ಮಾತಿನ ಮಲ್ಲನೇ

Images (59)
ಮಾತನು ಆಡುವ ಮಾತಿನ ಮಲ್ಲನೇ
ದೇವನ ಜೊತೆಯಲಿ ಮಾತಾಡು
ಮಾತನು ನೀಡಿದ ದೇವನ ಅರಿಯಲು
ದೇವನಿಗೊಂದು ನುಡಿ ನೀಡು

ಮಾತನು ಆಡುವ ಮಾತಿನ ಮಲ್ಲನೇ
ಮಾತಿಗೆ ಅರ್ಥವ ಹುಡುಕಾಡು
ದೇವನ ಜೊತೆಯಲಿ ಮಾತನು ಆಡಲು
ನಿನ್ನಯ ಮಾತು ಸವಿ ಹಾಡು

ಮಾತನು ಆಡುವ ಮಾತಿನ ಮಲ್ಲನೇ
ಮೌನದ ಮಾತನು ಕಲಿತುಬಿಡು
ಮಾತಿನ ಬೆಲೆಯನು ಬಾಳಲಿ ಅರಿಯಲು
ಗೆಲ್ಲುವೆ ಜಗವನು ಅರಿತುಬಿಡು

ಮಾತನು ಆಡುವ ಮಾತಿನ ಮಲ್ಲನೇ
ಮಾತಲಿ ಪ್ರೀತಿಯ ಬೆರೆಸಿಬಿಡು
ಪ್ರೀತಿಯು ಮಾತಲಿ ಅನುದಿನ ಒಸರಲು
ಸ್ವರ್ಗವೇ ಮನದಲಿ ತಿಳಿದುಬಿಡು
-ಪೆದ್ದರಿಚ್ಚ

ವಿಶ್ವಾಸವಿದ್ದರೆ

Images (60)
ವಿಶ್ವಾಸವಿದ್ದರೆ
ಬಾಳು ತಿಳಿ ಹಾಳೆ
ಇಲ್ಲದಿರೆ ನೋಡು
ಚಿಗುರದ ಬೇಳೆ!

ವಿಶ್ವಾಸವಿದ್ದರೆ
ಬಾಳು ಹಚ್ಚ ಹಸಿರು
ಇಲ್ಲದಿರೆ ನೋಡು
ಕೊಚ್ಚೆ ಕೆಸರು!

ವಿಶ್ವಾಸವಿದ್ದರೆ
ಬಾಳು ಭವ್ಯ ನಾಡು
ಇಲ್ಲದಿರೆ ನೋಡು
ಇರುಳ ಕರಿ ಕಾಡು!

ವಿಶ್ವಾಸವಿದ್ದರೆ
ಬಾಳಿಗೊಂದು ದಾರಿ
ಇಲ್ಲದಿರೆ ನೋಡು
ಮೈಬಿಡದು ಮಾರಿ!

ವಿಶ್ವಾಸವಿದ್ದರೆ
ಬಾಳೇ ಒಂದು ವರ
ಇಲ್ಲದಿರೆ ನೋಡು
ಭರಿಸಲಾಗದು ದರ!

ವಿಶ್ವಾಸವಿದ್ದರೆ
ಬಾಳಲ್ಲಿ ದೇವ
ಇಲ್ಲದಿರೆ ನೋಡು
ಸತ್ವವಿಲ್ಲದ ಭಾವ!
-ಪೆದ್ದರಿಚ್ಚ

ಹೆಸರು

ಬರೆದಿದೆ ನೋಡು ನಿನ್ನಯ ಹೆಸರು
ದೇವನು ಬರೆಯುವ ಪುಸ್ತಕದಿ
ಮರೆಯನು ನಿನ್ನ ಹೋದರೂ ಉಸಿರು
ಆತನು ಜೀವಿಸೋ ಮಂದಿರದಿ

ಹರ್ಷಿಸು ಮನವೇ ಧನ್ಯನು ನೀನು
ಸೃಷ್ಟಿಯ ದೇವನು ಬಲ್ಲನು ನಿನ್ನನು
ನಲಿಯೋ ಮನುಜನೆ ಶ್ರೇಷ್ಠನು ನೀನು
ದೇವನು ಮರೆಯನು ಎಂದಿಗೂ ನಿನ್ನನು

ಅಳಿಯದ ಅಕ್ಷರ ಬಳಸಿಹನು
ಉಳಿಯುವ ಉಸಿರನು ತುಂಬಿಹನು
ಭುವಿಯೇ ಉರಿದರೂ ಗಗನವೇ ಬಿದ್ದರೂ
ನಿನ್ನಯ ಹೆಸರನು ಗುನುಗುವನು
-ಪೆದ್ದರಿಚ್ಚ

ಮೂರ್ಖತನ

ವರಗಳೇ ಎದುರು ಇರುವಾಗ
ಶಾಪವ ಬಯಸುವ ಮೂರ್ಖತನ
ದೇವನ ನೆರಳಲಿ ಬಾಳಲು ಮರೆತು
ಸ್ವಾರ್ಥದಿ ಮೆರೆಯುವ ಬಂಡತನ

ಹಗಲಲಿ ನಲಿಯುತ ಇರುವಾಗ
ಇರುಳನು ಬಯಸುವ ಹೆಡ್ಡತನ
ಬೆಳಕಿನ ಕಿರಣವ ಸವಿಯುದ ಮರೆತು
ಕುರುಡಲಿ ನಡೆಯುವ ಮೊಂಡುತನ

ಹಾಡಿನ ಸ್ವರಗಳು ಉಲಿವಾಗ
ಗದ್ದಲ ಬಯಸುವ ಕಿವುಡುತನ
ಗಾನದ ಸ್ವರಗಳ ಸ್ವಾದವ ಮರೆತು
ಶಾಂತಿಯ ಅರಸುವ ಕುರುಡುತನ
-ಪೆದ್ದರಿಚ್ಚ

ಕೊಯ್ಲು

ಹೋಗು ಮಗು ನೀನು ಭುವಿಗೆ
ಬೆಳೆ ಏನೋ ಹೇರಳವಾಗಿದೆ ಕೊಯ್ಲುಗಾರರೊ ವಿರಳ
ಹೋಗು ಕೊಯ್ಲುಗಾರನಾಗು
ಬೆಳೆದ ಬೆಳೆಯನು ಕೊಯ್ದುಬಿಡು
ಹಸಿದವರಿಗೆ ಹಂಚಿಬಿಡು!

ಹೋಗು ಮಗು ನೀನು ಭುವಿಗೆ
ಅತ್ತುಬಿಡು ಒಮ್ಮೆ ಅಳಲೇಬೇಕು ನೀನು ಕಾಯುತಿರುವರು ಅದಕೆ ಭಯಬೇಡ ಜೊತೆಗಿರುವೆನು ನಾನು
ನಿನ್ನ ಬಾಳ ಕೊನೆವರೆಗೆ
ಒಮ್ಮೆ ಬೆಳೆಯ ನೋಡಿಬಿಡು
ಹೊಟ್ಟೆ ತುಂಬಾ ನಕ್ಕುಬಿಡು
ಬೆಳೆ ಹೇರಳವಾಗಿದೆ
ಹೊರಡು ಹೆದರಬೇಡ
ಕೊಯ್ಲುಗಾರನಾಗು!
-ಪೆದ್ದರಿಚ್ಚ

ಧೂಳ ಚೂರು

Images (64)

ದೊಡ್ಡವರು ಯಾರು
ಈ ಪುಟ್ಟ ಜಗದಿ
ಕೇಳುತಿದೆ ಮನಸ್ಸು ಅಂದಿನಿಂದ
ಮಗುವಂತೆ ಮನಸ್ಸುಳ್ಳ
ಮುಗ್ದ ಜನರು
ದೊಡ್ಡವರು ತಿಳಿಯದೆ ಎಂದಿನಿಂದ!

ದೇವನ ಎದುರು
ನಿಂತಾಗ ನಾವು
ಅಲ್ಲವೇ ನಾವು ಧೂಳ ಚೂರು
ಅರಿತು ಬಾಳಿನಲಿ
ಈ ಸತ್ಯದ ಹೂವು
ಮುಂದೊಯ್ಯಬಾರದೆ ಬಾಳ ತೇರು!
-ಪೆದ್ದರಿಚ್ಚ

ಗುಲಾಬಿಯು

Images (66)
ಗಿಡದಲಿ ಒಂದು ಅರಳಿತು ಪುಟ್ಟ
ಸುಂದರ ಸುಮಧುರ ಗುಲಾಬಿಯು
ಗಿಡದಲೇ ಇದ್ದರೂ ಅದರ ಆ ಅಂದ
ಮಾಡಿದೆ ಜಗದ ಪಯಣವನು!

ಕಂಪಿಗೆ ಬೇಕೆ ಸಾಗಲು ದಾರಿಯು
ಅಂದದ ಜೊತೆ ಜೊತೆ ಹಾರುವುದು
ನೋಡುವ ಮನಗಳ ಸೆಳೆಯುತ ಮೇಲು
ಸ್ವರ್ಗದ ಅನುಭವ ನೀಡುವುದು!

ಬೀರಿತು ಕಂಪು ಪುಟ್ಟ ಹೂವಲಿ
ನಶೆಯ ಮನಸ್ಸಿಗೆ ಉದುರಿಸಿತು
ನಶೆಯಲಿ ತೇಲುವ ಮನುಜನ ಮನದಲಿ
ಸ್ವರ್ಗದ ಅನುಭವ ಪಸರಿಸಿತು

ಜಗದಲಿ ಅರಳಿದ ಸುಂದರ ಹೂವು
ದೇವನ ಮುಡಿಯಲಿ ಕುಣಿಯುತಿದೆ
ಮರೆಯದೆ ತನ್ನ ಬೆಳೆದ ಆ ಗಿಡವನು
ದೇವನ ವರಗಳ ಸುರಿಸುತಿದೆ.

ಲಿಜಿಯದ ನಾಡಿನ ಗುಲಾಬಿ ಹೂವೆ
ನನ್ನಯ ಮನದಲೂ ಅರಳಲು ಬಾ
ನಿನ್ನಯ ಕಂಪನು ಅಂದದ ನಗುವನು
ನನ್ನಯ ಮೊಗದಲೂ ಕೆದಕಲು ಬಾ!
-ಪೆದ್ದರಿಚ್ಚ

ಸರಿದು ಬಿಡು

Images (65)ದೇವನಿಹನು ಎನ್ನ ಜೊತೆಯಲಿ
ನಾನಿನ್ನು ನಿನ್ನ ದಾಸನಲ್ಲ
ಬಳಲಿಹೆನು ನಿನ್ನ ದಾಸ್ಯದಲಿ
ಮರಳಿ ಬರಬೇಡ ಬೇಡುವೆನು
ಅತಿಥಿಯಲ್ಲ ನೀ ಎನ್ನ ಮನದಲಿ

ಭಯವೇ ದೂರ ಸರಿದುಬಿಡು
ಸೋತಿಹೆನು ನಿನ್ನ ಹುಸಿ ಸ್ನೇಹದಲಿ
ನಾನಿನ್ನು ಇರಲಾರೆ ಜೊತೆಗೆ
ಸುಂದರ ಬಾಳ ಕಂಡಿಹೆ ಮನಸ್ಸಿನಲಿ
ಬರುವುದಾರೆ ನೀ ಬಾ ಜೊತೆಗೆ
ನಿನಗೂ ಒಳಿತಾಗುವುದು ದೇವನಲಿ
-ಪೆದ್ದರಿಚ್ಚ

ಬೆರಣಿ

Images (67)
ಕೊಳ್ಳಲಾಗದು ಬಾಳನು ಹಣದಲಿ
ಕೊನೆಗೆ ಅದೊಂದು ಹಸಿ ಬೆರಣಿ
ಸಾವು ಎದುರಾಗಿ ನಿಲ್ಲಲು ಕೊನೆಯಲಿ
ಅದೊಂದು ಸತ್ವ ಇಲ್ಲದ ಸಗಣಿ

ಬಾಳು ಹಸನಾಗಬೇಕೆ
ಆಲಂಗಿಸು ಒಮ್ಮೆ ದೇವನನು
ಏಳು ಮರೆಯುವೆ ಏಕೆ
ಎಂದೂ ಬಾಳುವ ಆತನನು
ಮರುಳೇ ತೊರೆವೆ ಏಕೆ ಈ ಜಗಕೆ
ಅಂತ್ಯವಿಲ್ಲದ ಸ್ವರ್ಗದ ದಿನವನು

ವಿಚಿತ್ರವಾದರು ಸತ್ಯ
ಇಹದ ಬಾಳೂ ಮೂರು ದಿನಕೆ ಮೀಸಲು
ಕಾಣುವುದಲ್ಲವೇ ಮಿಥ್ಯ
ಕಂಡಂತೆ ಇರುಳಲಿ ಮಿನುಗುವ ಮುಗಿಲು.
– ಪೆದ್ದರಿಚ್ಚ

ಬೇಕೆ?

Images (75)
ಕೆತ್ತನೆ ಕಾಣದ ಶಿಲೆ ಬೇಕೆ?
ಅದು ಬರೀ ಕಲ್ಲು
ಕೆತ್ತನೆಯಿಲ್ಲದೆ ಅದಕಿಲ್ಲ ಅಂದದ ಹಲ್ಲು!

ಹಸನು ಮಾಡದ ಭೂಮಿ ಬೇಕೆ?
ಅದು ಬರೀ ಮಣ್ಣು
ಅಗೆದು ಉತ್ತಾಗಲೇ ಬೆಳೆವುದು ಹಣ್ಣು!

ನೇಯಲಾಗದ ಧಿರಿಸು ಬೇಕೆ
ಅದು ಬರೀ ನೂಲು
ನೇಯ್ದು ಹೊಲಿದಾಗಾಗುವುದು ಶಾಲು!

ಶುದ್ದ ಮಾಡದ ಚಿನ್ನ ಬೇಕೆ?
ಅದು ಮಣ್ಣ ತುಂಡು
ಬೆಂಕಿಯಿಲ್ಲದೇ ಅದಾಗದು ಅಂದದ ಗುಂಡು!

ಕಷ್ಟವಿಲ್ಲದ ಬಾಳು ಬೇಕೆ?
ಅದು ಒಂದು ಕನಸು
ಕಷ್ಟದಿಂದಲ್ಲವೆ ಅರಳುವುದು ಮನಸು!
-ಪೆದ್ದರಿಚ್ಚ