ಬರಗಾಲವೇ ಇರಲಿ

ಆಗಿನ ಆ ಭಯಂಕರ
ಹಣದ ಬರಗಾಲದಲಿ
ಭಕ್ತಿ ವಿಶ್ವಾಸದ
ಒಯಾಸಿಸ್ ಪುಟಿದೇಳುತ್ತಿತ್ತು
ಧಗೆಯ ಕಾವಿನ ದಾಹವನ್ನು
ಮತ್ತೇ ಮತ್ತೇ ತಣಿಸುತ್ತಿತ್ತು.
ಯಾವುದೂ ಶಾಶ್ವತವಲ್ಲ
ಬರಗಾಲವೇನೂ ಹೊರತಲ್ಲ…
ವಸಂತನ ಆಗಮನವಾಯಿತು
ಬರಡಿನ ಧೂಳಲ್ಲೂ ಚಿಗುರೊಡೆಯಿತು….
ಒಯಾಸಿಸ್ ಮರೆತುಹೋಯಿತು
ಅದೂ ಮರೆಯಾಯಿತು…
ಇಂದೋ…
ಬರಡು ಬಡತನದ ಮರಳಿಲ್ಲ
ಸಿರಿತನದ ಹಸುರಿಗೆ ಬರವಿಲ್ಲ
ಈ ಸುಗ್ಗಿಯ ಆನಂದದಲಿ
ಬರಗಾಲದಲಿ ದಾಹ ನೀಗಿದ
ಭಕ್ತಿ ವಿಶ್ವಾಸದ ಒರತೆಯ ಸುಳಿವಿಲ್ಲ…
ಬರಗಾಲ ಸುಗ್ಗಿಯಾದೊಡೆ
ಮತ್ತೊಂದರ ಬರಗಾಲ…

ನೀ ನನ್ನೊಂದಿಗಿರದ ಸುಗ್ಗಿಗಿಂತ
ನೀ ನನ್ನೊಂದಿಗಿರುವ ಬರಗಾಲವೇ
ನನಗಿರಲಿ ನನ ದೇವ!
-ಪೆದ್ದರಿಚ್ಚ

ಹೊಸ ಬಟ್ಟೆ

ವರುಷಕ್ಕೊಂದು ಹಬ್ಬವು
ಮನದಿ ಎಮ್ಮ ಹರುಷವು
ಬಟ್ಟೆ ಹೊಸತ ತೊಡುತಲೇ
ಎಲ್ಲಾ ಹೊಸ ಭಾವವು

ಹೊಸತು ಎಂಬ ಸಡಗರ
ಹಳತು ಈಗ ಮುಜುಗರ
ಹೊಸ ಹಾದಿಯಲ್ಲಿ ನಡೆವ
ಮನದಿ ಒಂದು ನಿಶ್ಚಯ.

ತೋಚದೆನಗೆ ಇಹುದು ಏನು
ತೊಟ್ಟ ಹೊಸ ವಸ್ತ್ರದಿ
ಧರಿಸಿ ಒಂದೇ ಕ್ಷಣದಿ ನಾನು
ಹೊಸ ಮಾಯ ಲೋಕದಿ

ಮುಂದೊಮ್ಮೆ ಹರಿವ ಬಟ್ಟೆ
ಹೊಸ ಭಾವ ಹರಿಸಿತು
ಅದರಲ್ಲಿದ್ದ ಬಣ್ಣ ಚಿಟ್ಟೆ
ದುಃಖವೆನ್ನ ಮರೆಸಿತು

ಹಳೆಬಟ್ಟೆ ತೊರೆವ ಹಾಗೆ
ತೊರೆದು ಬಿಡು ಕೆಡುಕನು
ಹೊಸಬಟ್ಟೆ ತೊಡುವ ಹಾಗೆ
ತೊಡುತಲಿರು ಒಳಿತನು

ದಿನವು ತೊಟ್ಟರೆಷ್ಟು ಚೆನ್ನ
ಹೊಸ ಹೊಸ ಯೋಚನೆ
ಬಾಳು ಎಷ್ಟು ಚೆಂದ ಆಗ
ಅದು ರಂಗು ರಗಿನರಮನೆ.
– ಪೆದ್ದರಿಚ್ಚ

ಮುಂದೆ ನಿಂತರೆ?

ಸೃಷ್ಟಿ ಕರ್ತ ದೇವರೇ
ನಿನ್ನ ಮುಂದೆ ನಿಂತರೆ
ಒಡನೆ ಏನು ಮಾಡುವೆ
ಹೇಳು ಪೆದ್ದರಿಚ್ಚನೆ?

ಮೊದಲು ಕಣ್ಣ ಉಜ್ಜುವೆ
ಕಿವಿಯ ಸ್ವಲ್ಪ ಚಿವುಟುವೆ
ಕನಸು ಅಲ್ಲ ಎಂದು ಅರಿತು
ಶಿರವ ಬಾಗಿ ನಮಿಸುವೆ…

ಮುಂದೆ ನಿಂತ ದೇವರೇ
ನೀನು ಯಾರು ಎಂದರೆ
ಒಡನೆ ಏನು ಹೇಳುವೆ
ದಡ್ಡ ಪೆದ್ದರಿಚ್ಚನೆ?

ಸೃಷ್ಟಿ ಕರ್ತ ದೇವನೆ
ನನ್ನ ಪೊರೆವ ಆತ್ಮನೆ
ನಿನ್ನ ಮುದ್ದು ಮಗುವು ನಾನು
ಅಪ್ಪಿ ಅವನ ಹೇಳುವೆ!

ನಿನ್ನ ನೋಡಿ ನಕ್ಕರೆ
ಏನು ಬೇಕು ಎಂದರೆ
ಒಡನೆ ಏನು ಕೇಳುವೆ
ಹೇಳು ಪೆದ್ದರಿಚ್ಚನೆ?

ನಾನೂ ನಗುವ ಬೀರುವೆ
ಶಾಂತ ಸ್ವರದಿ ಹೇಳುವೆ
ನೀನೇ ಎನ್ನ ಜೊತೆಗೆ ಇರಲು
ಏನು ಬೇಡ ಎನ್ನುವೆ!

ಮತ್ತೆ ನಿನ್ನ ದೇವನು
ಏನ ನೀಡ್ವೇ ಎಂದರೆ
ಏನ ನೀನು ನೀಡುವೆ
ಓ ಪೆದ್ದ ರಿಚ್ಚನೆ?

ಇಲ್ಲಿ ಎಲ್ಲ ನಿನ್ನದೇ
ನನ್ನದಿಲ್ಲಿ ಏನಿದೆ
ಕೊಡುವೆ ಎನ್ನ ಪ್ರಾಣವನ್ನೇ
ಬೇಕೇ ನಿನಗೆ ಎನ್ನುವೆ!

ಬುದ್ದಿವಂತ ದೇವನು
ಬಾ ಜೊತೆಗೆ ಎಂದರೆ
ನೀನು ಏನು ಮಾಡುವೆ
ಹೇಳು ಪೆದ್ದರಿಚ್ಚನೆ?

ಚಿಂತೆ ಏನೂ ಮಾಡದೆ
ಜಿಗಿದು ಎದ್ದು ನಿಲ್ಲುವೆ
ಕರವ ಹಿಡಿದು ನಲಿದು ಕುಣಿದು
ಆತನೊಡನೆ ಸಾಗುವೆ!

ಕುರುಡರ ಸಂತೆ

ಕುರುಡರ ಸಂತೆ ಕುರುಡರ ಸಂತೆ
ನೋಡಲು ಬಯಸದ ಕುರುಡರ ಸಂತೆ
ಅಳುವನು ನಗುವನು ಕಾಣದೆ ನಡೆಯುವ
ಸ್ವಾರ್ಥದಿ ಮುಳುಗಿಹ ಕುರುಡರ ಸಂತೆ

ಸೂರ್ಯನ ಉದಯವ
ಮಿನುಗುವ ಕಿರಣವ
ಹಿಬ್ಬನಿ ಕಾಣದ ಕುರುಡರ ಸಂತೆ
ಬೆಳಗಿನ ಅಂದವ
ಮೊಗ್ಗಿನ ಚೆಂದವ
ಕಂದವ ಕಾಣದ ಕುರುಡರ ಸಂತೆ

ಸೃಷ್ಟಿಯ ಚೆಲುವನು
ಮಣ್ಣಿನ ಸೊಭಗನು
ಸಿರಿಯನು ಕಾಣದ ಕುರುಡರ ಸಂತೆ
ಚಂದ್ರನ ನಗುವನು
ರಾತ್ರಿಯ ನೆರಳನು
ತಾರೆಯ ಕಾಣದ ಕುರುಡರ ಸಂತೆ

ದುಃಖದಿ ಜರಿಯುವ
ನೋವಲಿ ತೊರೆಯುವ ಸಾಂತ್ವನ ನೀಡದ ಕುರುಡರ ಸಂತೆ
ನಗುವನು ನೀಡದ
ಮೊಗವನು ನೋಡದ
ಫೋನಲಿ ಮುಳುಗಿಹ ಕುರುಡರ ಸಂತೆ
– ಪೆದ್ದರಿಚ್ಚ

ನಾನಿಲ್ಲೇ!

ಹಿಂಸೆ ನರಳಾಟದ ಕೂಗಿನ ನಡುವೆ
ನನ್ನ ಕೂಗಿ ಹೇಳುವ ಪ್ರಾರ್ಥನೆ ದೇವನಿಗೆ ಕೇಳುವುದೇ?
ನನ್ನ ಸುತ್ತಲಿನ ಕೊಳೆಗೇರಿಗಳ
ದುರ್ನಾತದ ನಡುವೆ
ಗಂಧದ ಕಡ್ಡಿಯ ಸುವಾಸನೆ
ದೇವನ ಮೂಗಿಗೆ ಬಡಿವುದೇ?
ನನ್ನ ಆಳದ ಅಂತರಂಗದಲಿ
ಆವರಿಸಿರುವ ಕತ್ತಲಿನ ನಡುವೆ
ನಾ ಹಚ್ಚುವ ದೀಪದ ಬೆಳಕು
ದೇವರನ್ನು ತೋರಿಸಬಲ್ಲದೇ?
ದೇವಾಲಯದ ಹಾದಿಯಲಿ
ಬಿಕ್ಷುಕರಿಗೆ ನೀಡದೆ ಉಳಿಸಿದ ಒಂದು ರೂಪಾಯಿಯ
ನಾ ಕಾಣಿಕೆಯಾಗಿ ನೀಡಿದರೆ
ದೇವನಿಗೆ ತಲುಪಬಹುದೇ?
ಹೊಲಸು ಯೋಚನೆಗಳ ಎನ್ನ ಮನದಲಿರಲು
ನನ್ನ ತುಟಿಮಾತಿನ ಭಕ್ತಿಗೀತೆಗಳು
ದೇವನ ಕಿವಿಗೆ ಇಂಪಾಗಬಹುದೇ?

ದೇವಾಲಯದಲಿ ನಾ ಹುಡುಕುತ್ತಿದ್ದ ದೇವಾ
ನರಳಾಟದ ಧ್ವನಿಯ ನಡುವೆ
ಕಿವಿ ಮುಚ್ಚಿಕೊಂಡಿದ್ದ
ಕೊಳೆಗೇರಿಯಲಿ ಮೂಗು ಮುಚ್ಚಿಕೊಂಡಿದ್ದ
ಕತ್ತಲಲ್ಲಿ ಕುಳಿತು
ಏನೂ ಕಾಣದೆ ಕುರುಡನಾಗಿದ್ದ
ಭಿಕ್ಷುಕರ ಜೊತೆಗೆ ಕುಳಿತು
ಹರಟೆ ಹೊಡೆಯುತ್ತಿದ್ದ
ತನಗಿಷ್ಟವಾದ ಗೀತೆಗಳ
ಗುನುಗುತ್ತಿದ್ದ

ದೇವಾಲಯವನ್ನು ಬಿಟ್ಟು ನೀನೇನು ಮಾಡುತಿರುವೆ ಇಲ್ಲಿ
ಎಂದು ಪೆದ್ದರಿಚ್ಚ ದೇವನನು ಕೇಳಲು
ಆತ….
ಇವೆಲ್ಲವನು ನೀನು ಬದಲಿಸುವ ತನಕ
ನಾನಿಲ್ಲೆ ಎಂದ

ತೆನೆ

ತುಂಬು ತೆನೆಯ ಓ ಸಸಿಯೇ,
ಏಕಷ್ಟು ತುಂಬಿಕೊಂಡಿರುವೇ?
ನಿನ್ನ ಉಳಿವಿಗೆ, ನಿನ್ನ ಸಂತತಿಗೆ
ಒಂದು ಕಾಳಿದ್ದರೆ ಸಾಲದೆ…
ತೆನೆ ಭಾರದಿಂದ ಬಾಗಿರುವೆ
ಬಳಲಿ ಬೆಂಡಾಗಿರುವೆ
ನಿನ್ನನೇ ಕಳೆದುಕೊಳ್ಳುತ್ತಿರುವೆ…

ಪೆದ್ದರಿಚ್ಚಾ,
ಕಾಳೊಂದು ಸಾಕು ಎನಗೆ
ಎನ್ನ ಬದುಕಿಗೆ, ಎನ್ನ ಉಳಿವಿಗೆ
ಎನ್ನ ಸಂತತಿಗೆ.
ನನಗಾಗಿ ನಾ ಬಾಳಿದರೆ
ಸಾಯುವೆ ಬದುಕದೆ
ನನ್ನಿಂದ ಕೆಲವರು ಬದುಕಿದರೆ
ಬದುಕುವೆ ನಾ ಸಾಯದೆ…

ಬಾಲ್ಯವೇ

ನನ್ನನೇಕೆ ತೊರೆದು ಹೋದೆ
ನನ್ನ ಮುದ್ದು ಬಾಲ್ಯವೇ
ನೆರಳು ನನ್ನೊಂದಿಗಿರುವ ಹಾಗೆ
ಇರಬಾರದಿತ್ತೇ ನಿನಗೆ?

ನೋಟ ಮುದ್ದಾಗಿತ್ತು
ಮಾತು ಸಿಹಿಯಾಗಿತ್ತು
ಸ್ಪರ್ಶ ಮೃದುವಾಗಿತ್ತು
ಇಂದೋ…
ನೋಟ ಬದಲಾಗಿದೆ
ಮಾತು ಕಹಿಯಾಗಿದೆ
ಸ್ಪರ್ಶ ಒರಟಾಗಿದೆ
ಮುಗ್ದತೆ ಮರೆಯಾಗಿದೆ
ಮರಳಿ ಬಾ ಎನ್ನಲಿ
ಮರಳಿ ತಾ ಎನ್ನಲಿ
ಮನುಜನಾಗ ಕಲಿಸಲು
ಅರಳಿ ಬಾ ಎನ್ನಲಿ

ಎಲ್ಲರ ನೋಡಿ ನಗುತ್ತಿದ್ದೆ
ಅದಕ್ಕುತ್ತರ ಪಡೆಯುತ್ತಿದ್ದೆ
ಎಲ್ಲರ ಮುತ್ತಿ ಅಪ್ಪುತ್ತಿದ್ದೆ
ಅದರಲೆನ್ನ ಮರೆಯುತ್ತಿದ್ದೆ
ಇಂದೋ…
ಎನ್ನ ನೋಡಿ ನಗುವವರಿಲ್ಲ
ಎನ್ನ ನಗುವಿಗೆ ಉತ್ತರವಿಲ್ಲ
ಮುತ್ತಲಿ ನಿಜ ಪ್ರೇಮವಿಲ್ಲ
ಅಪ್ಪುಗೆಯಲಿ ಅಕ್ಕರೆಯಿಲ್ಲ
ಮರಳಿ ಬಾ ಬಾಲ್ಯವೇ
ಮರಳಿ ತಾ ಎನ್ನಲಿ
ಪ್ರೀತಿ ಪ್ರೇಮ ಕರದಲಿದಿಡು
ಅರಳಿ ಬಾ ಎನ್ನಲಿ

ಕೇಳಿ ಕೇಳಿ ಅರಿಯುತ್ತಿದ್ದೆ
ಕಲಿತು ನಕ್ಕು ನಲಿಯುತ್ತಿದ್ದೆ
ಚಿಕ್ಕ ಪುಟ್ಟ ವಸ್ತುಗಳನೂ
ಸವಿದು ಹಿರಿದು ಹಿಗ್ಗುತ್ತಿದ್ದೆ.
ಇಂದೋ…
ಕಲಿವ ಆಸೆ ಒಣಗಿದೆ
ನಲಿವ ಬಲವು ಬತ್ತಿದೆ
ಮರಳಿ ಬಾ ಬಾಲ್ಯವೇ
ಮರಳಿ ತಾ ಎನ್ನಲಿ
ದೇವನರಿವ ಮನಸ್ಸ ಹಿಡಿದು
ಅರಳಿ ಬಾ ಎನ್ನಲಿ

ತೊರೆದು ಹೋದ ಬಾಲ್ಯವೇ
ಮತ್ತೇ ಬಾ ಕರೆಯುವೆ
ಎನ್ನ ನೆರಳಿನಂತೆ ಜೊತೆಯೇ ಇರು
ಕರವ ಮುಗಿದು ಬೇಡುವೆ
ಕಲಿಸು ಎನಗೆ ಕೃಪೆಯ ತೋರಿ
ಮತ್ತೆ ಮನುಜನಾಗುವೆ
ದೇವನಾಗ ಒಲಿವನೆನಗೆ
ವರದ ಮಳೆಯ ಸುರಿವನೆನಗೆ
– ಪೆದ್ದರಿಚ್ಚ

ಭಯ

ಮೋಡದಿ ಕರಗಿ
ಇಳಿಯುವ ಮಳೆಗೆ
ಬೀಳುವ ಭಯವೇಕೆ?
ಮುಂಗಾರಿನ ಹನಿಗೆ
ಹರಿಯುವ ನೀರಲಿ

ಸೇರುವ ಭಯವೇಕೆ?
ಸಾಗರ ಸೇರಲು
ಹರಿಯುವ ನದಿಗೆ
ಹರಿಯುವ ಭಯವೇಕೆ?
ಸೂರ್ಯನ ಕಾವಿಗೆ
ಏರುವ ಆವಿಗೆ
ಹಾರುವ ಭಯವೇಕೆ?

ಭುವಿಯೊಳ ಸೇರಿ
ಚಿಗುರುವ ಬೀಜಕೆ
ಕೊಳೆಯುವ ದಿಗಿಲೇಕೆ?
ತಾಯಿಯ ಗರ್ಭದಿ
ಬೆಳೆದಿಹ ಮಗುವಿಗೆ
ಜನನದ ದಿಗಿಲೇಕೆ?
ದೇವನ ಅಪ್ಪುಗೆ
ಪಡೆಯುವ ಆತ್ಮಕೆ
ಅಂತ್ಯದ ಭಯವೇಕೆ?
ದೇವನ ಆಸರೆ
ಅನುದಿನ ಇರಲು
ಸಾವಿನ ಭಯವೇಕೆ?
– ಪೆದ್ದರಿಚ್ಚ

ಅಳೆಯಲಾಗದ ಶ್ರೇಷ್ಠತೆ

ಜೇನಾಗಲು ಆಗದಿದ್ದರೆ
ಪರವಾಗಿಲ್ಲ
ಮುಂದೆ ಜೇನಾಗುವ
ಮಕರಂದವಾದರೂ ಆಗು.

ಸಾಗರವಾಗಲು ಆಗದಿದ್ದರೆ
ಪರವಾಗಿಲ್ಲ
ಮುಂದೆ ಸಾಗರ ಸೇರುವ
ನದಿಯಾದರೂ ಆಗು.

ನದಿಯಾಗಲು ಆಗದಿದ್ದರೆ
ಪರವಾಗಿಲ್ಲ
ದಾಹ ನೀಗಬಲ್ಲ
ಒಂದು ಹನಿಯಾದರೂ ಆಗು.

ಸಂಗೀತವಾಗಲು ಆಗದಿದ್ದರೆ
ಪರವಾಗಿಲ್ಲ
ಸಂಗೀತಕ್ಕೆ ನೆರವಾಗುವ
ಒಂದು ಸ್ವರವಾದರೂ ಆಗು.

ಅರಣ್ಯವಾಗಲು ಆಗದಿದ್ದರೆ
ಪರವಾಗಿಲ್ಲ
ಮುಂದೆ ಕಾಡಾಗಬಲ್ಲ
ಒಂದು ಸಸಿಯಾದರೂ ಆಗು.

ತೆನೆಯಾಗಲು ಆಗದಿದ್ದರೆ
ಪರವಾಗಿಲ್ಲ
ತೆನೆಗೆ ಬಲ ನೀಡುವ
ಒಂದು ಕಾಳಾದರೂ ಆಗು.

ಪುಸ್ತಕವಾಗಲು ಆಗದಿದ್ದರೆ
ಪರವಾಗಿಲ್ಲ
ಮುಂದೆ ಪುಸ್ತಕವಾಗಬಲ್ಲ
ಒಂದು ಪುಟವಾದರೂ ಆಗು.

ಪದವಾಗಲು ಆಗದಿದ್ದರೆ
ಪರವಾಗಿಲ್ಲ
ಮುಂದೆ ಪದವಾಗುವ
ಒಂದು ಅಕ್ಷರವಾದರೂ ಆಗು.

ದೇವಾಲಯವಾಗಲು ಆಗದಿದ್ದರೆ
ಪರವಾಗಿಲ್ಲ
ಅದರ ಗೋಡೆಯಲ್ಲಿನ
ಒಂದು ಕಲ್ಲಾದರೂ ಆಗು.

ಬೆಂಕಿಯಾಗಲು ಆಗದಿದ್ದರೂ
ಪರವಾಗಿಲ್ಲ
ಬೆಂಕಿಯ ಜ್ವಾಲೆಯನ್ನೆಬ್ಬಿಸುವ
ಒಂದು ಕಿಡಿಯಾದರೂ ಆಗು.

ಹೂಗುಚ್ಚವಾಗಲು ಆಗದಿದ್ದರೆ
ಪರವಾಗಿಲ್ಲ
ಹೂಗುಚ್ಚಗೆ ಅಂದ ನೀಡುವ
ಒಂದು ಹೂವಾದರೂ ಆಗು.

ನಿನೇನು ಮಾಡಬಲ್ಲಯೋ
ಚೆನ್ನಾಗಿ ಮಾಡು
ನೀನೇನು ಆಗಬಲ್ಲೇಯೋ
ಬೇಗನೆ ನೀನಾಗು
ದೇವನು ನಿನ್ನ ನೋಡುವನು
ಕರವೆತ್ತಿ ನಿನ್ನ ಹರಸುವನು
ಅಳೆಯಲಾಗದ ಶ್ರೇಷ್ಟತೆ
ನಿನದಾಗುವುದು ಪೆದ್ದರಿಚ್ಚ!

ಕುರುಡು ಬೆಂಕಿ

ಬಡವನ ಮನೆಗೆ ಬೆಂಕಿ ಬಿತ್ತು
ಬೆಂಕಿಯ ಹೊಗೆಗೂ ಬಡತನ…
ಹಾರಲಿಲ್ಲ ಜಾಸ್ತಿ ಮೇಲೆ.
ಬೆಂಕಿಯ ಕಾವಿಗೆ ಕುರುಡರಾದರು
ಅಲ್ಲಿ ನೆರೆದವರೆಲ್ಲರೂ…
ಕಣ್ಣಿಂದ ಕಾಣಲಾಗದೆ
ಛಾಯಾಗ್ರಾಹಕ ಕ್ಯಾಮೆರದಲಿ ಚಿತ್ರ ಹಿಡಿದ
ಕವಿ ತನ್ನ ಮನೆಯೊಳಗೆ ಕುಳಿತು ಕವಿತೆ ಬರೆದ.
ಸಂಗೀತಗಾರನೊಬ್ಬ ಪದಗಳಿಗೆ ರಾಗ ತುಂಬಿದ.
ಗಾಯಕನೊಬ್ಬ ಮನ ಕಲಕುವಂತೆ ಹಾಡಲು ಕಲಿತ.
ಕಲೆಗಾರನೊಬ್ಬ ಬೆಂಕಿಯ ಅಂದದ ಚಿತ್ರ ಬರೆದ.
ಪತ್ರಕರ್ತ ಸತ್ಯತೆಯ ವರದಿಯನ್ನೊಂದ ಬರೆದ.
ಓಟಗಾರ ಮ್ಯಾರಥಾನ್ ಓಡಲು ಯೋಚಿಸಿದ.
ಸೋಡಾ ಬುಟ್ಟಿ ಅಜ್ಜಿ ಅಯ್ಯೋ ಅಂದಳು
ಕುರುಡು ಜನರ ತಾತ್ಸಾರದ ಬೆಂಕಿಯಲಿ
ಕುರುಡು ಬೆಂಕಿ ಬಡವನ ಸುಟ್ಟಿತು!
-ಪೆದ್ದರಿಚ್ಚ