ಮೂಗರು

ಮೂಗರು ನಾವು
ಮಾತನಾಡಲಾಗದ
ಭಯದ ಮೂರ್ತಿಗಳು
ಸತ್ಯಕೆ ನೆರವು ನೀಡಲಾಗದ
ಮುಗ್ದ ಕೋತಿಗಳು

ಮೂಗರು ನಾವು
ಒಳಿತ ಆಲಿಸಲಾಗದ
ಅಂಜಿಕೆಯ ಕಿವುಡರು
ಸತ್ಯವನು ಅರಿಯಲಾಗದ
ದೈತ್ಯ ಮೂಡರು

ಮೂಗರು ನಾವು
ಕಣ್ಣರಳಿಸಿ ನೋಡುವ
ಅಸಹಾಯಕ ಮರಿಗಳು
ಸುಳ್ಳನ್ನು ಹೆಗಲೇರಿಸಿ
ಸಾಗುವ ಕುರಿಗಳು
-ಪೆದ್ದರಿಚ್ಚ

ಒಮ್ಮೆ

ಜೇನಿಗಿಂತ ಸಿಹಿಯು
ಆ ದೇವನ ಸನಿಹವು
ಒಮ್ಮೆ ನಂಬಿ ನೋಡು
ಆಗುವೆ ಜೇನ ಗೂಡು

ಹೂವಿಗಿಂತ ಅಂದವು
ಆ ದೇವನ ಪ್ರೇಮವು
ಒಮ್ಮೆ ಅರಿತು ನೋಡು
ಆಗುವೆ ದೇವನ ಬೀಡು

ಸ್ನೇಹಕ್ಕಿಂತ ಚೆಂದವು
ಆ ದೇವನ ನಿಲುವು
ಮೌನದಿ ಕುಳಿತು ನೋಡು
ಮರೆವೆ ಎಲ್ಲಾ ಸೇಡು

ಮಾತಿಗಿಂತ ಶೇಷ್ಠವು
ಆ ದೇವನ ಮೌನವು
ಒಮ್ಮೆ ಸವಿದು ನೋಡು
ಆಗುವೆ ಹಸಿರು ಕಾಡು
-ಪೆದ್ದರಿಚ್ಚ

ನಂಬಿದ

ಮೇಲಿನಿಂದ ದೇವನು
ಕರವ ಎತ್ತಿ ಹರಸುವನು
ನಂಬಿ ನಡೆವ ಮನುಜಗೆ
ಮುಕ್ತಿ ಪಥವ ತೋರ್ವನು

ಹಿಂದೆ ಎಂದೂ ನೋಡದೆ
ಮುಂದೆ ಸಾಗು ಮನುಜನೆ
ನಿನ್ನ ಕಾಯ್ವ ದೇವನು
ನಿನ್ನ ನೋಡಿ ನಲಿವನು

ನಿನ್ನ ಪೊರೆವ ದೇವನು
ನಿನ್ನ ಜೊತೆಗೆ ಇರುವನು
ಅವನ ನಂಬಿ ಸಾಗಲು
ಇಹದಿ ನೀನು ಧನ್ಯನು
-ಪೆದ್ದರಿಚ್ಚ

ಉಪವಾಸ

ಹೇಳಬೇಕಾಗಿದ್ದನ್ನೆಲ್ಲಾ ಹೇಳಬೇಕೇನು
ಒಂದು ಕ್ಷಣ ಸುಮ್ಮನಿದ್ದು ನೋಡು
ನೋಡಬೇಕಾಗಿದ್ದನ್ನೆಲ್ಲಾ ನೋಡಬೇಕೇನು
ಒಂದು ಕ್ಷಣ ಕಣ್ಣು ಮುಚ್ಚಿ ನೋಡು
ಕೇಳಿದ್ದನ್ನೆಲ್ಲಾ ಹೇಳಬೇಕೇನು
ನಿನ್ನಲ್ಲೇ ಒಮ್ಮೆ ಬಚ್ಚಿಟ್ಟು ನೋಡು
ಇಂತಹ ಉಪವಾಸ ದೇವರಿಗೆ ಇಷ್ಟವಾದುದು
ಒಮ್ಮೆ ಮಾಡಿನೋಡು ಪೆದ್ದರಿಚ್ಚ!

ಬಯಸಿದ್ದನ್ನೆಲ್ಲಾ ಪಡೆಯಬೇಕೇನು
ಒಮ್ಮೆ ಸುಮ್ಮನ್ನಿದ್ದು ನೋಡು
ಗಳಿಸಿದ್ದನ್ನೆಲ್ಲಾ ವ್ಯಯಿಸಬೇಕೇನು
ಒಮ್ಮೆ ಕಿಂಚಿತ್ತನ್ನು ಹಂಚಿನೋಡು
ತಿಳಿದಿದ್ದನ್ನೇಲ್ಲಾ ಒದರಬೇಕೇನು
ಒಂದು ಕ್ಷಣ ಮೌನವಾಗಿದ್ದು ನೋಡು
ಇಂತಹ ಉಪವಾಸ ದೇವರಿಗೆ ಪ್ರಿಯವಾದುದು
ಒಮ್ಮೆ ಮಾಡಿನೋಡು ಪೆದ್ದರಿಚ್ಚ!

ಒಳಗಿನ ನುಡಿ

ಚಿಗುರುವುದು ಮರವೊಂದು
ಕೇಳಿ ದೇವನ ನುಡಿಯನ್ನು ತನ್ನೊಳಗೆ
ಹೂವು ನಗುತಾ ಅರಳುವುದು
ಕೇಳಿ ದೇವನ ನುಡಿಯನ್ನು ತನ್ನೊಳಗೆ
ನದಿಯು ಹರಿವುದು ಸಾಗರದೆಡೆಗೆ
ಕೇಳಿ ದೇವನ ನುಡಿಯನ್ನು ತನ್ನೊಳಗೆ
ನಿನ್ನೊಳಗಿರುವ ಆ ನುಡಿಯನ್ನೊಮ್ಮೆ ಕೇಳು ಪೆದ್ದರಿಚ್ಚ
ಚಿಗುರಿ, ಅರಳಿ, ಹರಿಯುವೆ ಸ್ವರ್ಗಸುಖದೆಡೆಗೆ…

ಹೆಗಲು

ಚಟ್ಟ ಹೊರಲು ಹೆಗಲ ನೀಡುವರು
ಅವಕಾಶ ಕೊಡದೇ ಹೋದರೆ
ಸಿಟ್ಟಾಗುವರು
ಪ್ರೀತಿ ವ್ಯಕ್ತಪಡಿಸಲಾಗಲಿಲ್ಲವಲ್ಲ
ಎಂದು ಮರುಗುವರು
ಈಗೀಗ ಹೆಣಕ್ಕೆ ಹೆಗಲೂ ಬೇಡ
ಹಣ ಕರೆವುದೊಂದು ವಾಹನವ ಬೇಗ…
ಕುಳಿತು ಯೋಚಿಸು…
ಪ್ರೀತಿ ತೋರಲು ಒಬ್ಬ ಸಾಯಲೇಬೇಕೆ?

ಸತ್ತ ಜೀವಕೆ ತಿಳಿವುದೇ ಪ್ರೀತಿಯ ಸಿಂಚನ
ನೋವಿನ ಮಡುವಲ್ಲಿರುವವರು
ನೋಡರು ನಿನ್ನ ಹೆಗಲ ದರ್ಶನ
ಬಿದ್ದಮೇಲೆ ಊರುಗೋಲಿಗೇನು ಕೆಲಸ
ಬೀಳುವ ಮೊದಲು ನೆರವಾದರೆ ಚೆನ್ನ
ಎತ್ತಬಲ್ಲೆ ನೀನು ಬಿದ್ದವನನು
ಬೀಳದಂತೆ ನೋಡಿಕೊಂಡರೆ ಬುದ್ದಿವಂತ ನೀನು
ಒಮ್ಮೆ ಯೋಚಿಸು…
ಪ್ರೀತಿ ತೋರಲು ಒಬ್ಬ ಬೀಳಲೇಬೇಕೆ?
-ಪೆದ್ದರಿಚ್ಚ

ಕಾಣದು

ನೋಡುವ ಕಣ್ಣಿಗೆ ಸುಲಭದಿ ಕಾಣದು
ದೇವರ ಸೃಷ್ಟಿಯ ಹಿರಿಮೆ
ಮುಚ್ಚಿದ ಮನಸ್ಸಿಗೆ ಸುಲಭದಿ ತಿಳಿಯದು
ದೇವರ ಸುಂದರ ಒಲುಮೆ

ತೆರೆದರೂ ಕಣ್ಣನು ನೋಡಲು ಆಗದು
ಹಾಲಲಿ ಅಡಗಿದ ಮಜ್ಜಿಗೆಯ
ಮುಟ್ಟಿಯೂ ಬೀಜವ ತಿಳಿಯಲು ಆಗದು
ಅದರಲಿ ಅವಿತಿಹ ಹೆಮ್ಮರವ

ಪಂಚ ಅಂಗಗಳ್ ತಕ್ಕಡಿಯಲ್ಲಿ
ಅಳೆಯುವೆ ಏಕೆ ದೇವನನು
ಪ್ರೀತಿಯ ಕಣ್ಣನು ತೆರೆದರೆ ಮನದಲಿ
ಗಳಿಸುವೆ ದೈವ ಜ್ಞಾನವನು
-ಪೆದ್ದರಿಚ್ಚ

ಭಯಬಿಡು

ಒಮ್ಮೆಯಾದರೂ ಭಯಬಿಡು
ಮನಸ್ಸುಮಾಡು
ಗುಣವಾಗದ ರೋಗವಾಗಬಲ್ಲದು
ನರಳುವೆ ಏಕೆ ಬಾಳಲಿ
ನೆಮ್ಮದಿ ಮುಂದಿದೆ ಒಮ್ಮೆ ಭಯಬಿಡು

ಉಸಿರಿರುವವರೆಗೆ ನೀ ಸಾಯಲಾರೆ
ಉಸಿರ ನೀಡಿದ ದೇವ ಹಿಂಪಡೆವ ತನಕ
ನೀ ಸಾಯಲಾರೆ
ಜೀವಿಸುತ್ತಿರುವೆ ನೀನು
ಒಮ್ಮೆ ಭಯಬಿಡು

ನಿನ್ನ ರಚಿಸಿದ ದೇವನು ಸರ್ವಶಕ್ತನು
ಅವನೆಂದಿಗೂ ಕೈಬಿಡನು
ಜೊತೆಗಿದ್ದು ಕೈಹಿಡಿದಾತನಿರುವಾಗ
ಒಮ್ಮೆ ಭಯಬಿಡು

ಮದ್ದಿಲ್ಲ ಎಂದವರಾರು ಈ ರೋಗಕೆ
ಮದ್ದಿದೆ ನೋಡು ನಿನ್ನೊಳಗೆ
ಆ ಸಿಹಿ ಮದ್ದನ್ನೊಮ್ಮೆ ಕುಡಿದುಬಿಡು
ಒಮ್ಮೆ ಭಯಬಿಡು
-ಪೆದ್ದರಿಚ್ಚ

ಮೊದಲು

ಏನಾದರೂ ಆಗು
ಮೊದಲು ಮಾನವನಾಗು
ಮಾನವನಾಗಲು
ಎಲ್ಲೆಲ್ಲೂ ದೇವನ
ಕಾಣುವವನಾಗು

ಅಂತರಂಗದಲಿ ಉಲಿಯುತಿದೆ
ಹರಿವ ನೀರಿನ ದನಿಯಂತೆ
ಆತನ ದನಿಯು
ತೀರದಿ ಕುಳಿತು ಕೇಳಲು
ಸ್ವರ್ಗದ ಅನುಭವವು

ಪರರ ಮೊಗದಲಿ ಮಿನುಗುತಿದೆ
ಅರಳುವ ಹೂವಂತೆ
ಆತನ ನಗುವು
ಕಣ್ತೆರೆದು ಮೊಗವ ನೋಡಲು
ನಮ್ಮೆದುರೇ ದೇವನು
-ಪೆದ್ದರಿಚ್ಚ

ಕರೆ

ಅಗೋ ಅಲ್ಲೊಂದು ದಾರಿ
ತಿಳಿದಿಲ್ಲ ಸಾಗುವುದದು ಎಲ್ಲಿಗೆ
ಆ ಶಿಖರದ ತುದಿಗಿರಬೇಕು…
ಸವೆದಿಲ್ಲ ಹೆಚ್ಚು
ಅದ ನೋಡಿದರೆ ಕೈ ಬೀಸಿ
ಯಾರೋ ಕರೆವರೆನ್ನನು ಎನಿಸುತ್ತದೆ…
ಅದರ ಮೇಲೆ ಬೆಳೆದ ಹುಲ್ಲು
ನಿನಗಾಗದು ಬಿಡು ಎಂದು ಅಣಕಿಸಿದಂತಾಗುತ್ತದೆ
ಸುತ್ತಾ ಮುತ್ತಾ ಇರುವ ಕಲ್ಲು
ಅದರ ನೆರಳು ದಾರಿಯಲಿ ಕತ್ತಲಾಗಿಸಿದೆ
ಭಯವ ಬಿತ್ತಿದಂತಾಗುತ್ತಿದೆ

ಆ ನೆರಳ ಇರುಳ ಮೌನದಲೂ
ಯಾರೋ ಕರೆದಂತಾಗುತ್ತದೆ…
ಕಣ್ಣೆತ್ತಿ ಶಿಖರದ ತುದಿಯ ನಾ ನೋಡಲು…
ಅಗೋ ಏರಿ ಹೋಗಿಹನು ಆತನು
ಅವನೇ ಇರಬೇಕು ಕರೆದಾತನು…
ಆತನ ನೋಟವೋ
‘ದಾರಿ ಕಿರಿದಾದರೇನು ಮೇಲೇರಬಲ್ಲೆ ನೀನು’ ಎಂದತ್ತಿದೆ
ಮನದಲೇ ಆ ನೋಟವನು ಕೇಳಲು
ನಾನೇಗೆ ಏರಬಲ್ಲೆ ಹೇಳು…
ಎದೆಯ ತಟ್ಟಿ ನನ್ನೊಳಗೆ ನುಡಿದಂತಾಯಿತು
ಮೊದಲು ಗುರಿಯ ನೋಡು
ನಂತರ ನಿಂತಲ್ಲೇ ನಿಲ್ಲಬೇಡ ಮೊದಲ ಹೆಜ್ಜೆಯನಿಡು
ಎಂದೆಂದೂ ಹಿಂದೆ ನೋಡಬೇಡ ಮುಂದೆ ಸಾಗುತಿರು
-ಪೆದ್ದರಿಚ್ಚ