ನದಿಸದಿರದು

Images (83)ನೀರನು ಸುಟ್ಟರೂ ಬೆಂಕಿಯನು
ನದಿಸದಿರದು ನೀರೆಂದು
ಬಾಳಿನ ಸುಳಿಯಲಿ ನಲುಗಿದರು
ಸೋಲದಿರು ಮಗು ನೀನೆಂದು

ಸೋಲಲಿ ಗೆಲುವಿಗೆ ಹಾದಿಯಿದೆ
ಸೋಲಿಗೆ ಹೆದರದ ಮನುಜನಿಗೆ
ಬಿದ್ದರೂ ಏಳುವ ಚಲವಿರಲಿ
ಗೆಲುವಿದೆ ಮಗುವೆ ಬಾಳಿನಲಿ

ಏರು ನೀ ಬಾಳಿನ ಶಿಖರವನು
ಮರೆಯದೆ ನಿನ್ನಯ ಗುರಿಯನ್ನು
ನಿನ್ನಯ ದೇವನು ಕಾದಿಯನು
ನೀಡಲು ಘನ ಬಹುಮಾನವನು
-ಪೆದ್ದರಿಚ್ಚ

 

ಬನ್ನಿರಿ

Images (82)ಸ್ವರ್ಗದ ದೇವನು ಭುವಿಯ ಮನುಜನ
ತನ್ನಯ ಮಗುವಂತೆ ಕಾಣುವನು
ಅರಿಯದ ಮನುಜನು ಭುವಿಯಲಿ ದೇವನ
ಮರೆತು ಜೀವನ ಬಾಳುವನು

ದೇವನ ಪ್ರೀತಿಯ ಅರಿಯುವ ಮನುಜನು
ದೇವನ ನೆರಳಲಿ ಬಾಳುವನು
ಬೆನ್ನನು ತೋರಲು ಪ್ರೀತಿಗೆ ದೇವನ
ಕತ್ತಲ ತೋಳಲಿ ನರಳುವನು

ತಂದೆಯ ಪ್ರೀತಿಯ ತೋರುವ ದೇವನ
ಬನ್ನಿರಿ ಕಂಡು ನಮಿಸೋಣ
ಮಕ್ಕಳು ನಾವು ಆ ಸ್ವರ್ಗದ ರಾಜನ
ಬನ್ನಿರಿ ಆಡುತ ನಲಿಯೋಣ
-ಪೆದ್ದರಿಚ್ಚ

ನದಿಗೆ

ಸಾಗರದ ಬಳಿಗೆ
ಹರಿಯುವ ನದಿಗೆ
ತೀರದ ಸ್ನೇಹವು
ಸೆಳೆಯುತ ಇಹುದು
ಹರಿಯುವ ನದಿಗೆ

ತವರನು ಸೇರುವ
ತವಕವು ನದಿಗೆ
ಬೆಟ್ಟ ಗುಡ್ಡವ
ಕಂಡು ಹೆದರದೆ
ಸಾಗಿದೆ ಮನೆಗೆ

ಸಾಗರದ ಕಡೆಗೆ
ಹರಿಯುವ ನದಿಗೆ
ಅಡೆ ತಡೆಗಳು
ಸಾವಿರ ಇಹವು
ಹರಿಯುವ ನದಿಗೆ

ಮನದ ಗೂಡಲಿ
ಸಂತಸ ನದಿಗೆ
ಸಾಗರ ಸೇರಿ
ತನ್ನನೇ ಮರೆಯುವ
ಸಂತಸ ನದಿಗೆ
-ಪೆದ್ದರಿಚ್ಚ

ಕೃಪೆ

ದೇವರ ಕೃಪೆಯು ನಿನ್ನೊಳಗಿರಲು
ಪಾಪದ ನೆರಳಿನ ಭಯವೇಕೆ?
ಆತನ ಅನುಗ್ರಹ ನಿನ್ನೊಡನಿರಲು
ಸಾಗಲು ಮುಂದೆ ದಿಗಿಲೇಕೆ?

ದೇವನ ಕೃಪೆಯು ಸಾಗರವಂತೆ
ಪಾಪವು ಮರಳಿನ ಕಣವೊಂದು
ಆತನು ಪ್ರೇಮದ ಆಗರವಂತೆ
ಹರಸಲು ಸಾಕು ಕ್ಷಣವೊಂದು

ಪಾಪದ ಮಡಿಲಲಿ ಮರುಗುವೆ ಏಕೆ
ದೇವನ ಒಮ್ಮೆ ಅಪ್ಪಿಬಿಡು
ಆತನ ಕೃಪೆಯನು ತಡೆಯುವೆ ಏಕೆ
ಹೆದರದೆ ದೇವಗೆ ಪಪ್ಪಿಕೊಡು!
-ಪೆದ್ದರಿಚ್ಚ

ತುದಿಗೆ

ಸಾಗು ನೀ ಮನುಜ ಗಿರಿಯ ಆ ತುದಿಗೆ
ಕಾದಿದೆ ಸ್ವರ್ಗದ ಅನುಭವವು
ಸಂದಣಿ ಜನರ ತೊಂದರೆ ಇರದು
ಕೆಲವರೆ ಸೇರುವ ಆಲಯವು

ಹೆಜ್ಜೆಗೆ ಹೆಜ್ಜೆಯ ಇರಿಸುತಾ ಸಾಗು ನೀ
ಮನಸಲಿ ಬೆಳೆಸುತಾ ಧೈರ್ಯವನು
ಸೂರ್ಯನ ಹೊನ್ನಿನ ಕಿರಣದ ಸಾಲಲಿ
ಕಾಣುವೆ ಸುಂದರ ಸ್ವರ್ಗವನು

ಹರಿವಿನ ಸೆಳೆತಕೆ ಸಿಲುಕದೆ ಬಾಳಲಿ
ಏರು ನೀ ಗಿರಿಯ ಮೆಟ್ಟಿಲನು
ಮೆಟ್ಟಿದ ಬಳಿಕ ತುದಿಯನು ಕಾಲಲಿ
ಹಾಡುವೆ ವಿಜಯದ ಘೋಷವನು
-ಪೆದ್ದರಿಚ್ಚ

ಹೊಸ ಪುಟ

ತೆರೆದಿದೆ ಮತ್ತೇ
ಬಾಳಿನ ಪುಟವು
ಬನ್ನಿರಿ ನಾವು ಬರೆಯೋಣ
ಪುಟವೂ ನಮದೇ
ಲೇಖನಿ ನಮದೇ
ಧೈರ್ಯದಿ ಪದಗಳ ಕೊರೆಯೋಣ

ಮನದಲಿ ಮೂಡುವ
ಸುಂದರ ಹೂಗಳ
ಅಂದದ ಬಣ್ಣದಿ ಬಿಡಿಸೋಣ
ವಿಧವಿಧ ಹೂಗಳ
ಅನುದಿನ ಬಿಡಿಸುತಾ
ಸುಂದರ ಗುಚ್ಛವ ಕಟ್ಟೋಣ

ಕಣ್ಣಿನ ಮುಂದಿದೆ
ಸುಂದರ ಹಾಳೆಯು
ನಗುತಲಿ ಇಂದೇ ತೆರೆಯೋಣ
ನಾಳಿನ ಚಿಂತೆಯ
ಸುರಿಯುತಾ ಚಿತೆಗೆ
ಬಾಳಿನ ಪುಸ್ತಕ ಬರೆಯೋಣ
-ಪೆದ್ದರಿಚ್ಚ

ವರುಷದ

Images (61)
ಮೂರೇ ದಿನದ ಎನ್ನಯ ಬಾಳಲಿ
ವರುಷದ ಕ್ಷಣವು ಕಳೆದೋಯ್ತು
ಕಣ್ಣನು ತೆರೆದು ಬಿಡುವ ಮೊದಲೇ
ವರುಷವು ಸುಮ್ಮನೆ ಮರೆಯಾಯ್ತು

ದೇವನೆ ನಿನಗೆ ಹೇಳುವ ವಂದನೆ
ಸ್ಮರಿಸುತಾ ನಿನ್ನುಪಕಾರವನು
ವರುಷವ ನೀಡಿದ ಕರ್ತನೆ ನಿನಗೆ
ಹಾಡುವೆ ಜಪಿಸುತಾ ನಿನ ನಾಮವನು

ಕ್ಷಮಿಸು ನೀ ದೇವಾ ಬೇಡುವೆ ನಿನ್ನನು
ಬಳಸಲು ಕ್ಷಣಗಳ ಸೋತಿಹೆನು
ನಿನ್ನಯ ವರಗಳ ಸುರಿಮಳೆ ಅರಿಯದೆ
ಮರೆತು ನಾ ಇಂದು ಕುಳಿತಿಹೆನು
-ಪೆದ್ದರಿಚ್ಚ

ಕೆಲಸ

Images (54)
ಕೆಲಸವ ಮಾಡದೆ ಸುಮ್ಮನೆ ಕುಳಿತರೆ
ಬಾಳಿಗೆ ತುಕ್ಕು ಹಿಡಿಯುವುದು
ದುಡಿಯುವ ಮನಸ್ಸನು ಮೂಲೆಗೆ ಬಿಟ್ಟರೆ
ಶಾಪದ ಸಿಡಿಲು ಬಡಿಯುವುದು

ದುಡಿಯುವ ಮನುಜಗೆ ದೇವನು ಒಲಿವನು
ಕಣಕಣದಲೂ ಆತನೇ ಕಾಣುವನೌ
ಬೆವರಿನ ಹನಿಗಳ ನೋಡುತ ಆತನು
ವರಗಳ ಮಳೆಯನೇ ಸುರಿಸುವನು

ದುಡಿಯುವ ಬನ್ನಿ ದೇವನ ಹೊಲದಲಿ
ಬಿತ್ತುವ ಚಿನ್ನದ ಬೀಜವನು
ಭರವಸೆ ಇರಿಸಿ ದೇವನ ವರದಲಿ
ಸವಿಯುವ ಹೊನ್ನಿನ ರಾಶಿಯನು
-ಪೆದ್ದರಿಚ್ಚ

ಕುಟುಂಬ

Images (71)ಹುಡುಕದೆ ಹೆಕ್ಕದೆ ಸಿಕ್ಕಿತು ಎನಗೆ
ತಂದೆ ತಾಯಿಯ ಒಡನಾಟ
ಸಮಯವ ಅರಿಯದೆ ಬೆಳೆದೆ ನಾ ಸವಿಯುತಾ
ಸೋದರ ಪ್ರೇಮವ ಸಿಹಿ ಆಟ

ಪ್ರೇಮವ ಅರಸುವ ಮನುಜನ ಮನಸ್ಸಿಗೆ
ಕುಟುಂಬ ದೇವರ ವರದಾನ
ಜಗದಲಿ ಓಟದ ಭರದಲಿ ಸೋತರೂ
ಸಿಗುವುದು ಮನೆಯಲಿ ಸಾಂತ್ವಾನ

ಸ್ವಾರ್ಥದ ಜಗದಲಿ ಬಾಳುವ ನಮಗೆ
ಮನೆಯಲಿ ಪ್ರೇಮದ ಭೋಜನವು
ಮಲಿನತೆ ವಿಷವು ಸುರಿಯುವ ಘಳಿಗೆ
ಕುಟುಂಬದಿ ಪ್ರೀತಿಯ ಮಜ್ಜನವು
-ಪೆದ್ದರಿಚ್ಚ

ಬೂದಿ

Images (83)
ಸ್ವಾರ್ಥದ ಉರಿ
ಸುಡಲು ಆರಂಭಿಸಿತು
ಪ್ರೀತಿಯ ಹೂವುಗಳನು
ಬೆಂಕಿಗೇನು ತಿಳಿದಿದೆ
ಹೂವಿನ ಮನಸ್ಸು
ಮುಗ್ದತೆಯ ಅರಿವು
ನಾಶವಾಯಿತು ಕ್ಷಣದಲಿ
ಸ್ವಾರ್ಥದ ಧಗೆಗೆ
ಓಡುತ್ತಿದೆ ಬೆಂಕಿ ದಿಕ್ಕಿಲ್ಲದೆ
ಕಣ್ಣಿಲ್ಲ, ಕಿವಿಯಿಲ್ಲ
ಸ್ಪರ್ಶದ ಸುಖದ ಅರಿವಿಲ್ಲ
ಸಾಗುತ್ತಿದೆ ಆಯಸಗೊಳ್ಳದೆ
ಆ ಓಟದ ರೇಸಿನಲಿ ಜಯಗಳಿಸುವಂಟೆ
ನಶಿಸಿ ಹೋದ ಬೂದಿಯ ನಡುವೆ
ಜಯವ ಕಾಣುವವರಾರು?
ಬಹುಮಾನ ನೀಡುವವರಾರು?
ಉರಿಯುತಾ
ಸುಡುತಾ
ಸಾಗಿದ ಬೆಂಕಿಗೆ
ಇಂದು ಬೂದಿಯ ಬಹುಮಾನ!
-ಪೆದ್ದರಿಚ್ಚ