
ಭುವಿಯ ಎಳೆಯ ಉದರವನು
ಬೆವರಿನ ಹನಿಗಳು ಸ್ಪರ್ಶಿಸಿವೆ
ಉದರದಿ ಹಸಿರಿನ ಜನನವನು
ಬೆವರಿನ ಹನಿಗಳು ಹರ್ಷಿಸಿವೆ
ಸೃಷ್ಟಿಗೆ ಹೊನ್ನಿನ ಒಡವೆಗಳ
ಬೆವರಿನ ಹನಿಗಳು ತೊಡಿಸುತಿವೆ
ಮನುಕುಲದಸಿವಿನ ತುಟಿಗಳಿಗೆ
ಬೆವರಿನ ಕರಗಳು ಉಣಿಸುತಿವೆ
ಹರಿಯುವ ನದಿಗೆ ಸಾವಿರದು
ಸುರಿಯುವ ಬೆವರಿಗೆ ನೋವಿರದು
ದುಡಿಮೆಯ ಕರವೇ ಅಳಿಯದ ಸಿರಿಯು
ಸಾಗುವ ಹಾದಿಗೆ ಕೊನೆಯಿರದು
ಮನುಜಗೆ ದುಡಿಮೆಯ ಮಹಿಮೆಯನು
ಬೆವರಿನ ಹನಿಗಳು ಕಲಿಸುತಿವೆ
ಸಂತೃಪ್ತಿಯ ಬಾಳಿನ ಹಾದಿಯನ್ನು
ಬೆವರಿನ ಹನಿಗಳು ತೋರುತಿವೆ
ತ್ಯಾಗದ ಬಾಳಿಗೆ ಸಾಂತ್ವನವ
ಬೆವರಿನ ಹನಿಗಳು ಸುರಿಯುತಿವೆ
ಕತ್ತಲ ಬಾಳಿಗೆ ಕಿರಣವನು
ಬೆವರಿನ ಹನಿಗಳು ಬೀರುತಿವೆ
-ಪೆದ್ದರಿಚ್ಚ







