ಅಳೆತ

ಅಳೆವನು ದೇವನು ನಿನ್ನಯ ಬಾಳನು
ನಿನ್ನಯ ಯಾತ್ರೆಯು ಮುಗಿಯುತಲಿ
ಆತನ ಅಳತೆಗೆ ತೂಗದೆ ಹೋಗಲು
ನರಕದ ಜಾತ್ರೆಯು ಕೊರಗುತಲಿ

ದೇವನ ತಕ್ಕಡಿ ಮೋಸವ ಮಾಡದು
ಅಳೆವುದು ಎಲ್ಲರ ಸರಿಸಮದಿ
ನಿನ್ನಯ ತೂಕಕೆ ನೀನೇ ಹೊಣೆಯು
ದೇವನು ಬರನು ಕೊನೆಕ್ಷಣದಿ

ಜಗದಲಿ ಅಳತೆಯ ತಪ್ಪದೆ ಬಾಳು
ದೇವನು ನಗುತಲಿ ಅಳೆಯುವನು
ತೂಕವ ತಪ್ಪಿ ಮೆರೆಯುತಾ ಬಾಳಲು
ದೇವನೂ ಕೈಯನ್ನು ತೊಳೆಯುವನು
-ಪೆದ್ದರಿಚ್ಚ

ಗೋಳು

ಮೂರು ದಿನದ ಬಾಳು
ಆಗದಿರಲಿ ಗೋಳು
ಮಾಡದದನು ಹಾಳು
ಉಲ್ಲಾಸದಿ ಬಾಳು

ರಂಗು ರಂಗಿನ ಬಾಳು
ಅರಿಯಲದನು ತಾಳು
ಇಲ್ಲವಾದರೆ ಪಾಳು
ತಿನಿಸುವುದು ಕಾಳು

ನಿನ್ನ ಬಾಳನು ಆಳು
ಎಲ್ಲಿ ಬಿದ್ದರೂ ಏಳು
ಮೊಸದಾಸೆಯ ಗೀಳು
ಬೆಳೆಯ ಬಿಡದೆ ಸೀಳು
-ಪೆದ್ದರಿಚ್ಚ

ನೀಡಲು

ನೀಡಲು ನಿನಗೆ ದೇವನೆ ಏನಿದೆ
ಎಲ್ಲವೂ ನಿನದೆ ಜಗದಲ್ಲಿ
ಹೃದಯದ ಪ್ರೇಮವ ಸುರಿಸುವೆ ನಿನಗೆ
ಬೇರೇನು ಇಲ್ಲ ಮನದಲ್ಲಿ

ನಿನ್ನಯ ಬೆಳಕಿನ ಕಿರಣವು ಬೀಳದೆ
ಕತ್ತಲು ಕವಿದಿದೆ ಬಾಳಲ್ಲಿ
ವರಗಳ ಸುರಿಮಳೆ ಬಯಲಿಗೆ ಬೀಳದೆ
ಎಲ್ಲೆಡೆ ಬರಡು ಜಗದಲ್ಲಿ

ನಿನ್ನದೆ ಉಡುಗೊರೆ ಎಲ್ಲವೂ ಇಹದಲಿ
ಏನನು ನೀಡಲಿ ಕರದಲ್ಲಿ
ಎನ್ನನೇ ನಿನಗೆ ಅರ್ಪಿಪೆ ಇರಿಸೋ
ಎನ್ನನು ನಿನ್ನಯ ಮಡಿಲಲ್ಲಿ
-ಪೆದ್ದರಿಚ್ಚ

ಅರಸ

ದೇವನು ಎನ್ನಯ ರಾಜನು ಆಗಿರೆ
ನಾನು ಸೇವಕನಾಗುವೆನು
ಆತನ ರಕ್ಷಣೆ ಅನುದಿನ ಸಿಗುತಿರೆ
ದಾಸನೇ ಆದರೂ ನಲಿಯುವೆನು

ಆತನ ಅಭಯವು ಬಾಳಲಿ ಇರಲು
ನೆಮ್ಮದಿ ನಿದ್ರೆಯ ಹೊಂದುವೆನು
ಆತನ ಎನಗೆ ದಾರಿಯ ತೋರಲು
ಕಣ್ಣನು ಮುಚ್ಚಿ ನಡೆಯುವೆನು

ದೇವನ ಆಸರೆ ಬಾಳಲಿ ದೊರೆಯಲು
ಗುಡಿಸಲೇ ಎನಗೆ ಅರಮನೆಯು
ಆತನ ಪ್ರೇಮದ ಭೋಜನ ಲಭಿಸಲು
ಬಿಸಿಲಿನ ಕಿರಣವೂ ಸುರಿಮಳೆಯು

ದೇವನೆ ತನ್ನ ಪ್ರಜೆಗಳ ಕಾಯಲು
ಎಲ್ಲವ ಮರೆತು ಸಾಗುವೆನು
ಆತನ ಹೆಜ್ಜೆಯ ಜಾಡನು ಹಿಡಿದು
ಸ್ವರ್ಗದ ಅರಮನೆ ಸೇರುವೆನು
-ಪೆದ್ದರಿಚ್ಚ

ನಾಳೆಯೊಂದಿದೆ

ನಾಳೆಯೊಂದಿದೆ ನಮಗೆ
ಕಾಣದ ಆ ಲೋಕದಲಿ
ನಿಲ್ಲಬೇಕು ನಾವು
ಸೃಷ್ಟಿಕರ್ತನ ಎದುರಲಿ
ಬೇರೆಯಿಲ್ಲ ದಾರಿ
ಜಗದ ಯಾತ್ರೆ ಮುಗಿಯುತಲಿ

ನಮ್ಮ ಆ ನಾಳೆಯಲಿ
ನಿಂತಾಗ ದೇವನೆದುರು
ಜಾತಿ ಬೇಧದ ಗಂಧವಿಲ್ಲ
ಎಲ್ಲಾ ದೇವದೂತರು
ನಮ್ಮ ಎದುರು ದೇವರು
ಆತನ ಎದುರು ನಾವೆಲ್ಲರು

ನಮ್ಮ ಆ ನಾಳೆಯು
ಇರುವಾಗ ಎಲ್ಲರಿಗೂ ಅಲ್ಲಿ
ಮೂರು ದಿನದ ಬಾಳಲಿ
ಜಗಳವೇಕೆ ಇಲ್ಲಿ
ದೇವರು ನೀಡಿಹ ಜೀವನ
ಆಗಲಿಲ್ಲೇ ಪಾವನ
-ಪೆದ್ದರಿಚ್ಚ

ಕಲ್ಲು ಮಣ್ಣುಗಳು

1 (52)
ಕಲ್ಲು ಮಣ್ಣುಗಳು
ಒಂದಾಯಿತು ಗೋಡೆಯಲಿ
ಗೋಡೆ ಗೋಡೆಗಳ ಮಿಲನವಾಯಿತು
ಆ ದೇವಾಲಯದಲಿ
ಕಸ ತುಂಬಿದ ಕಲ್ಲು
ಕಲ್ಲು ಮಿಶ್ರಿತ ಮಣ್ಣು
ಆದರೆ…
ಅವುಗಳಿಂದಾದ ದೇವಾಲಯವೋ
ಇಂದಿಗೂ ಪರಮ ಪವಿತ್ರ!

ದೇಹ ದೇಗುಲವಂತೆ!
ಕಸ ತುಂಬಿದ ಮನಸ್ಸು
ಸ್ವಾರ್ಥ ತುಂಬಿದ ಕನಸು
ಪಾವಿತ್ರತೆಗೆ ತುಕ್ಕು ಹಿಡಿದಿದೆ
ಹೊಳಪ ಕಾಣದೆ
ಕಲ್ಲಿನ ಮೂರ್ತಿಯೊಂದನು
ಇಡಲೇ ನನ್ನ ಮನದೊಳಗೆ!
-ಪೆದ್ದರಿಚ್ಚ

ಕಣ್ಣ ನೀರು

Images (36)
ಆವಿಯಾಗಲಿಲ್ಲ
ಮೋಡಗಟ್ಟಲಿಲ್ಲ
ಮಳೆಯು ಹನಿಯಲಿಲ್ಲ
ಆದರೂ ಎಲ್ಲಿಂದಲೋ ಕಣ್ಣಲ್ಲಿ ನೀರು
ಎಲ್ಲಿಂದ ಒಳ ಸೇರಿತೋ!

ಒಮ್ಮೆ ಹರಿದರೆ
ತುಂಬು ನದಿಯಂತೆ
ತಡೆಯಲಾಗದು
ಅಣೆಕಟ್ಟಿಸಲಾಗದು
ಎಲ್ಲಿಂದ ಹೊರಹೊಮ್ಮುವುದೋ!

ಹರಿವ ನೀರಿನಂತೆ
ಶುದ್ದ ಪರಿಶುದ್ದ
ನೋಡಲೂ ಶುದ್ದ
ಮಾಡುವುದೂ ಶುದ್ದ
ಆ ಗುಣ ಎಲ್ಲಿಂದದಕೆ ಬಂದಿತೋ!

ಬೇಕೆಂದರೆ ಹರಿಯದು
ಹರಿದರೆ ನಿಲ್ಲದು
ಹರಿವಿನ ಬಳೀಕ
ಕಣ್ಣಿಗೂ ಆನಂದ
ಮನಸ್ಸಿಗೂ ಆನಂದ
ತಿಳಿಯದದು ಬರುವುದದು ಎಲ್ಲಿಂದ!
-ಪೆದ್ದರಿಚ್ಚ

ಮಿಗಿಲಾದವನು

Images (37)
ನಿನ್ನ ಯೋಚನೆಗಿಂತ
ಮಿಗಿಲಾದವನು ನೀನು
ಒಮ್ಮೆ ಸರಿಯಾಗಿ ನೋಡು…
ಶಕ್ತಿಯ ಕಣಜ ನೀನು
ಬಲದ ಆಗರ
ಮುಗಿಯದ ಖನಿಜ ನೀನು
ದೇವನ ಆಕರ

ನಿನ್ನ ಕಲ್ಪನೆಗಿಂತ
ಶ್ರೇಷ್ಟವಾದವನು ನೀನು
ಒಮ್ಮೆ ಧ್ಯಾನಿಸಿ ನೋಡು…
ದೇವನ ಆಲಯ ನೀನು
ಆತನ ಮೂರ್ತಿ
ಆತನ ದೇಗುಲ ನೀನು
ಬೆಳಗಲಾತನ ಕೀರ್ತಿ
-ಪೆದ್ದರಿಚ್ಚ

ಒರತೆ

Images (77)

ಬಯಕೆಯಿದೆ ದೇವನ ಕಾಣಲು
ಸ್ವಲ್ಪ ಛಲದ ಕೊರತೆ
ದೇವನೇ ಎದುರಾಗಿ ನಿಂತರೂ
ಹುಡುಕುತಿರುವೆ ಒರತೆ!

ಮಾಡುತಿರುವೆ ಪ್ರಾರ್ಥನೆ ಅನುದಿನ
ಸ್ವಲ್ಪ ವಿಶ್ವಾಸದ ಕೊರತೆ
ದೇವನೇ ನೀಡುವೆನೆಂದರೂ
ಹುಡುಕುತಿರುವೆ ಅರಿಯದ ಒರತೆ!

ಹುಡುಕುತಿರುವೆ ದೇವನ ಬಾಳಲಿ
ಸ್ವಲ್ಪ ಜ್ಞಾನದ ಕೊರತೆ
ದೇವನೇ ಸುಜ್ಞಾನ ನೀಡಿದರೂ
ಹುಡುಕುತಿರುವೆ ಬುದ್ದಿಯ ಒರತೆ!

ಬಾಳುತಿರುವೆ ಜೀವನ ಜಗದಲಿ
ಸ್ವಲ್ಪ ಪ್ರೀತಿಯ ಕೊರತೆ
ದೇವನೇ ಪ್ರೀತಿಸುತಿದ್ದರೂ
ಹುಡುಕುತಿರುವೆ ಪ್ರೇಮದ ಒರತೆ!
-ಪೆದ್ದರಿಚ್ಚ

ಕಣ್ಣು ಕಾಣದ ಕುರುಡ

Images (78)

ಮನಸ್ಸಿನಲಿ ಮೂಡಿದೆ ಒಂದು
ಏಕಮುಖಿ ಸತ್ಯ
ಹೋರಾಡುತಿಹೆ ಸಾಧಿಸಲು ಅದನು
ಏಕೆನೆ ಕಣ್ಣು ಕಾಣದ ಕುರುಡ ನಾನು

ಅಂಗಲಾಚುತಿದೆ ಮನವೊಂದು
ಅಗಳು ಅನ್ನಕೆ
ನೋಡಲಾಗುತ್ತಿಲ್ಲ ಚೀರಾಡುತ್ತಿರುವ ಅದನು
ಏಕೆನೆ ಕಣ್ಣು ಕಾಣದ ಕುರುಡ ನಾನು

ಕರ ಮುಗಿದೆ ಬೇಡುತಿದೆ ಮಗುವೊಂದು
ಪ್ರೀತಿಯ ಮುತ್ತಿಗೆ
ಸ್ಪಂದಿಸಲಾಗುತ್ತಿಲ್ಲ ಅದರ ಬೇಡಿಕೆಗೆ
ಏಕೆನೆ ಕಣ್ಣು ಕಾಣದ ಕುರುಡ ನಾನು

ಸುಳ್ಳಿನ ಹೊಗೆಯಲಿ ಕೂಗುತಿದೆ ಹೆಣ್ಣೊಂದು
ಪೋಷಕರ ರಕ್ಷಣೆಗೆ
ಹೋಗಲಿ ಹೇಗೆ ರಕ್ಕಸರ ಸ್ವಾರ್ಥದ ಜ್ವಾಲೆಯಲಿ
ಏಕೆನೆ ಕಣ್ಣು ಕಾಣದ ಕುರುಡ ನಾನು
-ಪೆದ್ದರಿಚ್ಚ