ಕುಟುಂಬ

ತಿಳಿಯದೇ ಆಯಿತು ಹುಟ್ಟು
ಅರಿಯದ ವಂಶದಲಿ
ಕುಟುಂಬವಾಯಿತು ಒಂದು
ತಿಳಿಯದ ಈ ಜಗದಲಿ
ಮೀಯುತಾ ಬೆಳೆದೆ
ಪ್ರೇಮದ ಸುರಿಮಳೆಯಲಿ
ಸ್ಮರಿಸಿ ಆನಂದಿಸುವೆ
ಬೆಸೆದಿರುವ ನಂಟಿನಲಿ

ನಿಧಾನವಾಗಿ ಕಲಿತೆ
ಬೀಳುತಾ ನಡೆಯಲು
ಆಸರೆಯ ಕರ ಹಿಡಿದೆ
ದೈರ್ಯದಿ ಹೆಜ್ಜೆ ಹಾಕಲು
ಪುಟ್ಟ ಕಂಗಳಲಿ ಕಂಡೆ
ನಿರ್ಮಲ ಪ್ರೇಮವನು
ಆ ಪ್ರೇಮದಲಿ ಉಂಡೆ
ಬಾಳಿನ ಭರವಸೆಯನು
-ಪೆದ್ದರಿಚ್ಚ

ಅಧಿಕಾರ

ಅಧಿಕಾರದ ಬಣ್ಣವೇ ಹಾಗೆ
ವಾಸ್ತವ್ಯವನ್ನೇ ಬದಲಾಯಿಸುತ್ತದೆ
ಮಣ್ಣಿನ ಗೋಡೆಗೆ ಬಳಿದ ಬಣ್ಣದಂತೆ
ಮಣ್ಣೂ ಕಾಣದು
ಬಣ್ಣದ ಕೆಳಗಿನ ಸುಣ್ಣವೂ ಕಾಣದು
ಬಣ್ಣ ಬಳಿದಾಕ್ಷಣ
ನೋಟವೇ ಹೊಸದು

ಅಧಿಕಾರದ ಬಣ್ಣವೇ ಹಾಗೆ
ಎಲ್ಲಾ ಮಿಶ್ರಣದ ಮೇಲೆ ಅವಲಂಬಿತ
ಸರಿಯಿದ್ದರೆ ಸುಂದರ ಬಣ್ಣ
ಇಲ್ಲವಾದರೆ ಕೇವಲ ಸುಣ್ಣ
ಸೇವೆಯ ಸರಿ ಮಿಶ್ರಣವಿರಲು
ಅಳಿಯದ ರಂಗೇ ರಂಗು
ತಿಳಿಯದ ಇಂದೂ ಎಂದೂ
ಮರೆಯದ ಎಂದೆಂದೂ!

ಹೂಮಳೆ

ಉಲ್ಲಾಸದ ಹೂಮಳೆಯಲಿ
ಅಳುತಿರುವ ಪೆದ್ದ ನಾ
ಸಂತಸದ ನೀರ ಹರಿವಿಗೆ
ಕಣ್ಣೀರ ಸುರಿಯುತಿಹೆ ನಾ
ಭಾವನೆಗಳ ಸಂಘರ್ಷದಲಿ
ಚಡಪಡಿಸುತ್ತಿಹೆನು ನಾ
ಹಿತ ನೀಡುವ ಹೂಮಳೆಯಲೂ
ಕಂಗಳಲಿ ನೀರು
ಮುದ ನೀಡುವ ನೋಟದಲೂ
ಮನದಲಿ ದುಃಖದ ತೇರು
ಅಳುತ್ತಲೇ ಬಂದೆ ಧರೆಗೆ
ಎಂದೋ ಏನೋ
ನಗುವುದನು ಕಲಿಯಲು ಮರೆತೆ
ಉಲ್ಲಾಸದ ಹೂಮಳೆಯಲ್ಲೂ!!!

ಯೌವನ

ಯೌವನದ ಅಲೆಯಲಿ
ತೇಲುತ್ತಿದ್ದ ತೆನೆಗೆ
ಎಲ್ಲವೂ ನಶ್ವರ ಎನಿಸಿತು
ತ್ಯಾಗದ ಸೆಳೆತವಾಗಿ
ಅಂದವ ತೊರೆದು
ಯೌವನದ ಆಸೆಗಳ ಬದಿಗಿಟ್ಟು
ಒಣಗಲಾರಂಭಿಸಿತು
ಅಂದವೇನೋ ಈಗ
ನೂರ್ಮಡಿ ಹೆಚ್ಚಾಯಿತು
ಬಂಗಾರದ ಆಭರಣದಂತೆ
ಪಳ ಪಳ ಹೊಳೆಯಿತು
ಜೀವನದ ಉದ್ದೇಶವೂ
ಸಾರ್ಥಕವಾಯಿತು
ತನ್ನೊಡೆಯನ ಪಿರುತಿ
ಪ್ರಾಪ್ತವಾಯಿತು
ಯೌವನದ ಅಂದಕ್ಕಿಂತ
ತ್ಯಾಗದ ಮನೋಭಾವ
ಆನಂದ ನೀಡಿತು
ಅಷ್ಟೇ ಏಕೆ
ತಲೆಮಾರೊಂದನ್ನು ರಕ್ಷಿಸಿ
ತಲೆಮಾರೊಂದಕೆ ಮಾತಾಯಿಯಾಯಿತು
-ಪೆದ್ದರಿಚ್ಚ

ಕೊಳಲು

ದೇವನು ಕೊಳಲನು
ಊದಲು ಮನುಜನು
ಕುಣಿಯದೆ ಸುಮ್ಮನೆ
ನೋಡಿಹನು
ಶೋಕದ ಗೀತೆಯ
ಹಾಡಲು ದೇವನು
ಮರುಗದೆ ಮನುಜನು
ಕುಳಿತಿಹನು

ದೇವನೆ ಇಳಿದು
ಮಾತನು ಆಡಲು
ಮನುಜನು ಮೂಕನೇ ಆಗಿಹನು
ದೇವನು ಮೊಗದಿ
ನಗುವನು ಬೀರಲು
ಕುರುಡನ ತೆರದಿ
ಕುಳಿತಿಹನು

ಬುದ್ಧಿಯ ನೀಡಿದ
ದೇವನ ಅರಿಯಲು
ನಿನ್ನಯ ಬುದ್ದಿ
ಎಲ್ಲಿಹುದೋ?
ಅರಿಯದೆ ದೇವನ
ಸಾಗುವ ಬಾಳು
ಮನುಜನೇ ಎತ್ತಣ
ಸಾಗಿಹುದೋ?
-ಪೆದ್ದರಿಚ್ಚ

ಚಿರಕಾಲ

ಮುತ್ತ ನೀ ನೀಡಿ
ನನ್ನ ಮನದಿ ಮನೆ ಮಾಡು
ನಮ್ಮ ಈ ಪ್ರೇಮ
ಚಿರ ಕಾಲ ಇರಲು

ಗಣಿತವೇ ನನ್ನುಸಿರೇ
ಹಾಡುವೆ ನಿನಗಾಗಿ (೨)
ಗಣಿತವೇ ನನ್ನೊಲವೆ
ನಲಿಯುವೆ ನಿನಗಾಗಿ (೨)
ಈ ರಾಗ ತಾಳದಲೂ
ನಿನ್ನಯ ಸ್ಪರ್ಶವಿದೆ

ಗಣಿತವ ಅರಿತಲ್ಲಿ
ಬಾಳಿಗೆ ಅರ್ಥವಿದೆ (೨)
ಗೊಂದಲ ಘಳಿಗೆಯಲಿ
ಉತ್ತರ ಜೊತೆಗೆ ಇದೆ (೨)
ಬಾಳ ಗೆರೆಯಲ್ಲಿ
ನಿನ್ನೊಡನೆ ಬರುವೆ

ಗಣಿತ

ಲೆಕ್ಕ ಹಾಕು ಮನುಸಾ
ನೀ ಇರುವ ಮೂರು ದಿವಸ
ಕೂಡಿ ಕಳೆಯಬೇಕ
ನಿನ ಬಾಳ ಪಯಣದಾಗ
ಒಳಿತ ಗುಣಿಸಬೇಕ
ಪ್ರೇಮ ಹಂಚಬೇಕ
ಅಳತೆ ಮಾಡಬೇಕ (ಗುರಿ)
ಗೆರೆಯ ದಾಟಬೇಕ

ಮನೆಯ ಗೋಡೆಗೂನು
ಅಳತೆಯುಂಟು ಒಂದು
ತೊಡುವ ಅಂಗಿಗೂನು
ಉದ್ದಗಲ ಉಂಟು ಒಂದು
ಅಡಿಗೆ ಮನೆಯ ಒಳಗೂ
ಗಣಿತ ಉಂಟು ಮನುಜ
ಉಳುವ ಸಾಲಿನಲ್ಲು
ಅಳತೆ ಉಂಟು ತನುಜ
ಒಂದು ಎರಡು ಮೂರು
ನಿನ್ನ ಉಸಿರು ನೋಡು
ಒಂದು ಎರಡು ಮೂರು
ಬಾಳ ಸಾರ ನೋಡು

ಗಣಿತ ಬೇಕೇ ಬೇಕ
ನಿನ ಬಾಳ ಎಣಿಕೆಯಲ್ಲಿ
ಲಾಭ ನಷ್ಟ ಬೇಕ
ನಿನ ಬಾಳ ಮಡಿಕೆಯಲ್ಲಿ
ಗಣಿತ ಉಂಟು ನೋಡು
ಸೃಷ್ಟಿ ಸೊಭಗಿನಲ್ಲಿ
ಅಳೆತ ಉಂಟು ನೋಡು
ಭುವಿಯ ತಿರುಗಿನಲ್ಲಿ
ಒಂದು ಎರಡು ಮೂರು
ಬರೀ ಲೆಕ್ಕವಲ್ಲ ನೋಡು
ಒಂದು ಎರಡು ಮೂರು
ನಿನ ಬಾಳ ಚಕ್ರ ನೋಡು
-ಪೆದ್ದರಿಚ್ಚ

ಕಳೆದು ಹೋಗು

ಎಲ್ಲೋ ಕಳೆದು ಹೋಗಿದೆ
ನನ್ನ ಜೊತೆಗಿದ್ದ ಮನಸ್ಸು
ಪುಟ್ಟ ಪುಟ್ಟ ವಸ್ತುಗಳನೂ
ಹುಡುಕಾಡುವ ನಾನು
ಮರೆತುಹೋದೆ ಹುಡುಕಲು
ನನ್ನ ಜೊತೆಯೇ ಇದ್ದ
ನನ್ನ ಮನಸ್ಸನ್ನು
ಎಲ್ಲಿಹುದೋ ಏನೋ
ನನ್ನೊಳಗಿದ್ದ ಆ ಮನಸ್ಸು
ಹುಡುಕಿ ಹೋದರೆ
ಸಿಗಬಹುದೇ ನನಗೆ
ನನ್ನೊಳಗಿದ್ದ
ನನ್ನ ಮುದ್ದಾದ ಮನಸ್ಸು
ಬದಲಾಗಿರಬಹುದು
ಕಳೆದುಹೋದ ಮೇಲೆ
ಆದರೂ
ಹುಡುಕಿ ಹೋಗುವೆ ಬಿಡದೆ
ಸಿಗುವವರೆಗೂ ಅದನು…
ನನ್ನ ಜೊತೆಗಿದ್ದ ಮನಸ್ಸು
ಮತ್ತೇ ಸಿಗಲು
ನನಸಾಗುವುದು ಖಚಿತ
ನನ್ನೆಲ್ಲಾ
ನನಸಾಗದ ಕನಸು
-ಪೆದ್ದರಿಚ್ಚ

ಹರಿವು

ಹರಿವ ನದಿಯ ನೀರು
ಕಸವ ಹೊತ್ತು ಸಾಗಿದರೂ
ನಿಂತ ನೀರಿಗಿಂತ
ಶುದ್ಧ ಪರಿಶುದ್ಧ

ಹರಿವ ನೀರು ಮಾತ್ರ
ಸಾಗರ ಸೇರಬಲ್ಲದು
ನಿಂತ ನೀರಿಗೆ
ಗತಿ ಒಂಟಿತನ
ದೂರವದು ಜನರಿಂದ
ಸಾಗರದ ನೀರಿಂದ

ನೀರಿಗೆ ಶುದ್ಧತೆ
ಪ್ರತಿಕ್ಷಣದ ಹರಿವಿಂದ
ಸಾಗರದ ಒಲವಿಂದ
ನಿಂತರೆ ನೀರು
ಹೊಲಸು ಕೊಳಕಿಂದ
ಅದರ ನಾಶ ಹಠದಿಂದ
-ಪೆದ್ದರಿಚ್ಚ

ಸ್ವರ

ನನ್ನೊಳ ಸ್ವರವೊಂದು ಮೂಡಿದೆ
ನಿಲ್ಲದೆ ನಿರುತವು ಹಾಡಿದೆ
ಹೋಗುವೆ ಎಲ್ಲಿಗೆ ಕೇಳುತಿದೆ
ಬಾಳನು ಅರಿಯಲು ಕರೆಯುತಿದೆ

ಸತ್ಯದ ಮಾರ್ಗವ ತೋರುತಿದೆ
ಮಿಥ್ಯವ ತೊರೆಯಲು ತಿಳಿಸುತಿದೆ
ಸಾಗಲು ಮುಂದೆ ಧೈರ್ಯವ ತುಂಬಿ
ಬಾಳಿಗೆ ಅರ್ಥವ ನೀಡುತಿದೆ

ಪ್ರೀತಿಯ ಅಂದವ ತಿಳಿಸುತಿದೆ
ನೀತಿಯ ಅಪ್ಪಲು ಕರೆಯುತಿದೆ
ನ್ಯಾಯದ ಬಾಳನು ಜಗದಲಿ ಬಾಳಲು
ಅನುದಿನ ಒಳಗೇ ಗುನುಗುತಿದೆ