಮದ ಒಳಗೆ ಸಾಗಿ
ಆತ್ಮಾವಲೋಕನ ಮಾಡಲು ಕಷ್ಟವಾಗಿದೆ…
ಅಂದದ ಅರಮನೆಯಲಿ
ರಾಜ ನಾನು
ಒಳಗೆಲ್ಲಾ ಕತ್ತಲೇ ಕತ್ತಲು…
ಭಯದಿ ನಿಟ್ಟುಸಿರು ಬಿಡಲು
ಎಚ್ಚರವಾಯಿತು
ಅರಮನೆ ಕೇವಲ ಕನಸೆಂಬುದು ತಿಳಿಯಿತು
ಆದರೆ ಕತ್ತಲು…..
ಅದು ನಿಜವಾದುದು
ಕಾರಣ….
ನನ್ನ ಸುತ್ತಲಿರುವ ನಾ ಕಟ್ಟಿರುವ
ಭೇದಿಸಲಾಗದ ಕೋಟೆ!
-ಪೆದ್ದರಿಚ್ಚ

ಕೇಳು

ಕೇಳಲು ಮಕ್ಕಳು
ತಾಯಿಯ ನಗುತಲಿ
ಪ್ರೀತಿಯ ನಿರುತವು ಪಡೆಯುವರು.

ಹುಡುಕಲು ಮಕ್ಕಳು
ಮಾತೆಯ ಮೊಗದಲಿ
ದೇವನ ಮೊಗವನು ಕಾಣುವರು.

ತಟ್ಟಲು ಮನುಜರು
ಮಮತೆಯ ಹೃದಯವ
ನೆರವನು ಹೇರಳ ಪಡೆಯುವರು.

ನಂಬಿಕೆ ಹೃದಯದಿ
ಚಿಗುರಲು ನಿನ್ನಲಿ
ಕೇಳಲು ಪಡೆಯುವೆ ಬಾಳಿನಲಿ.

ಭರವಸೆ ಶಕ್ತಿಯು
ಬೆಳೆಯಲು ನಿನ್ನಲಿ
ಹುಡುಕಲು ಸಿಗುವುದು ಕ್ಷಣಗಳಲಿ.

ಬಂಧನ ಬೆಸೆಯುತ
ತಟ್ಟಲು ಬಾಗಿಲ
ದೇವನ ಕಾಣುವೆ ಬಾಗಿಲಲಿ.
-ಪೆದ್ದರಿಚ್ಚ

ಕಿಟಕಿ

ಕಿಟಕಿಯಿಂದ ನೋಡುವ ಮನುಜ
ಎಲ್ಲವನ್ನು ಮೇಲಿನಿಂದ ನೋಡುವ ದೇವನಿಗೆ
ತಾನು ನೋಡುವುದೆ ಸರಿ
ಎಂದು ವಾದಿಸುವುದನು ಏನೆನ್ನಲ್ಲಿ?

ಈ ಸುಂದರ ಧರೆಯಲಿ
ಮೂರು ದಿನಗಳ ಪಯಣದಲ್ಲಿರುವ
ಯಾತ್ರಿಕ ಮಾನವ
ಎಲ್ಲವನು ರಚಿಸಿದ ದೇವನಿಗೆ
ತಾನು ಮಾಡುವುದೇ ಸರಿ
ಎಂದು ಸಮರ್ಥಿಸಿಕೊಳ್ಳುವುದನು ಏನೆನ್ನಲಿ?

ಕೆಲವು ಅಕ್ಷರಗಳನು ಕಲಿತು
ಕೆಲವೇ ದಿನಗಳಲಿ ಮರೆವ ಮಾನವ
ಜ್ಞಾನದ ಸುರನಧಿ ದೇವನಲಿ
ತರ್ಕಕೆ ಇಳಿಯುವುದನು ಏನೆನ್ನಲಿ?

ಎರಡು ಸಾಲುಗಳ ಗೀಚಿ ಚಿತ್ರ ಬಿಡಿಸಿ
ಆ ಸೌಂದರ್ಯ ಸವಿದು ಬೀಗುವ ಮಾನವ
ಸುಂದರ ಸೃಷ್ಟಿಯ ರಚಿಸಿದ ದೇವನಲಿ
ಚಿತ್ರ ಬಿಡಿಸಲು ಕಲಿಸುವುದನು ಏನೆನ್ನಲಿ?

ಮಾನವನ ಮೂರ್ಖತನ ಮರೆಯಾಗಲು
ಚಿಗುರೊಡೆಯಬೇಕು ಬುದ್ದಿ ದೇವನ ಅರಿಯಲು
ಅರಿತರೊಮ್ಮೆ ಮನದಲಿ ಆತನನು
ಕೇಳನಾರು ದೇವನಲಿ ಪ್ರಶ್ನೆಯನು.
-ಪೆದ್ದರಿಚ್ಚ.