ದಾನದ ಮುನ್ನ

ದಾನವ ಮಾಡುವ ಮುನ್ನ
ಅರಿಯೋ ಇಂಗಿತ ನಿನ್ನ
ದೇವನು ಮೆಚ್ಚುವ ಹಾಗೆ ಮಾಡೋ
ಮನುಜ ನಿನ್ನಯ ದಾನ

ಯಾರಿಗೂ ಅರಿಯದೆ ಇರಲಿ
ಮನಸಲೇ ನಿನ್ನ ಉಳಿಯಲಿ
ಎಲ್ಲವ ಅರಿಯೋ ದೇವಗೆ ತಿಳಿವುದು
ಸಂತಸ ಹರಿವುದು ಹೃದಯದಲಿ

ಸೃಷ್ಟಿಯ ನೋಡೋ ಒಮ್ಮೆ
ಧ್ಯಾನಿಸೋ ಅದರ ಹೆಮ್ಮೆ
ನೀಡುತಾ ಮನುಜಗೆ ನಿರುತವು ಹಾಡಿದೆ
ಸೃಷ್ಟಿಯ ಒಡೆಯನ ಹಿರಿಮೆ

-ಪೆದ್ದರಿಚ್ಚ

ಸಾಯೋ ಮೊದಲು

ಉರಿವ ಬೆಂಕಿಯು ಸಿಕ್ಕಿದೆಲ್ಲವ
ಸುಡದೇ ಇರದು ತಿಳಿದಿರು
ನಿಂತ ನೀರಲಿ ಕೊಳಕು ಅಧಿಕವು
ಇಷ್ಟವಾಗದು ಅರಿತಿರು
ಉರಿವ ಬೆಂಕಿಯ ಸರಿಸು ನೀ
ನಿಂತ ನೀರನು ಹರಿಸು ನೀ
ಬಾಳು ನಿನ್ನ ನಂದ ಗೋಕುಲ
ಸಾಯೋ ಮೊದಲು ತಿಳಿಯೋ ನೀ.

ನಾಶ ಮಾಡಲು ಧರೆಗೆ ಇಳಿಯದು
ಮಳೆಯ ಹನಿಗಳು ತಿಳಿದಿರು
ಸೃಷ್ಟಿ ಸುಡಲು ಭುವಿಗೆ ಬಾರದು
ರವಿಯ ಕಿರಣವು ಅರಿತಿರು
ಸ್ವಾರ್ಥ ತೊರೆಯೋ ತಿಳಿವೆ ನೀ
ಮನಸ್ಸ ಬಿಚ್ಚೋ ಅರಿವೆ ನೀ
ನಿನಗೆ ಕಾದಿದೆ ಸೃಷ್ಟಿ ಬೆಂಬಲ
ಸಾಯೋ ಮೊದಲು ಅರಿಯೋ ನೀ
-ಪೆದ್ದರಿಚ್ಚ

ಮರೆತುಬಿಡು

ಇದ್ದಾಗ ಕೊಡು
ಆದಾಗ ಕೊಡು
ಕೊಟ್ಟು ಮೆರೆಯಬೇಡ
ಎಲ್ಲಾ ಮರೆತುಬಿಡು

ಇದ್ದುದನ್ನು ಕೊಡು
ಆದುದನು ಕೊಡು
ಕೊಟ್ಟು ಲೆಕ್ಕ ಹಾಕಬೇಡ
ಎಲ್ಲಾ ಕಳೆದುಬಿಡು

ಇಲ್ಲದವನಿಗೆ ಕೊಡು
ಗೊತ್ತಿಲ್ಲದವನಿಗೆ ಕೊಡು
ಕೊಟ್ಟು ಕೊಚ್ಚಿಕೊಳ್ಳಬೇಡ
ಎಲ್ಲಾ ಮುಚ್ಚಿಬಿಡು

ಕೇಳಿದಾಗ ಕೊಡು
ಬೇಕಾದಾಗ ಕೊಡು
ಕೊಟ್ಟು ಜರಿಯಬೇಡ
ಎಲ್ಲಾ ಹರಿಯಬಿಡು

ಕೊಡುವಾತ ರಾಜನಲ್ಲ
ಪಡೆವಾತ ದಾಸನಲ್ಲ
ಮರಳಿ ಬಯಸಬೇಡ
ಎಲ್ಲಾ ತೊರೆದುಬಿಡು

ದಾನ ನಷ್ಟವಲ್ಲ
ಪ್ರೀತಿ ಕಷ್ಟವಲ್ಲ
ಸ್ವಾರ್ಥ ತೋರಬೇಡ
ಒಮ್ಮೆ ನಕ್ಕಿಬಿಡು
-ಪೆದ್ದರಿಚ್ಚ

ಅಪ್ಪಾ

ನಾನು ಕಣ್ದೆರೆದಾಗ
ಕಂಡಿದ್ದೆ ನನ್ನ
ಅಮ್ಮನ ಮುಖ
ಆ ಮುಖದ ಪ್ರಕಾಶದಲ್ಲಿ
ನಿನ್ನ ಮುಖವ
ಗುರುತಿಸದಾದೆ

ಅಮ್ಮ ನಿನ್ನ
ಬೆರಳೆತ್ತಿ ತೋರಿಸಿದಾಗ
ನಿನ್ನಲಿ ಕ್ಷಣಹೊತ್ತು
ಎನ್ನ ಮರೆತೆ

ತಾಯಿಯ ಅಪ್ಪುಗೆಯಲಿ
ಬೆಳೆದ ಎನ್ನ ಕಂಡು
ಹಿರಿ ಹಿರಿ ಹಿಗ್ಗಿದೆ
ಕ್ಷಣ ಕ್ಷಣದಿ ಬೆಳೆವ
ಎನ್ನ ಜಪಿಸಿ ಕಣ್ತೊಂಬಿದೆ

ಬಲವಾದ ನಿನ್ನ
ತೋಳಲಿ ಕೆಲಕಾಲ ಕಳೆದು
ಅಮ್ಮನ ಮಡಿಲ ಸೇರಿದೆ

ಪ್ರೀತಿಸುವಾಗ ಅಕ್ಕರೆಯಿಂದ
ತನ್ನ ಮಡಿಲಲ್ಲಿ ಆಡಿಸುತ್ತಿದ್ದಳು
ಎನ್ನ ತಾಯಿ
ಕಿರಿಕಿರಿ ಮಾಡಿದಾಗ ಮಾತ್ರ
ನಿನ್ನ ಬಳಿ ಅಟ್ಟುತ್ತಿದ್ದಳು

ಹೀಗೆ
ನಿನ್ನ ತುಟಿಯಲ್ಲಿ ಅರಳಿದ
ನಗುವಿನ ಹೂವಿಗೆ
ಚುಚ್ಚುವ ಸೂಜಿಯಾದೆ

ಒಂಟಿಯಾಗಿದ್ದಾಗ
ನನ್ನೊಡನೆ ನಲಿದಳು
ನನ್ನ ಜನನಿ
ತಪ್ಪೆಸಗಿದಾಗ
ನಿನ್ನಿಂದ ಬೈಯಿಸಿದಳು

ನಿನ್ನ ನಾಲಗೆಯಿಂದ
ಉಲಿದ ನುಡಿಯಿಂದ
ಎನ್ನ ಭಯದ ಭೂತವಾದೆ

ಸಂತಸಪಡಿಸಿದಾಗ
ತನ್ನ ತೋಳಲಿ ಬಂಧಿಸಿದಳು
ನನ್ನಮ್ಮ
ಕೀಟಲೆ ಎಸಗಿದಾಗ
ನಿನ್ನ ತೋರಿಸಿ ಬೆದರಿಸಿದಳು

ಬೆದರಿಸಿದ
ಬೆವರಿಳಿಸಿ ಬಳಲಿದ್ದ ನಿನ್ನ ದೇಹವನ್ನು
ದೂರ ಸರಿಸಿದೆ

ಕರುಣಾಮಯಿ ತಾಯಿಯ
ವಾತ್ಸಲ್ಯದಲಿ ಮಿಂದು
ನಿನ್ನ ಮಮತೆಯ
ಸವಿಯ ಸವಿದು
ನಿನ್ನ ಪ್ರೀತಿಸಲು ಹಿಂಜರಿದೆ

ಶಿಸ್ತಿನ ಸಿಪಾಯಿ ನೀ
ಹೆದರಿಸುವ ಗಟ್ಟಿ ದನಿ
ನಿನ್ನಿಂದ ದೂರದೆ

ಓ ನನ್ನ ಅಪ್ಪಾ!
ನಾ ನಿನ್ನ ಮರೆತರು
ನೀ ನನ್ನ ಮರೆಯದೆ
ನಾ ದೂರ ಸರಿದರೂ
ನೀ ದೂರ ಸರಿಯದೆ
ಹರಿವ ತೊರೆಯಂತೆ
ಸದಾ ನನ್ನ
ಪ್ರೀತಿಸಿದ
ಪೋಷಿಸಿದ
ರಕ್ಷಿಸಿದ
ಗುರಿ ತೋರಿದ
ಸಕಲ ವಲ್ಲಭ ನೀನು
ನಿನ ತ್ಯಾಗಕೆ
ಏನನ್ನು ಆಶಿಸದೆ
ಅವಿರತ ದುಡಿದ
ತ್ಯಾಗಮಯಿ ನೀನು
ನಿಷ್ಕಾಮ ಕರ್ಮಿ ನೀನು!
ಶರಣು ನಿನಗೆ ನಾ ಶರಣು
ಅಪ್ಪಾ ನಿನಗೆ ನಾ ಶರಣು!

-ಪೆದ್ದರಿಚ್ಚ

ಪರಮ ತ್ರಿತ್ವ

ಸುಂದರ ಸೃಷ್ಟಿಗೆ ಒಬ್ಬನೇ ದೇವನು
ಎಲ್ಲವ ಸೃಷ್ಟಿಸಿ ನಲಿಯುವನು
ತನ್ನದೇ ರೂಪದಿ ಮನುಜನ ರೂಪಿಸಿ
ಸೃಷ್ಟಿಯ ಧಾರೆ ಎರೆದಿಹನು

ಸೃಷ್ಟಿಯ ಮನುಜಗೆ ನೀಡುತ ದೇವನು
ಅನುದಿನ ಮನುಜನ ಪೊರೆಯುವನು
ತಪ್ಪನು ಎಸಗುವ ದುರ್ಬಲ ಮನುಜನ
ಅಳುಕದೆ ನಿರುತವು ಕ್ಷಮಿಸುವನು

ದುಡಿಯಲು ನಿರುತವು ಸೃಷ್ಟಿಯ ಮಡಿಲಲಿ
ಪಾವನ ಪ್ರೇರಣೆ ನೀಡುವನು
ತನ್ನದೇ ಉಸಿರಲಿ ಪ್ರಾಣವ ತುಂಬುತಾ
ಜೀವಕೆ ಘನತೆಯ ಹಚ್ಚುವನು
-ಪೆದ್ದರಿಚ್ಚ

ಮಾತಿಗೆ ಅಳತೆ

ತಕ್ಕಡಿ ಇಲ್ಲ ಆದರೂ ಮಾತಿಗೆ
ಅಳತೆಯು ಇದ್ದರೆ ಬಲು ಚೆಂದ
ಇದ್ದರೆ ಮಾತಿಗೆ ಪ್ರೀತಿಯ ಬೆಸುಗೆ
ಬಾಳುವ ದಿನಗಳು ಬಲು ಅಂದ.

ಸುಳ್ಳಿನ ಲೇಪನ ಇದ್ದರೆ ಮಾತಿಗೆ
ಜೀವನ ಸವಿಯದು ಶ್ರೀಗಂಧ
ಸತ್ಯದ ರಂಗು ಲಭಿಸಲು ಮಾತಿಗೆ
ಎಲ್ಲರೂ ಸವಿವರು ಮಕರಂದ

ಮಾತಿನ ಕಲೆಯ ಕಲಿತಿಹ ಮನುಜಗೆ
ಬಾಳಿನ ಪ್ರತಿಕ್ಷಣ ಆನಂದ
ಎಲ್ಲರ ಒಳಿತನು ಮಾತಲಿ ಬಯಸಿರೆ
ಗಳಿಸುವೆ ಸಿಹಿ ಪರಮಾನಂದ
-ಪೆದ್ದರಿಚ್ಚ

ಮಣ್ಣಿನ ಮಡಕೆ

ಏನಿದ್ದರೇನು
ಮಣ್ಣಿನ ಮಡಕೆ ಬಾಳು
ಎಷ್ಟಿದ್ದರೇನು
ಒಮ್ಮೆ ಬಿದ್ದರೆ ಹಾಳು

ಚಿನ್ನವಿದ್ದರೇನು
ಮಡಕೆಗೆ ಬೇಕು ಮಣ್ಣು
ಎಲ್ಲಿದ್ದರೇನು
ಸೆಳೆಯದು ಯಾರ ಕಣ್ಣು

ಗಟ್ಟಿಯಿದ್ದರೇನು
ಬಿದ್ದರೆ ಕೆಲವ್ಹಿಡಿ ಮಣ್ಣು
ಕೆಂಪಿದ್ದರೇನು
ತಿನ್ನಲಾಗದು ತಿಂದಂತೆ ಹಣ್ಣು

ಗುಂಡಗಿದ್ದರೇನು
ಕಿರೀಟವಾಗದು ಮಣ್ಣು
ದಪ್ಪಗಿದ್ದರೇನು
ಅದು ನೆಕ್ಕಲಾಗದ ಹಣ್ಣು

ಏನಾದರೇನು
ಮಣ್ಣ ಮಡಕೆಯು ನೀನು
ಬೆಲೆಯು ಬೇಕೇನು
ದೇವನ ತುಂಬಿಕೊಳ್ಳೋ ನೀನು.
-ಪೆದ್ದರಿಚ್ಚ

ಪವಾಡ

ದುರದೃಷ್ಟವಂತ ನಾನು
ಪವಾಡಗಳಿಗಾಗಿ ಹಾತೊರೆಯುತಿಹೆನು
ಪವಾಡವೊಂದನು ಮರುದಿನವಾದರೂ
ಕಾಣುವ ಹಂಬಲದಲಿ
ತಲೆದಿಂಬಿಗೆ ಭಾರವಾಗಿಹೆನು.

ಏಳೆಂಟು ತಾಸುಗಳು ಹಾಸಿಗೆಯ ಅರಮನೆಯಲ್ಲಿ
ರಾಜನಂತೆ ಸುಖಿಸುವಾಗ
ಬೆಳಕಿನ ಕಿರಣಗಳು ಎಂದಿನಂತೆ
ಕ್ರೂರವಾಗಿ ಕತ್ತಲೆಯನು ಆಚೆಗೆ ಅಟ್ಟುತ್ತಿವೆ
ನೆರೆಮನೆಯವರ ಕಿರಿಕಿರಿಯಂತೆ
ತಣ್ಣನೆಯ ಗಾಳಿ ಮೈ ಸೋಕುತಿದೆ
ಇನ್ನೊಂದು ಕಡೆ
ನೂರಾರು ಹಕ್ಕಿಗಳ ಒಕ್ಕೋರಲಿನ ಆಕ್ರಂದನ
ರಜೆಗೆ ತೆರಳಿದ್ದ ಕಿವಿಗಳ ಮೇಲೆ ಆಕ್ರಮಣ
ಇವೆಲ್ಲಾ ಸಾಕೆನದಂತೆ
ಕಾರ್ಖಾನೆಯ ಸದ್ದಿನಂತೆ ಹೆತ್ತವರಿಬ್ಬರ
‘ಎದ್ದೇಳೋ’ ಎಂಬ ಸುಪ್ರಭಾತ
ಬಹಿರಂಗ ಶುದ್ದಿ ಮುಗಿದ ನಂತರ
ಹೊಟ್ಟಿಯಲಿ ಪಾಲು ಕೇಳುವ ಉಪಹಾರ

ನಂತರ ಬಹಳ ಆಸೆಪಟ್ಟು ಕೊಂಡ
ಪುಷ್ಪಕ ವಿಮಾನದಲ್ಲಿ
ಕುರುಕ್ಷೇತ್ರಕ್ಕೆನು ಕಮ್ಮಿ ಇಲ್ಲದಂತಹ
ಕೆಲಸದ ಭೂಮಿಗೆ ಪಯಣ
ಅಲ್ಲಿ ಯುದ್ದವೇ ಆದರೂ ನಾನೇ ರಾಜ
ನನ್ನದೇ ಅಪ್ಪಣೆ…
ಬೊಕ್ಕಸ ಹರಿವಷ್ಟು
ಮಾಸಿಕ ಕಪ್ಪಕಾಣಿಕೆಯ ಬಹುಮಾನ
ತೆರಿಗೆಯ ಒಂದು ಭಾಗವೆಂಬಂತೆ
ಕಡಲಿನ ಭಯಂಕರ ಸದ್ದಿನೊಂದಿಗೆ
ಸ್ನೇಹಿತರೊಂದಿಗೆ ಸಮಯವ್ಯಯ
ನಂತರ ಟಾಲ್ ಗೇಟಿನಲ್ಲಿ ಕಾಯುವವರಂತೆ
ಮನೆಯ ಬಾಗಿಲಲಿ
ಉತ್ತಾರಾಧಿಕಾರಿಗಳೊಂದಿಗೆ
ಅರ್ಧಾಂಗಿಣಿಯ ದರ್ಶನ

ಹಚ್ಚ ಹಸಿರಿನ ಕಾಡಿನಲಿ
ಉಸಿರಾಡಲು ಹೆಣಗುವ ಮನುಜನಂತೆ
ಒಂದೇ ಒಂದು ಪವಾಡದ
ಭರವಸೆಯಲ್ಲಿ ಮತ್ತೇ
ನನ್ನ ಕಣ್ಣೊಳಗೇ ಮಾಯವಾದೆ.
-ಪೆದ್ದರಿಚ್ಚ.

ನಿಯಮ

ನಿಯಮ ಆಭರಣ
ಸೇದು ಕುಣಿಕೆಯಲ್ಲ
ಅರಿತಾಗ ಗೂಡಾರ್ಥ
ಬಾಳಿಗೆ ಎಣಿಕೆಯಿಲ್ಲ

ನಿಯಮ ಆಯಾಮ
ನೋವಿನ ಸುಳಿವಿಲ್ಲ
ತಪ್ಪಿದಾಗ ಸಂಯಮ
ಸಾವಿಗೆ ತಡವಿಲ್ಲ

ನಿಯಮ ರಕ್ಷಾಗೋಡೆ
ಬಾಳನ್ನು ತಡೆಯಲ್ಲ
ನಿಯಮವ ತಡೆಯಲು
ಬಾಳೆಂದೂ ನಡೆಯಲ್ಲ
-ಪೆದ್ದರಿಚ್ಚ

ಕೊನೆಗೆ

ಭಕ್ತನ ಹೃದಯವು ಅರಳದೆ ಹೋದರೆ
ಬಾಳಿಗೆ ಬೇಗನೆ ಕಾದಿದೆ ತೊಂದರೆ
ಹೃದಯದಿ ದೇವನು ಬಾಳದೆ ಹೋದರೆ
ಕತ್ತಲೇ ನಿನಗೆ ದೊರೆಯುವ ಉಡುಗೊರೆ

ಏನೂ ಅರಿಯದ ಮುಗ್ದರ ಎದುರು
ಸುಳ್ಳಿನ ಅರಮನೆ ಕಟ್ಟುವೆ ಏಕೆ?
ಮೂರೇ ದಿನವು ನಿನ್ನಯ ಬಾಳು
ಒಳಿತನು ಮಾಡಲು ಮರೆಯುವೆ ಏಕೆ?

ಸ್ವಾರ್ಥದ ಅಮಲಲಿ ದ್ವೇಷವ ಬಿತ್ತಲು
ಬಾಳಿನ ಕೊನೆಯಲಿ ನೋವನು ಕೊಯ್ಯುವೆ
ಮುಗ್ದತೆ ಜನರ ಮೋಸದಿ ಬಳಸಲು
ನರಕದ ಕದಡೆದೆ ನಿನ್ನನೇ ಒಯ್ಯುವೆ

-ಪೆದ್ದರಿಚ್ಚ