ಸುಮಧುರವಾಗಿ ಹಾಡುವ ಕೋಗಿಲೆಯೇ,
ದೇವನಾರು?
ಆತನೋ ಸಂಗೀತಗಾರನು!
ಮೈಮರೆತು ನಲಿವ ನವಿಲೇ,
ದೇವನಾರು?
ಆತನೋ ನೃತ್ಯಗಾರನು!
ನಗುವ ಬಣ್ಣ ಬಣ್ಣದ ಹೂವೇ,
ದೇವನಾರು?
ಆತನೋ ಚಿತ್ರಗಾರನು!
ಹಚ್ಚ ಹಸಿರಿನ ಸಕಲ ಸೃಷ್ಟಿಯೇ
ದೇವನಾರು?
ಆತನೋ ರಚನಾಕಾರನು.
ಸ್ವಾರ್ಥದ ಅಲೆಯಲಿ ಈಜುವ
ಮಾನವ ಮಾತ್ರ
ಇನ್ನು ಹುಡುಕುತಿಹನು ಅರಿಯಲು
ಆ ದೇವನಾರು!!!
– ಪೆದ್ದರಿಚ್ಚ
Category: Uncategorized
ಪಾಪದ ಕಲೆಯೇ

ಪಾಪದ ಕಲೆಯೇ
ಅಂಟಿಕೊಂಡಿರುವೆ ಏಕೆ?
ಹೋಗಬಾರದೆ ಒಮ್ಮೆ
ಹಟ ಮಾಡುವೆ ಏಕೆ?
ತಿಳಿಯದೆ ಎಡವಿಬಿಟ್ಟೆ
ಅರಿತು ಕ್ಷಮಿಸಬಾರದೆ?
ಪಾಪದ ಕಲೆಯೇ
ಶೋಷಿಸುತಿರುವೆ ಏಕೆ?
ಸಂತಸವೇ ನಿನಗೆ
ಚುಚ್ಚುತಿರುವೆ ಏಕೆ?
ತಪ್ಪ ಒಪ್ಪಿಕೊಂಡಿರುವೆ
ಅರಿತು ಕ್ಷಮಿಸಬಾರದೆ?
ಪಾಪದ ಕಲೆಯೇ
ಕೊಚ್ಚುಕೊಳ್ಳುವೆ ಏಕೆ?
ನಿನಗಾವ ಅಂದವೇ
ನಿನ್ನ ವರಿಸುವರು ಏಕೆ?
ಇನ್ನು ನಾನು ಹೆದರೆನು
ಹೊರಹೋಗು ಒಮ್ಮೆ!
– ಪೆದ್ದರಿಚ್ಚ
ಬಡವ
ಬಡವ ಬಡವನಲ್ಲ
ಸಿರಿವಂತ ಆತ
ಹೃದಯದಿ ಮರಳಿಲ್ಲ
ಹೊಳೆವ ಹರಳು ಆತ
ನಂಬಿ ಬದುಕುವ ಆತ
ಬಡವನಲ್ಲ ಸಿರಿವಂತ
ವಯಸ್ಸಾಗಿದೆ ರೋಗವಿಲ್ಲ
ದೈವಾನುಗ್ರಹದ
ಬಲವಿದೆ ಜೇಬಲ್ಹಣವಿಲ್ಲ
ದುಡಿದು ಬಾಳ್ವ ಛಲವಂತ
ನಂಬಿ ಬದುಕುವ ಆತ
ಬಡವನಲ್ಲ ಸಿರಿವಂತ
ನಾಳೆಯ ಚಿಂತೆಯಿಲ್ಲ
ಆತ ನಂಬುವ ಭಗವಂತ
ಅಗೆಯಲು ಆಸ್ಥಿಯಿಲ್ಲ
ಬೆಳೆ ಬೆಳೆವ ಬುದ್ದಿವಂತ
ನಂಬಿ ಬದುಕುವ ಆತ
ಬಡವನಲ್ಲ ಸಿರಿವಂತ
ಸ್ವಾರ್ಥದ ನೆರಳಿಲ್ಲ
ಕರ ನೀಡೊ ಧನವಂತ
ಬಚ್ಚಿಡುವ ಮನಸ್ಸಿಲ್ಲ
ನಗು ನೀಡೋ ದಾನವಂತ
ನಂಬಿ ಬದುಕುವ ಆತ
ಬಡವನಲ್ಲ ಸಿರಿವಂತ
– ಪೆದ್ದರಿಚ್ಚ
ಸಂಬಂಧ
ತಿನ್ನು, ಕುಡಿ, ಮಜಾ ಮಾಡು
ಬಾಳಿನ ಗುರಿಯಲ್ಲ ನೋಡು
ಕುಡಿದು ನಲಿಯಲು ಮಾತ್ರ ಬರುವವರು
ಸಂಬಂಧಿಕರಲ್ಲ ನೋಡು
ಹಣವಿದ್ದಾಗ ಮಾತ್ರ ಕೇಳುವ ಹಾಡು
ಇಂದಾ ಕೈಬಿಡುವವರ ಜಾಡು
ಬಿದ್ದಾಗ ನೊಡಿ ನರಳಾಟದ ಪಾಡು
ಓಡಿ ಬರುವುದು ಪ್ರೀತಿಪರ ಬೀಡು
ದೇಹದ ಸಂಬಂಧ ಮಾತ್ರವಲ್ಲ
ದೈವ ಸಂಬಂಧ ಒಂದೊಂಟು ಬೇಡು
ಒಮ್ಮೆ ಕೇಳಲು ಆ ಇನಿಯನ ಹಾಡು
ಬಾಳೇ ಸಂಗೀತ ತಿಳಿವೆ ನೋಡು
– ಪೆದ್ದರಿಚ್ಚ
ದೀಪ ಮಾತ್ರ
ಕತ್ತಲು ಸುತ್ತಲು
ಕಣ್ಣೆರಡು ಕಾಣದು
ಹಗಲಿಡಿ ಹಾರಡಿದ ಹಕ್ಕಿ
ರೆಕ್ಕೆ ಮುಚ್ಚಿ ಗೂಡಿನಲಿ
ದಿನವಿಡೀ ಮೇಯ್ದ ಪ್ರಾಣಿ
ಬಾಲ ಮುದುರಿ ಗುಹೆಯಲಿ
ಮಾನವನ ಮನಸ್ಸು ಗೊಣಗಿತು
ಕತ್ತಲ ದೂರುತಲಿ
ಅಗೋ ದೀಪ ಮಾತ್ರ
ಕತ್ತಲನು ಜಯಿಸುವ ದಿಟದಿ
ತನ್ನನೇ ಕರಗಿಸಿ ಬೆಳಗುತಿಹುದು ಜಗವನು!
– ಪೆದ್ದರಿಚ್ಚ
ಗೆಲ್ಲು

ಸುಂಕ
ಏನೂ ಅಲ್ಲದವ
ಏನೂ ಇಲ್ಲದವ
ಸುಂಕ ವಸೂಲಿಯಂತೆ
ಕುಳಿತಿಹನು ತುಂಬಲು ಚೀಲ
ತನ್ನದಲ್ಲದುದನು
ತನ್ನದೇ ಎಂಬಂತೆ ಬೀಗುತ
ಸುಂಕ ವಸೂಲಿಯಂತೆ
ಕುಳಿತಿಹನು ಹಿಡಿದ ಚೀಲದ ಬಾಲ
ಎಲ್ಲವೂ ಆದವನು
ಎಲ್ಲವನು ಇದ್ದವನು
ಸುಂಕ ವಸೂಲಿಗೆಂದು
ಕುಳಿತು ಕೊಂಡರೆ ಹಿಡಿದು ಚೀಲ
ತನ್ನದೇ ಆದುದನು
ಬೆರಳು ತೋರಿಸಿ ಕೇಳಲು
ಆ ದೇವನಿಗೆ ಸುಂಕ
ನೀಡಲು ಆಗುವೆಯ ಸಫಲ
-ಪೆದ್ದರಿಚ್ಚ
ದೇವನ ಆ ಕಣ್ಣಲಿ
ನಾನು ನೀನು ಎಲ್ಲಾ ಒಂದೇ
ದೇವನ ಆ ಕಣ್ಣಲಿ
ಬೇಧ ಭಾವ ಏಕೆ ಮಾಡುವೆ
ಗಂಡು ಹೆಣ್ಣು ಎಲ್ಲಾ ಒಂದೇ
ದೇವನ ಆ ಮನದಲಿ
ತಾರತಮ್ಯ ಏಕೆ ತೋರುವೆ
ನಮ್ಮ ಬಾಳು ಜಗದಲಿ
ಮೂರು ದಿನಕೆ ಮೀಸಲು
ಜಗಳ ತೊರೆದು ಮನದಲಿ
ಕಲಿಯೋ ಬಾಳ ಈಸಲು
ಮೇಲು ಕೀಳು ಏನು ಇಲ್ಲ
ದೇವನ ಆ ಕಣ್ಣಲಿ
ಶೋಕಿ ಏಕೆ ನೀನು ಮಾಡುವೆ
ಕಪ್ಪು ಬಿಳುಪು ಬಣ್ಣ ಇಲ್ಲ
ದೇವನ ಆ ಮನದಲಿ
ನೀನು ಏಕೆ ಗೋಡೆ ಕಟ್ಟುವೆ
ಜಾತಿ ಧರ್ಮ ಏನು ಇಲ್ಲ
ದೇವನ ಆ ಕಣ್ಣಲಿ
ನೀನು ಏಕೆ ಗುಡಿಯ ಕಟ್ಟುವೆ
ರಾಜ ದಾಸ ಯಾರೂ ಇಲ್ಲ
ದೇವನ ಆ ಮನದಲಿ
ನೀನು ಯಾರ ಕೋಟೆ ಕಟ್ಟುವೆ
-ಪೆದ್ದರಿಚ್ಚ
ಪಾಪದ ಕೊಳೆ
ಪಾಪದ ಕೊಳೆಯನು
ತೊಳೆಯಲು ಬಯಸಿ
ಗುರುಗಳ ಪಾದವ
ತೊಳೆದು ಬಂದೆ
ಹೋಗದ ಕಲೆಯನು
ತೆಗೆಯಲು ಬಯಸಿ
ಭಕ್ತರ ಹಸಿವನು
ನೀಗಿ ಬಂದೆ
ಸ್ನಾನದ ಸೋಪಿಗೂ
ತೊಳೆಯಲು ಆಗದು
ಪಾಪದ ಕಲೆಯ
ನೊರೆಯಲ್ಲಿ
ಪಾಪದ ಕೊಳೆಯು
ಇನ್ನೂ ಅಂಟಿದೆ
ಶುದ್ದತೆ ಬಯಸುವ
ಮನದಲ್ಲಿ
ಬೇಡುವೆ ದೇವನೆ
ತೊಳೆಯೋ ಒಮ್ಮೆ
ಪಾಪದ ಕೊಳೆಯ
ಪ್ರೀತಿಯಲಿ
ನಿನ್ನಯ ಮೊಗದ
ಚಿತ್ರವ ಬಿಡಿಸೋ
ಪಾಪವ ಮಾಡದ
ರೀತಿಯಲಿ
-ಪೆದ್ದರಿಚ್ಚ
ಟೀಕೆಯ ರೋಗ

ಏನನು ಮಾಡದೆ
ಏನನು ನುಡಿಯದೆ
ಇದ್ದರೆ ಟೀಕೆಯು
ಬಲು ದೂರ
ಒಳಿತನು ಮಾಡುತಾ
ಸತ್ಯವ ನುಡಿಯುತಾ
ಇದ್ದರೆ ಹತ್ತಿರ
ಟೀಕೆಯ ತೀರ
ಹಗಲಿನ ಬೆಳಕಲಿ
ನಡೆಯುತಾ ಇರಲು
ಹೆದರಿಕೆ ಮನದಲಿ
ಬೇಡವೆ ಬೇಡ
ಸತ್ಯದ ಪಥದಲಿ
ಹೆಜ್ಜೆಯ ಹಾಕಲು
ಕಾಯುತಲಿಹನು
ಟೀಕೆಯ ಜೇಡ
ಒಳಿತನೇ ಮಾಡುವ
ನಿನ್ನಯ ಕಿವಿಯಲಿ
ಕೇಳುವೆ ಏಕೆ
ಟೀಕೆಯ ರಾಗ
ದೈರ್ಯದಿ ಮುಂದೆ
ಸಾಗು ನೀ ನಿರುತ
ಅಂಟದು ನಿನಗೆ
ಟೀಕೆಯ ರೋಗ
-ಪೆದ್ದರಿಚ್ಚ