ಶಾಂತಿ

ಶಾಂತಿ ಪ್ರಿಯರು ನಾವೆಲ್ಲಾ
ಕೆಲವರನ್ನು ಸ್ವಲ್ಪ ದ್ವೇಷಿಸುತ್ತೇವೆ ಅಷ್ಟೇ
ಶಾಂತಿಗಾಗಿ ಹೋರಾಡುವವರು ನಾವು
ಕೆಲವೊಮ್ಮೆ ಸ್ವಲ್ಪ ಜಗಳ ಆಡುತ್ತೇವೆ ಅಷ್ಟೇ
ಶಾಂತಿಗಾಗಿ ಯಾವ ತ್ಯಾಗಕ್ಕೂ ಸಿದ್ದ ನಾವು
ಸ್ವಾರ್ಥಕ್ಕೆ ಸ್ವಲ್ಪ ದಾಸರಾಗಿದ್ದೇವೆ ಅಷ್ಟೇ
ಶಾಂತಿ ಮಂತ್ರ ಪಟಿಸುವವರು ನಾವು
ಕೆಲವೊಮ್ಮೆ ಕೆಟ್ಟ ಮಾತುಗಳನ್ನಾಡುತ್ತೇವೆ ಅಷ್ಟೇ.

ಶಾಂತಿ ಕದನವಿರಾಮವಲ್ಲ
ಜಗಳರಹಿತವೂ ಅಲ್ಲ
ಗದ್ದಲವಿಲ್ಲದ ಮೌನವೂ ಅಲ್ಲ
ವನದಲಿ ಕದನವಿದ್ದರೂ
ದೈತ್ಯರ ಜಗಳವಿದ್ದರೂ
ಹಕ್ಕಿಗಳ ಕಲರವವಿದ್ದರೂ
ಎಲ್ಲೆಲ್ಲೂ ಶಾಂತಿಯ ಪರಿಮಳ
ಏಕೆನೆ
ಶಾಂತಿ ಒಂದು ಸಂಭಂದ
ಸೃಷ್ಟಿಕರ್ತನ ನೆನೆವ ಅನುಬಂಧ
ನಿರ್ಮಲ ಪ್ರೀತಿಯ ದಿವ್ಯ ಒಪ್ಪಂದ
ಅನ್ಯೋನ್ಯತೆಯ ಪರಮಾನಂದ
ಸೋದರತೆಯ ಮಕರಂದ
ಸಮಾನತೆಯ ಅರವಿಂದ
-ಪೆದ್ದರಿಚ್ಚ

ಬಲ – ಬೆಲೆ

ಜೀವವಿರುವವರೆಗೆ ಬೆಲೆ ನಿನಗೆ
ಉಸಿರಿರುವವರೆಗೆ ಬಲ ನಿನಗೆ
ನಿನ್ನಲಿ ಇರುವ ಬೆಲೆಬಾಳುವುದೆಲ್ಲಾ
ನಿನಗಾಗಿ ಕಿಂಚೂ ಬಲ ನೀಡುವುದಿಲ್ಲ
ಏನಿದ್ದರೂ ನಿನಗೆ ಸಾಕಾಗುವುದಿಲ್ಲ
ನಿನ್ನ ಜೊತೆಗೆ ಏನೂ ಪಯಣಿಸುವುದಿಲ್ಲ
ಅರಿಯೋ ಮನುಜ ಅರಿಯೋ ಬೇಗ
ಜೀವದ ಬೆಲೆಯ ನೀನರಿಯೋ ಬೇಗ
ಉಸಿರಿನ ಬಲವ ಆ ಬಲದ ಬೆಲೆಯ
ಅರಿಯೋ ಬೇಗ ಅರಿಯೋ!

-ಪೆದ್ದರಿಚ್ಚ

ಹೊಸತನ

ಮುಂಜಾನೆಯ ರವಿಯ ಕಿರಣವ
ಕಣ್ಣು ಬಿಟ್ಟು ಕಂಡಾಕ್ಷಣ
ಏನೋ ಒಂದು ರೀತಿಯ ಹೊಸತನ
ಆದರೆ ಅದೇ ಹಳೇ ದೇಹ
ಅವೇ ಹಳೇ ಯೋಚನೆಗಳು
ಹೊರಬರಲಾರದೆ
ಕೆಸರಿನಲಿ ಒದ್ದಾಟ
ಹೊಸತನ ಸವಿಯಲಾಗದೆ
ನಿರಂತರ ಪರದಾಟ.

ಹೊಸತನ ಆಶಿಸುವ ಮನ
ಹೊಸತಾ ಕಂಡಾಕ್ಷಣ ರೋಮಾಂಚನ
ಆದರೆ ಸಂತಸ ಒಂದೇ ದಿನ
ಹೊಸತು ಹಳತಾಗಲು ಒಂದೇ ಕ್ಷಣ
ಮತ್ತೇ ಕೆಸರಿನಲಿ ಒದ್ದಾಟ
ಹೊಸತನ ಸವಿಯಲಾಗದೆ
ನಿರಂತರ ಪರದಾಟ.

ಹೊಸತನಕ್ಕೇನು ಬರವಿಲ್ಲ
ಹರಿವ ನೀರು ಹೊಸದು
ಬೀಸೋ ಗಾಳಿ ಹೊಸದು
ಧರೆಗಿಳಿವ ಕಿರಣ ಹೊಸದು
ಕಣ್ಣುಗಳಲಿ ಹಳೆ ಪೊರೆ ಕಟ್ಟಿರಲು
ಕೆಸರಿನಲಿ ಒದ್ದಾಟ
ಹೊಸತನ ಸವಿಯಲಾಗದೆ
ನಿರಂತರ ಪರದಾಟ.

ಹೊಸತನ ಸವಿಯಲು
ಪ್ರೇಮಿಯಾಗಬೇಕು
ಪ್ರೇಮ ಹಳತಾಗದು
ಪ್ರೇಮಿಗೆ ವಯಸ್ಸಾಗದು
ಆ ಕಣ್ಣಲಿ ಎಲ್ಲವೂ ಹೊಸದು
ಹಳೆಯ ಕೆಸರನದು ತೊಳೆವುದು
ಹೊಸತನದ ಸವಿ ತುತ್ತಾ ನೀಡುವುದು
ಪರದಾಟವನು ದೂರ ಮಾಡುವುದು
ನೆಮ್ಮದಿಯ ಉಸಿರಾಟದ ವರ ನೀಡುವುದು
-ಪೆದ್ದರಿಚ್ಚ

ಮಂದಿರದಿ!

ದೇವರ ಕಾಣಲು ಬಯಸುವ ಮನವೇ
ಕಾಣನೇ ಆತನು ಸೃಷ್ಟಿಯಲಿ
ಹಸಿರಲಿ ಕಾಣದ ದೇವನ ಮೊಗವನು
ಹುಡುಕುವೆ ಏಕೆ ಮಂದಿರದಿ?

ದೇವರ ಸ್ಪರ್ಶವ ಬಯಸುವ ಮನವೇ
ಪರನನು ಏಕೆ ನಿಂದಿಸುವೆ
ನಗುವಲಿ ತಿಳಿಯದ ದೇವನ ಸರ್ಶವ
ಬಯಸುವೆ ಏಕೆ ಮಂದಿರದಿ?

ದೇವನ ಕೇಳಲು ಬಯಸುವ ಮನವೇ
ತೊರೆಯುವೆ ಏಕೆ ಕಷ್ಟವನು
ನೋವಲಿ ಕೇಳದ ದೇವನ ದನಿಯನು
ಅರಸುವೆ ಏಕೆ ಮಂದಿರದಿ?
-ಪೆದ್ದರಿಚ್ಚ

ಕಾಲುದಾರಿ

ನಡೆಯುವ ಮನಸ್ಸಿದ್ದರೆ ಸಾಲದು
ನಡೆಯಲು ಮಾರ್ಗಬೇಕು
ಕಲ್ಲೋ ಮುಳ್ಳೋ
ಕಾಲುದಾರಿ ಕಂಡರೆ ಸಾಕು
ಸಾಗಿ ಹೋದವರ ಮೇಲೆ
ಇಲ್ಲದ ವಿಶ್ವಾಸ
ಮನದಲಿ ಏನೋ ಧೈರ್ಯ
ಗುರಿ ತಲುಪುವ ಭರವಸೆ…

ದಾರಿ ಕಂಡಾಗಲೇ ಹೀಗೆ!
ಆ ದಾರಿಯಲ್ಲಿ ಸಾಗಿ
ತಲುಪಾಬೇಕಾದ ಗುರಿಯನು
ತಲುಪಿದ್ದೇನೆ ಎಂದವನು
ವಿಜಯೀ ಮಾತ್ರನಲ್ಲ
ನಿನ್ನ ಬಾಳಿಗೆ ಗುರು ಪೆದ್ದರಿಚ್ಚ!

ಹೆಸರ ನೀಡಿಹನು

ತೆಂಗಿನ ಮರದ ಎಲ್ಲವನು
ಬಳಸಬಹುದು ಎಲ್ಲರು
ಕಲ್ಪವೃಕ್ಷ ಅದಕ್ಕೆ ಹೆಸರು
ಮರಕ್ಕದು ತಿಳಿದಿದೆಯೇ?
ಮರವನು ಬಲ್ಲ ಮಾನವನು
ಅದಕ್ಕೊಂದು ಹೆಸರ ನೀಡಿಹನು.

ಹಸುವು ತನ್ನನೇ ನೀಡುವುದು
ತಾಯಿಯಂತೆಲ್ಲರ ನೋಡುವುದು
ಕಾಮಧೇನು ಅದಕ್ಕೆ ಹೆಸರು.
ಹಸುವಿಗದು ತಿಳಿದಿದೆಯೇ?
ಹಸುವನು ಅರಿತ ಮಾನವ
ಅದಕ್ಕೊಂದು ಹೆಸರ ನೀಡಿಹನು

ಕಲ್ಪವೃಕ್ಷವೆಂದು ಕರೆದ
ಮಾನವ ಇನ್ನೂ ಅಲ್ಪನು
ಕಾಮಧೇನು ಎಂದು ಕರೆದ
ಮಾನವ ಇನ್ನೂ ಕಾಮಿಷ್ಟನು.
-ಪೆದ್ದರಿಚ್ಚ

ಜಗದ ಶಾಲೆ

ಜಗದ ಶಾಲೆಯಲಿ
ಪರೀಕ್ಷೆ ನಮ್ಮ ಬಾಳು
ಉತ್ತೀರ್ಣರಾಗಲೇಬೇಕು
ದಾರಿಯಿಲ್ಲ ಬೇರೆ ಏನು.
ನಕಲಿ ಮಾಡಲಾಗದು
ಬರೆಯಬೇಕು ನಮಗೆ ನಾವು
ಪ್ರೀತಿ ಬಾಷೆಯಂತೆ
ಭಯವ ಬಿಡಲೇಬೇಕು
ಅವಕಾಶ ಒಂದೇ ಅಂತೆ
ಮುಂದೆ ಸಾಗಲೇಬೇಕು
-ಪೆದ್ದರಿಚ್ಚ

ಪ್ರೀತಿ ಇಲ್ಲದಿರೆ

ಪ್ರೀತಿಯೊಂದು ಇಲ್ಲದಿರೆ…
ಮಗುವಿನ ಮೊದಲು ಅಳು
ಕರ್ಕಶ
ಅದರ ಸಾಂಗತ್ಯ ಬಲು ಭಾರ.

ಪ್ರೀತಿಯೊಂದು ಇಲ್ಲದಿರೆ…
ಪ್ರತಿಯೊಬ್ಬನೂ ವೈರಿ
ಕಾಣದಾವುದು ಕಣ್ಣಿಗೆ ಸರಿ.

ಪ್ರೀತಿಯೊಂದು ಇಲ್ಲದಿರೆ…
ಆಡುವ ನುಡಿಗಿಲ್ಲ ಅರ್ಥ
ಮಾಡುವ ಸೇವೆಯೆಲ್ಲಾ ವ್ಯರ್ಥ.

ಪ್ರೀತಿಯೊಂದು ಇಲ್ಲದಿರೆ…
ಸೊಭಗಿಲ್ಲ ಹೊರಗೆ
ಅಂಧಕಾರದ ಗುಹೆ ಒಳಗೆ.

ಪ್ರೀತಿಯೊಂದು ಇಲ್ಲದಿರೆ…
ಸಂಬಂಧಗಳಿಗಿಲ್ಲ ಬೆಲೆ
ಚಿಗುರಲಾರದು ಜೀವದ ಎಲೆ.
-ಪೆದ್ದರಿಚ್ಚ

ದೇವನು

ಪೊರೆಯುವನು ದೇವನು
ತನ್ನಯ ಭಕ್ತನನು
ನಗುವಾಗಲಿ ಅಳುವಾಗಲಿ
ಕರ ಹಿಡಿದು ನಡೆಸುವನು

ಹರಸುವನು ದೇವನು
ತನ್ನಯ ಮಕ್ಕಳನು
ಕಲ್ಲಾಗಲಿ ಮುಳ್ಳಾಗಲಿ
ತೋರುವನು ದಾರಿಯನು

ಕರೆಯುವನು ದೇವನು
ತನ್ನಯ ಶಿಷ್ಯರನು
ಮನ ತೆರೆದಿರಲಿ ಮುಚ್ಚಿರಲಿ
ಎರೆಯುವನು ಪ್ರೀತಿಯನು

ನೋಡುವನು ದೇವನು
ಭಕ್ತರ ಜಗವನು
ಬೆಳಕಿರಲಿ ಇರುಳಿರಲಿ
ಜನರೆಲ್ಲರ ಕಾಯುವನು
-ಪೆದ್ದರಿಚ್ಚ

ಜಗವೇ ಹುಲ್ಲುಗಾವಲು

ಜಗವೇ ಹುಲ್ಲುಗಾವಲು
ನಾವೆಲ್ಲಾ ಕುರಿಗಳು
ದೇವನೆ ಒಡೆಯನು
ಅವನೇ ಎಮಗೆ ಕಾವಲು

ಕುರಿಗೆ ಇಲ್ಲ ಕೊರತೆಯು
ಕಾವಲಿರಲು ದೇವನು
ಆತ ಜೊತೆಗೆ ಇರಲು ಸದಾ
ಎಲ್ಲಾ ಮೇವಿನ್ ಒರತೆಯು

ಕುರಿಗೆ ಇಲ್ಲ ನಡುಕವು
ಇರಲು ದೇವನಭಯವು
ಆತನಿಂದೆ ಸಾಗುತಿರಲು
ಬಾಳೇ ಗೆಲುವ ಪದಕವು

ಇಲ್ಲ ತಾರತಮ್ಯವು
ಪ್ರೇಮ ಅವನ ನೋಟವು
ಮಂದೆಯೊಳಗೇ ಸಾಗುತಿರಲು
ಬಾಳೇ ತುಂಬಾ ರಮ್ಯವು

ಕುರಿಗಳಲ್ಲ ಅನ್ಯರು
ಉಚಿತವಾಗಿ ಪಡೆವರು
ದೇವನ್ ಹಿಂದೆ ನಡೆಯುತಿರಲು
ಆಗ್ವರೆಲ್ಲಾ ಧನ್ಯರು
-ಪೆದ್ದರಿಚ್ಚ