ಧನ್ಯೆ

ಧನವಿಲ್ಲ, ಕಾರು ಬಸ್ಸಿಲ್ಲದ
ನಿಸರ್ಗವೇ ನೀನು ಧನ್ಯೆ
ನಶಿಸಿಹೋಗದ ಸಿರಿಯ ಸಿರಿವಂತೆ ನೀನು

ಮಾನವನ ಸ್ವಾರ್ಥದಿಂದ
ಕಣ್ಣೀರಿಡುವ ನೀನು ಧನ್ಯೆ
ನಿನ್ನ ಕಣ್ಣೀರ ಒರೆಸುತ್ತಿಹನು ನಿನ್ನ ದೇವನು

ನಮ್ಮೆಲ್ಲಾ ಕಿತಾಪತಿಯನ್ನು
ದೀನತೆಯಿಂದ ಸಹಿಸುವ ನೀನು ಧನ್ಯೆ
ನಿನ್ನಲ್ಲಿದೆ ದೇವನ ಆ ಸುಹಾಸನವು.

ನ್ಯಾಯನೀತಿಯಿಂದ ತಾರತಮ್ಯವಿಲ್ಲದೆ
ಎಲ್ಲರ ಆಧರಿಸುವ ನೀನು ಧನ್ಯೆ
ನಿನ್ನ ಸಂತೃಪ್ತಿಗೆ ಮಿತಿ ಇಲ್ಲ ನೋಡು

ಮನುಕುಲಕೆ ನಿರಂತರವು
ದಯೆ ತೋರುವ ನೀನು ಧನ್ಯೆ
ದಯೆಯಿಂದ ಕಾಯುತಿರುವನು ನಿನ್ನ
ನಿನ್ನ ದಯಾವಂತ ದೇವನು

ಪ್ರೀತಿಯ ಬರಗಾಲ ಕಾಣದ
ನಿರ್ಮಲ ಹೃದಯ ಹೊಂದಿರುವ ನೀನು ಧನ್ಯೆ
ನಿನ್ನಲಿ ಕಾಣುವನೆಮಗೆ ನಿರುತ
ಕಾಣದ ಪರಿಶುದ್ದ ದೇವನು

ನಿನ್ನ ಶಾಂತತೆಯಲಿ ಎಮಗೆ
ಶಾಂತಿಯನು ಸಾರುವ ನೀನು ಧನ್ಯೆ
ಗದ್ದಲದ ಜಗದಿ ಬಾಳುವ ನಮಗೆ
ದೈವೀ ಶಾಂತಿಯನು ಸಾರುವ ಗಾನ ನೀನು

ಮನುಕುಲದ ದುರಾಸೆಯಿಂದ ನಿರಾಶಲಾಗದೆ
ನರಳುತಿರುವ ನೀನು ಧನ್ಯೆ
ಧರೆಗೆ ಇಳಿದು ಬಂದಿರುವ ಸ್ವರ್ಗವು ನೀನು.

-ಪೆದ್ದರಿಚ್ಚ

ಚಿರಸ್ಮರಣೆ

ಮಂಕುತಿಮ್ಮನಂತೆ ಕುಳಿತಿದ್ದ
ಮಂದಬುದ್ಧಿಯ ನನಗೆ ಮೂಡಿತೊಂದು ಪ್ರಶ್ನೆ
ದೇವನಿಹನೆ?
ಆ ಪ್ರಶ್ನೆಗೊಂದು ಮದುವೆಯಾಯಿತು
ಹೇಗೆ ತಿಳಿವುದು ಆತನ ಇರುವಿಕೆಯ?

ಮುಗ್ದ ಮೊಗ್ಗೊಂದು ಹೂವಾಗಿ ಅರಳುತ್ತಿತ್ತು
ಅರೆರೆ! ಹೇಗಾಯ್ತು ಅದು?
ಬುದ್ದಿವಂತರು ಎಂದರು
ಅದನ್ನರಿತರೆ ನಿನ್ನ ಪ್ರಶ್ನೆಗಳಿಗೆ ಸಮಾಧಿ ಕಟ್ಟಬಹುದು

ಭೂಮಿಯ ಸ್ವಾರ್ಥವ ತಾಳದೆ ಮುಖ ಗಂಟು ಹಾಕಿದ್ದ ಮೋಡ
ಜಿನುಗುತ್ತಿತ್ತು…
ಅರೆರೆ! ಹೇಗಾಯ್ತು ಅದು?
ಜ್ಞಾನಿಗಳು ಎಂದರು
ಅದನ್ನರಿತರೆ ನಿನ್ನ ಪ್ರಶ್ನೆಗಳು
ಕೊಳೆತು ಹೋಗುವುವು.

ಪುಟ್ಟ ಹಕ್ಕಿಯೊಂದು ನೆಮ್ಮದಿಯಿಂದ
ಗೂಡ ಹೆಣೆಯುತ್ತಿತ್ತು
ಅರೆರೆ! ಹೇಗಾಯ್ತು ಅದು?
ಮೇಧಾವಿಗಳು ಎಂದರು
ಅದನ್ನರಿತರೆ ನಿನ್ನ ಪ್ರಶ್ನೆಗಳು ಮಣ್ಣಾಗುವುವು

ಅಷ್ಟರಲ್ಲೇ ಎಡವಿದ ಹಿರಿಯನ
ಕೈ ಹಿಡಿದ ಪುಟ್ಟ ಬಾಲಕನ ಕಂಡೆ…
ಅರೆರೆ! ಬಾಲಕನಿಗೆ ಹೇಗೆ ತಿಳಿಯಿತು?
ಭಕ್ತರೆಂದರು ಅದನ್ನರಿತರೆ
ನಿನ್ನ ಪ್ರಶ್ನೆಗಳು ಯುಗಯುಗಕ್ಕೂ
ಮರೆಯಾಗುವುವು…

ಮಂಕುತಿಮ್ಮನಂತಿದ್ದ ನನ್ನ ತಟ್ಟಿ
ಕೇಳಿದ ನನ್ನ ಸ್ನೇಹಿತ ತಲೆಗೆ ಕುಟ್ಟಿ
ಬೆಪ್ಪನಂತೆ ಏಕೆ ಕುಳಿತಿರುವೆ…
ನನ್ನ ವಯಸ್ಸಾದ ಪ್ರಶ್ನೆಗಳ ತಿಳಿದು
ಪ್ರಶ್ನೆಗಳಿಗೆ ಹೃದಯಾಘಾತವಾಗುವಂತೆ ನುಡಿದ
‘ನಿನ್ನಂತಹ ಪೆದ್ದನೂ ಯೋಚಿಸಿ ಪ್ರಶ್ನಿಸುತ್ತಿಹನೆಂದರೆ
ಅದಕ್ಕಿಂತ ಬೇರೆ ಕಾರಣ ಬೇಕೇ
ಆತನ ಇರುವಿಕೆಗೆ’

ಇಂದು ಆ ಪ್ರಶ್ನೆ ದಂಪತಿಗಳ ಇಪ್ಪದೈದನೆಯ ವರ್ಷದ ಚಿರಸ್ಮರಣೆ!
-ಪೆದ್ದರಿಚ್ಚ

ಓದಿದರೆ!

ದೇವನಂತೂ ಆಲಸಿಯಲ್ಲ
ಬರೆದಿಹನು ಮನದ ಹಾಳೆಯಲಿ
ಮರೆವಂತೂ ಸುಳಿಯುವುದಿಲ್ಲ ಆತನ ಬಳಿಗೆ
ಬರೆದಿಹನು ಮನದಲಿ ಮುದ್ದಾಗಿ
ಆಯಾಸಗೊಳ್ಳುವ ಮಾತಿಲ್ಲ
ಬರೆಯುವನು ಅನುದಿನವು ಮನದಾಳದಿ
ನಿನ್ನ ಆಯಾಸದಲಿ, ಆಲಸ್ಯ ತೊರೆದು ಮರೆಯದೆ
ಆತ ಬರೆದುದನು ನೀ ಓದಿದರೆ
ನೀನಿರುವ ಜಾಗವೇ ಸ್ವರ್ಗವಾದೀತು ಪೆದ್ದರಿಚ್ಚ!

ಜ್ಞಾನಿಯಂತೆ ಓದಬೇಡ ಭಕ್ತನಂತೆ ಓದು
ಎಲ್ಲಾ ಅರಿತವನಂತೆ ಓದಬೇಡ
ಪೆದ್ದನಂತೆ ಓದು
ಸಾಲನ್ನು ಮಾತ್ರ ಓದಬೇಡ
ಸಾಲಿನ ನಡುವೆ ಇರುವುದ ಓದು
ಅಕ್ಷರವನು ಮಾತ್ರ ಓದಬೇಡ
ಚಿತ್ರಣವನು ಓದು
ಕೊಳ್ಳಬೇಕೆಂದಿಲ್ಲ ಹೊತ್ತಿಗೆಯನು
ಅದು ನಿನ್ನೊಳಗೇ ಇದೆ ನೋಡು
-ಪೆದ್ದರಿಚ್ಚ

ಹೆದರಬೇಕೇ!

ಆಳವಾದ ಬೇರಿರಲು
ಆ ಬೇರಿಗೆ ನೀರಿನ ಸನಿಹವಿರಲು
ಬಿರುಗಾಳಿಗೆ, ಬರಗಾಲಕೆ ಮರವು ಹೆದರಬೇಕೇ?

ಪ್ರೇಮವು ಅರಳಿರಲು
ಅದು ವಿಶ್ವಾಸದಿ ಬೆರೆತಿರಲು
ಕಷ್ಟಕೆ, ಸಂಕಷ್ಟಕೆ ಬಾಳು ಹೆದರಬೇಕೆ?

ಗುರಿಯು ತಿಳಿದಿರಲು
ದೈರ್ಯವು ಬಲಿತಿರಲು
ಗೋಡೆಗಳಿಗೆ, ತಡೆಗೋಡೆಗಳಿಗೆ
ಮನಸ್ಸು ಹೆದರಬೇಕೇ?

ಗುರುವು ಮುಂದಿರಲು
ದಾರಿಯ ತೋರುತಿರಲು
ಕೇಡಿಗನಿಗೆ, ಸೈತಾನನಿಗೆ
ಭಕ್ತ ಹೆದರಬೇಕೇ?
-ಪೆದ್ದರಿಚ್ಚ

ಮುಳ್ಳು

ಗುಲಾಬಿ ಹೂದೋಟ
ಅರಳುವ ಹೂಗಳಿಂದ
ಸ್ವರ್ಗ ದರ್ಶನ
ಅಳುವ ಮನದಲೂ
ಅರಳುವುದು ಸಂತಸ
ಬಣ್ಣಗಳಿಗಿಲ್ಲ ಸರಿಸಾಟಿ
ಈ ಸ್ವರ್ಗದ ಬಾಗಿಲಿಗೆ
ಕಾವಲೆಂಬತೆ ಮುಳ್ಳುಗಳು

ಈಗೋಬ್ಬ ಹೊಸ ಮಾಲಿ
ಅಂದದ ಗಂಧವೇ ಇಲ್ಲದವ
ಕೆಂಪು ಗುಲಾಬಿ ಮಾತ್ರ ಹೂವಂತೆ
ಬೇರೆ ಬಣ್ಣವೆಲ್ಲಾ ಹೂವಲ್ಲವಂತೆ
ಹೂದೋಟಕೆ ಒಂದೇ ಬಣ್ಣ ಸಾಕಂತೆ
ಕಿತ್ತೊಗೆವ ಯೋಚನೆ ಅರಳಿದೆ

ಅವನಿಗೊಬ್ಬ ಸ್ನೇಹಿತ…
ಆತನಿಗೆ ಮುಳ್ಳಿನ ದ್ವೇಷ
ಗುಲಾಬಿಗೆ ಮುಳ್ಳೇಕೆ ಆತನ ತತ್ವ
ಅದನ್ನೂ ಸವರುವ ಯೋಜನೆ
ಅಂದವ ಅರಿಯದ ಮಂದಮತಿಗಳ
ಮುಳ್ಳಿಲ್ಲದ ಒಂದೇ ಬಣ್ಣದ ಗುಲಾಬಿ ಕೃಷಿ.
-ಪೆದ್ದರಿಚ್ಚ

ಉತ್ತರ

ಓ ದೇವಾ,
ನನಗ್ಯಾಕೋ ಸಂದೇಹ!
ನಿನಗೆ ಯಾವುದೂ ಅಸಾಧ್ಯವಾದುದಿಲ್ಲ
ಮನಸ್ಸು ಮಾಡಿ ನನ್ನ ಪ್ರಶ್ನೆಗೆ ಉತ್ತರವೇಕೆ ನೀಡುವುದಿಲ್ಲ!

ಪ್ರಾರ್ಥನೆ ಮಾಡುವರೋ ಜನರು?!!!
ನಿನಗೆ ಕೇಳುವುದೋ ಅವರ ನುಡಿಯು?!!!

ಪ್ರಾರ್ಥನೆ ಮಾಡುತ್ತಿಲ್ಲವೇನೋ ಅವರು ಎನಿಸಿದರೆ ಒಮ್ಮೆ
ಆಲಿಸುವುದಿಲ್ಲವೇನೋ ನೀನವರ ಎನಿಸುತಿದೆ ಒಮ್ಮೊಮ್ಮೆ…

ಪ್ರಾರ್ಥನೆಯಲಿ ಕಾಮನ ಬಿಲ್ಲಿನಂತೆ ರಂಗುರಂಗಿನ ನುಡಿಗಳು
ಸುರಿವ ಮಳೆ ಹನಿಯಂತೆ ಸಹಸ್ರ ನುಡಿಗಳು
ನಿನಗೆ ಒಂದಾದರೂ ಬಣ್ಣ ಕಾಣದೇ?
ಒಂದೇ ಒಂದು ಪದವೂನಿನ್ನ ತಲುಪದೇ?

ನಿನದೇ ಎಲ್ಲವೂ ನಿನಗೆ, ನಿನಗೆ ರಂಗೇಕೆ?
ತಿಳಿದಿದೆ ಎಲ್ಲವೂ ನಿನಗೆ, ನಿನಗೆ ನೂರು ಪದಗಳೇಕೆ?
ಬಣ್ಣವಿಲ್ಲದ ಇಬ್ಬನಿಯಂತೆ ತೋಯಿಸಬಾರದೆ ಅವರ
ಮುಟ್ಟಬಾರದೆ ಪ್ರೇಮ ಅರಸುವ ಅವರ ಹೃದಯವನ್ನ
ಬದಲಾಯಿಸು ಪ್ರಾರ್ಥಿಸುವ ಭಕ್ತರನ್ನ
ಇಲ್ಲವೇ ಬದಲಾಯಿಸು ಅವರ ಪ್ರಾರ್ಥನೆಯನ್ನ
ಕಲಿಸು ಅರಿಯಲು ನಿನ್ನ ಸತ್ಯವನ್ನ
ಇಲ್ಲವೇ ಬದಲಾಯಿಸು ಅರಿಯುವ ರೀತಿಯನ್ನ
ಇಲ್ಲಾ…
ಒಮ್ಮೆ ಇಳಿದು ಬಾ ನೀಡಲು ಎನ್ನ ಪ್ರಶ್ನೆಗೆ ಉತ್ತರವನ್ನ!
-ಪೆದ್ದರಿಚ್ಚ

ಗಳಿಗೆಯು ಬಂದಿದೆ

ಗಳಿಗೆಯು ಬಂದಿದೆ
ಹಾಡುವ ಹಕ್ಕಿಯನ್ನು ಕೇವಲ ನೋಡುವುದನ್ನು ಬಿಟ್ಟು
ಅದರ ಗಾನವನು ಆನಂದಿಸಲು…

ಗಳಿಗೆಯೊಂದು ಬಂದಿದೆ
ಮಳೆಹನಿಯ ಮಾಲೆಯನು ಕಂಡು ಆನಂದಿಸುವುದನು ಬಿಟ್ಟು
ಮಳೆಹನಿಯಲಿ ಮಿಂದು ಉಲ್ಲಾಸಿಸಲು…

ಗಳಿಗೆಯು ಬಂದಿದೆ
ನಾನೇನು ಮಾಡಬಲ್ಲೆ ಎಂಬುದನ್ನು ಹೇಳುವ ಬದಲು
ನಾನೆನನ್ನು ಮಾಡಿದೆ ಎಂಬುದನ್ನು ಅರಿಯಲು…

ಗಳಿಗೆಯು ಬಂದಿದೆ
ಜನರು ಎನ್ನ ನೋಡಿ ಏನೇನ್ನುವರು ಎಂಬುದನ್ನು ಬಿಟ್ಟು
ದೇವರು ಎನ್ನ ನೋಡಿ ಏನೇನ್ನುವರು ಎಂಬುದನ್ನು ಅರಿಯಲು…

ಗಳಿಗೆಯು ಬಂದಿದೆ
ದೇಹದ ಹಸಿವಿಗೆ ಮಾತ್ರ
ಅಡುಗೆ ಮಾಡುವುದನು ಬಿಟ್ಟು
ಆತ್ಮಕ್ಕೊಂದು ತಿನಿಸು ನೀಡಲು…

ಗಳಿಗೆಯು ಬಂದಿದೆ
ಹೊರಗಿನ ಕಣ್ಣುಗಳಿಂದ ಮಾತ್ರ ನೋಡುವುದನು ಬಿಟ್ಟು
ಅಂತರಂಗದ ಕಣ್ಣುಗಳ ತೆರೆಯಲು…

ಗಳಿಗೆಯು ನಿಲ್ಲದು ಎದ್ದೇಳು
ಅರಿಯುವುದನು ಅರಿತುಬಿಡು
ಆ ದೇವನಲಿ ಬೆರೆತುಬಿಡು…
-ಪೆದ್ದರಿಚ್ಚ

ಕಷ್ಟವೇ ಚೆಂದ

ನನಗಿರುವಷ್ಟು ಕಷ್ಟ ನಿನಗಿಲ್ಲ ಬಿಡು
ಎಂದ ಒಬ್ಬಾತ
ನನ್ನ ಕಷ್ಟಗಳು ಕೆಲವಾದರೂ ಅವು ಬಹು ಭಾರ
ಎಂದ ಇನ್ನೊಬ್ಬ
ನನ್ನ ಕಷ್ಟಗಳು ವಿಚಿತ್ರವಾದವುಗಳು
ಎಂದ ಮತ್ತೊಬ್ಬ
ಹಲವು ವಿಚಿತ್ರ ಭಾರದ
ಕಷ್ಟಗಳಿಂದ
ಜೀವನ ಕಷ್ಟಮಯ
ಎಂದರು ಒಕ್ಕೊರಲಿನಿಂದ

ಕಷ್ಟಗಳಿಲ್ಲದೇ ಬಾಳು ಕಷ್ಟ
ಏನು ಮಾಡಲು ಸಾಧ್ಯ
ಒಬ್ಬಾತ ಎಂದ
ನಮ್ಮ ಕಷ್ಟಗಳ ಅದಲು ಬದಲು ಮಾಡೋಣವೇ?
ನೀರವ ಮೌನ…
ಮೂವರೂ ಯೋಚನೆಯ ಸಾಗರದಲಿ…
ಕೆಲವೊತ್ತಿನ ಬಳಿಕ
ಹಲವು ವಿಚಿತ್ರ ಭಾರದ
ಕಷ್ಟಗಳಿಂದ
ಜೀವನ ಕಷ್ಟಮಯವಾದರೂ
ನಮ್ಮ ಕಷ್ಟವೇ ನಮಗೆ ಚೆಂದ
ಎಂದರು ಒಕ್ಕೊರಲಿನಿಂದ
-ಪೆದ್ದರಿಚ್ಚ

ಒಣಗು

ಒಣಗುವ ಮರ ನಾನು
ಬೆಳಗುವ ಜ್ವಾಲೆ ನೀನು
ನಿನ ಜ್ವಾಲೆಯಲಿ ಎನ್ನನು
ಸುಡಲಾರೆಯ ಏನು?
ಒಣಗಲಾರದೆ ನಾನು
ಸುಡಲಾರೆ ನೀನು
ಗೊಣಗದೆ ಒಣಗಲು
ವರನೀಡಲಾರೆ ಏನು!

ಸ್ವಾರ್ಥದ ಸಾಮಾನು
ಹೊರತಿರುವೆ ನಾನು
ಕರವ ನೀಡಿ ನಿನ್ನ
ಹಗುರವಾಗಿಸಬಾರದೇನು?
ಹಟಮಾರಿ ಆಗಿಹೆ
ಮಾಡಿ ಎನ್ನದೇ ಕಾನೂನು
ನರಳುತಿರುವೆ ನಾನು
ಪಾಪದ ತುಫಾನು

ಹಸಿರು ಮರದಲಿ
ಇರದು ಹೆಚ್ಚು ದಿನ
ಮೆಲ್ಲಗೆ ಒಣಗಲು
ಎಣಿಸಲಾಗದದರ ದಿನ
ಮೇಲೆ ನೋಡುತ ನಿನ್ನ
ಕಲಿಸು ಅರಿಯಲೆನ್ನ
ಹಸಿರ ತೊರೆದು ಎನ್ನ
ಗೊಳಿಸು ನಿನ್ನಲಿ ಲೀನ.
-ಪೆದ್ದರಿಚ್ಚ

ಪ್ರಾರ್ಥಿಸು ನೀ ಮನವೇ

ಪ್ರಾರ್ಥಿಸು ನೀ ಮನವೇ
ಪ್ರಾರ್ಥಿಸು ದೇವನಲಿ
ನಿನ್ನಿನಿಯನು ಮಾಡುವನು
ಅದ್ಭುತವ ಬಾಳಿನಲಿ

ಬರಡಾದ ನಿನ ಬಾಳಿಗೆ
ಬೇಡುತಿರು ಮನವೇ
ನಿನ ರಚಿಸಿದ ದೇವನಿಗೆ
ನೀಡುತಿರು ಒಲವೇ

ಮಳೆ ಬೇಕು ಬೆಳೆಗೆ
ಬೆಲೆ ನೀಡಲು ಇಳೆಗೆ
ಹನಿ ಬೇಕು ಬರಡಿಗೆ
ಮೊಲೆಯುಣಿಸಲು ಧರೆಗೆ
-ಪೆದ್ದರಿಚ್ಚ