ವಿಧವೆಯಲ್ಲ ನಾನು!

Images (77)ವಿಧವೆಯಲ್ಲ ನಾನು
ಪತಿ ದೇವರನ್ನು ವರಿಸಿ
ಪ್ರೀತಿಯನು ಸವಿದು
ವರುಷಗಳ ಬಾಳಿದೆ
ಪತಿ ದೇವನಲಿ
ಇಂದು ಪತಿ ಮಾತ್ರ ಇಲ್ಲ
ದೇವನಿನ್ನೂ ಇರುವನು
ಆತನಿರಲು ನನ್ನ ಜೊತೆ
ವಿಧವೆಯಲ್ಲ ನಾನು!

ಹೂವುಗಳು ಜೊತೆಗಿರುವುವು
ಎಷ್ಟು ದಿನ?
ಬಾಡುವ ತನಕ
ಇಲ್ಲಾ ಎಸಳು ಉದುರುವ ತನಕ!!!
ಕೆಲ ಹೂವುಗಳೇ ಹಾಗೇ
ಬಾಡುವುವು ಬೇಗ
ಎಸಳ ಉದುರಿಸಿ…
ಬೇರೂರಿರುವ ಗಿಡದಲ್ಲಿ ನಾನಿಂತಿರಲು
ವಿಧವೆಯಲ್ಲ ನಾನು!

ಗಿಡದ ಹೂವು ಗಿಡದ್ದೇ?
ಹೂದೋಟದ ಒಡೆಯನದ್ದು…
ಆತ ಹೂವ ನೋಡಿ ನಲಿವನು
ಒಮ್ಮೆಮ್ಮೆ ಕಿತ್ತು
ತಲೆಗೆ ಮುಡಿದು ನಲಿವನು
ಒಡೆಯನೇ ಹೂವನು
ಕಿತ್ತೊಯ್ದು ಮುಡಿಗೇರಿಸಿರುವಾಗ
ನಾನೇಕೆ ದುಃಖ ಪಡಲಿ
ಒಡೆಯನ ಮುಡಿಯಲಿ
ನನ್ನಿಯನಿರುವಾಗ
ಒಡೆಯನ ನೋಡುತಿರೇ
ವಿಧವೆಯಲ್ಲ ನಾನು!
-ಪೆದ್ದರಿಚ್ಚ

ಮೋಡದ ದರ್ಪ

Images (78)

ಭುವಿಯ ಹಸಿರು ನನ್ನಿಂದಲೇ
ದರ್ಪದಿಂದ ಬೀಗುತಾ
ಘರ್ಜಿಸಿದ ಮೋಡಕೆ
ಭುವಿಯಿಂದ
ದೀನ ಮೌನದ ಉತ್ತರ
ಸಹಜವೇ…
ಹಸಿರಿಗೆ ಬಸಿರು ನೀಡಿದ
ತಾಯಿ ಅವಳು
ದೀನತೆಯ ಸುಪುತ್ರಿ.
ಮೋಡದ ದರ್ಪದಿಂದ ಘರ್ಜನೆ ಮಾತ್ರ
ಜೀವದ ಬಸಿರೋ
ದೀನ ಭುವಿಗೆ ಮೀಸಲು
ಭುವಿಯ ನಗುವ ಮನಸ್ಸಿಗೆ
ಜಿನುಗುವ ದೀನತೆಗೆ
ಮೋಡದ ದರ್ಪ ಕರಗಿದೆ
ಮಳೆಯಾಗಿ ಸುರಿಯುತಿದೆ
ಭುವಿಯ ತಣಿಸಲು!
-ಪೆದ್ದರಿಚ್ಚ

ಅರಸನ ಮಗನೇ

Images (76)
ಅರಸನ ಮಗನೇ ಇರು ಅರಮನೆಯಲ್ಲಿ
ಕೊಟ್ಟಿಗೆಯನ್ನು ಬಯಸುವೆ ಏಕೆ?
ಗಂಧ ಸುವಾಸನೆ ಸವಿಯುವ ಬದಲು
ಸಗಣಿಯ ನೆಕ್ಕುವ ಆಸೆಯು ಏಕೆ?

ಹುಲ್ಲಿನ ಕಾವಲು ನಿನಗಿದೆ ಮೀಸಲು
ಮುಳ್ಳಿನ ನಾಡನು ಬಯಸುವೆ ಏಕೆ?
ಮೆತ್ತನೆ ಹುಲ್ಲನು ಸವಿಯುವ ಬದಲು
ಮುಳ್ಳನು ಜಗಿಯುವ ಬಯಕೆಯು ಏಕೆ?

ಚಿನ್ನದ ನಾಣ್ಯ ನೀ ಇರು ಪೆಟ್ಟಿಗೆಯಲ್ಲಿ
ಕತ್ತಲೆ ಕೋಣೆಯ ಸೇರುವೆ ಏಕೆ?
ಬೆಳಕಿನ ಕಿರಣದಿ ಹೊಳೆಯುವ ಬದಲು
ಮೂಲೆಯ ಧೂಳಿನ ಆಸೆಯು ಏಕೆ?

ಸೃಷ್ಟಿಯ ಅರಸನ ಕೃತ್ಯವು ನೀನು
ಸಕಲವು ನಿನದೆ ಅರಿಯದು ಏಕೆ?
ಆತನ ರಾಜ್ಯದ ಕುವರನು ನೀನು
ಶೋಷಿಪ ದಾಸ್ಯವ ಬಯಸುವೆ ಏಕೆ?
-ಪೆದ್ದರಿಚ್ಚ

ಅಗೋ ದೂರದಿ

Images (75)
ಕತ್ತಲ ಕಾಡಿನಲಿ ನಡೆಯುವ ನನಗೆ
ಅಗೋ ದೂರದಿ
ಅಗೋ ದೂರದಿ ಮಿನುಗುತಿದೆ ಕಿಡಿಯು
ಇಲ್ಲೋ!!!
ಸರ್ವವನು ತನ್ನ ಗರ್ಭದಲಿ
ಹಿಡಿದಿದೆ ಭಾರಿ ಕತ್ತಲು
ಆದರೆ…
ಆ ಕಿಡಿಯನ್ನೊಂದನ್ನು ಬಿಟ್ಟು
ಆಹಾ!
ಆ ಕಿಡಿಯೆಲ್ಲಿ?
ಈ ಭಾರಿ ಕತ್ತಲೆಲ್ಲಿ?
ಆದರೂ ಕತ್ತಲ ಜಯಿಸುವ
ದೈರ್ಯ ಆ ಕಿಡಿಯಲಿ.

ಕತ್ತಲ ಗರ್ಭದಲಿ
ಬೆಸೆದು ಬೆಳೆದ ನನಗೆ
ಆಕೆಯಲಿ ಬಿಡಿಸಲಾಗದ ನಂಟು
ಆದರೂ ಆ ಕಿಡಿ…
ಆದರೂ ಆ ಕಿಡಿ ಎನ್ನ ಸೆಳೆಯುತಿದೆ!
ನಂಟು ಹೆಚ್ಚು ಹೊತ್ತು
ಅಂಟಿಕೊಂಡಿರಲಾರದು
ಆ ಕಿಡಿಯ ಜಯವೋ!!!
ಸೋಲನ್ನು ಅರಿಯದ್ದು
ಹೊರಡುವೆ
ಈಗಲೇ ಹೊರಡುವೆ
ಕಿಡಿಯಾದರೇನಂತೆ?
ಅದರ ಜಯದ ಹೆಜ್ಜೆಯಲಿ
ಹೆಜ್ಜೆ ಇಡುತಾ ಸಾಗಲು…
-ಪೆದ್ದರಿಚ್ಚ

ಕುರುಡನ ಹಾದಿಗೆ

ಕುರುಡನ ಹಾದಿಗೆ
ಕುರುಡನು ದಿಕ್ಕನು
ತೋರಿಸುತಿಹನು ಅಗೋ ನೋಡು
ಕಾಣದ ಬೆಳಕನು
ಕಾಣದ ಕುರುಡಗೆ
ಕಿವಿಯಲಿ ತುರುಕುತಿಹನು ನೋಡು

ಬೆಳಕನು ನೋಡದ
ಕುರುಡನು ಸಾಗುತಾ
ಕಾಣುವ ಹೊಂಡಕೆ ಬೀಳುತಲಿಹನು
ಆತನ ಮಾತಿಗೆ
ಕಿವಿಯನು ನೀಡಿದ
ಸಾಲು ಹೊಂಡಕೆ ಸಾಗುತಲಿಹುದು

ಕಣ್ಣಿನ ಪೊರೆಯನು
ಸರಿಸು ನೀ ಬದಿಗೆ
ಕತ್ತಲ ಜಗದಲಿ ಎಡವದಿರು
ಕಾಣದೆ ಬೆಳಕನು
ದಾರಿಯ ತೋರುವ
ಕುರುಡನ ನಂಬಿ ಬೀಳದಿರು
-ಪೆದ್ದರಿಚ್ಚ

ನೀಡುವ ಆಟ

ಸಾಲವು ಲಾಭಕೆ
ದಾನವು ಲಾಭಕೆ
ಅನುದಿನ ಬಾಳಲಿ
ನೀಡುವ ಆಟಕೆ

ಜಗದಲಿ ಸಾವಿದೆ
ಸಾಲದ ಲಾಭಕೆ
ಪರದಲಿ ಬದುಕಿದೆ
ದಾನದ ಲಾಭಕೆ

ನೀಡು ನೀ ಬಾಳಲಿ
ಪರನ ಆ ಪ್ರೀತಿಗೆ
ಪಡೆಯುವೆ ನೂರ್ಮಡಿ
ಮೇಲಿನ ಬಾಳಿಗೆ

ನಿನ್ನಯ ಬಾಳಿಗೆ
ಬಯಸುವ ಒಳಿತನು
ಮಾಡು ನೀ ಪರನಿಗೆ
ಗಳಿಸುವೆ ನಿಧಿಯನು
-ಪೆದ್ದರಿಚ್ಚ

ಬೇಕು

ಸಗಣಿಯನೇ ನೋಡುವವನು
ಮುತ್ತನು ಅರಿಯನು
ಮುತ್ತ ಪಡೆಯಲು
ಅರಿಯಬೇಕು ಸಾಗರದ ಆಳವನು

ರದ್ದಿಯನ್ನು ನೋಡುವವನು
ಜ್ಞಾನವ ಅರಿಯನು
ಜ್ಞಾನವ ಗಳಿಸಲು
ಓದಬೇಕು ಬರೆದ ಅಕ್ಷರವನು

ಸೆರೆಮನೆಯೊಳಗೇ ಇರುವವನು
ಸುರಿಮಳೆಯ ನೋಡನು
ಸುರಿಮಳೆಯ ಸವಿಯಲು
ನೋಡಬೇಕು ತೇಲುವ ಮೋಡವನು

ಆಸೆಗೆ ಬಲಿಯಾದವನು
ದೇವನ ಕಾಣನು
ದೇವನ ಅರಿಯಲು
ನೋಡಬೇಕು ತನ್ನ ಅಂತರಂಗವನು
-ಪೆದ್ದರಿಚ್ಚ

ಭಕ್ತನು

ಹಸಿವನೇ ಮರೆಸುವ
ದೇವನಲಿ
ಉಪವಾಸ ಮಾಡಿ
ಕೇವಲ ಅನ್ನಕ್ಕಾಗಿ ಬೇಡುತಿಹನು ಭಕ್ತನು

ಜೀವನವನೇ ನೀಡುವ
ದೇವನಲಿ
ಪೂಜೆ ಮಾಡಿ
ಕೇವಲ ಮದ್ದಿಗಾಗಿ ಮೊರೆಯಿಡುತಿಹನು ಭಕ್ತನು

ಗಗನದಲಿ ಹಾರಿಸಬಲ್ಲ
ದೇವನಲಿ
ಹಟ ಮಾಡಿ
ನೆಗೆಯಲು ನೆರವ ಕೇಳುತಿಹನು ಭಕ್ತನು

ಅಮೃತವ ನೀಡುವ
ದೇವನಲಿ
ಆರಾಧನೆ ಮಾಡಿ
ಸಿಹಿ ಪಾನಕಕೆ ಹಾತೊರೆಯುತಿಹನು ಭಕ್ತನು
-ಪೆದ್ದರಿಚ್ಚ

ಚಾಚ ಬಾರದೇ

ಕರ ಚಾಚಬಾರದೆ ಒಮ್ಮೆ
ನೆರವು ನೀಡಲು
ಕಾದಿದೆ ನೆರವ ಕೇಳಿ
ಹಸಿದ ಮನವು

ಕರ ಚಾಚಬಾರದೆ ಒಮ್ಮೆ
ಕರವ ಹಿಡಿಯಲು
ಕಾದಿದ ಸ್ನೇಹಕೆ ಬಳಲಿ
ಏಕಾಂಕಿ ಮನವು

ಕರಚಾಚ ಬಾರದೆ ಒಮ್ಮೆ
ಬೆನ್ನ ತಟ್ಟಲು
ಕಾದಿದೆ ಮುತ್ತ ನುಡಿಗೆ
ಹಟಮಾರಿ ಮನವು

ಕರ ಚಾಚ ಬಾರದೆ ಒಮ್ಮೆ
ಮೇಲೆ ಎತ್ತಲು
ಕಾದಿದೆ ನಗೆಯ ಸ್ಪರ್ಶಕೆ
ಮುದ ನೀಡುವ ಮಗುವು

ಚಾಚಲೆಂದೇ ನಗುತಾ ನಿನ್ನ ಕರಗಳ
ಇರಿಸಿಹನು ದೇವ ಅವುಗಳಲಿ ಕೀಲ್ಗಳ
ಚಾಚಬಾರದೇ ಒಮ್ಮೆ ಹಿಡಿದು ಹೂಗಳ
ಹಾಡಲು ಪರರ ಬಾಳಲಿ ಮಂಗಳ
-ಪೆದ್ದರಿಚ್ಚ

ತಾಯಿ

ನಾಮಪದವಲ್ಲ ತಾಯಿ
ಅಂತ್ಯಕಾಣದ ಕ್ರಿಯಾ ಪದ
ಗರ್ಭದಿಂದ ಬಂದಾಕೆ
ಮುಗಿಯದು ಆಕೆಯ ಕೆಲಸ
ಭೂ ಗರ್ಭ ಸೇರುವ ತನಕ

ತುತ್ತ ನೀಡುವವಳಲ್ಲ ತಾಯಿ
ಬಾಳ ಪುಸ್ತಕ ಓದುವ ಜ್ಞಾನಿ
ಅನುದಿನ ಓದುವಾಕೆ
ತಪ್ಪಾಗದು ಆಕೆಯ ಓದು
ಪುಸ್ತಕ ಕೊನೆಯಾತುವ ತನಕ

ಆಟಿಕೆಯ ಗೊಂಬೆಯಲ್ಲ ತಾಯಿ
ಸತ್ಯ ನುಡಿವ ನ್ಯಾಯ ದೇವತೆ
ಹೃದಯದಿಂದ ನೋಡುವಾಕೆ
ತಪ್ಪಾಗದು ಆಕೆಯ ತೀರ್ಪು
ನ್ಯಾಯಲಯ ಮುಚ್ಚುವ ತನಕ
-ಪೆದ್ದರಿಚ್ಚ