
ಸಿಹಿಯಾದ ಹಣ್ಣಂತೆ
ದೂರದ ಕಾಡಿನಲಿ ಅದರ ಸೂರಂತೆ
ಪುಸ್ತಕಗಳ ಅರೆದು ಕುಡಿದ ಮೇಧಾವಿ
ಹಿರಿಯರ ಆಲಿಸಿ ಬೆಳೆದ ಜ್ಞಾನಿ
ಸಿರಿತನದ ಪಾಯಸ ಕುಡಿದ ಸಿರಿವಂತ
ಆ ಸಿಹಿ ಹಣ್ಣನ್ನು ಅರಸಿ ಹೊರಟ
ದೂರದ ಕಾಡಲ್ಲವೇ
ಕಾರಲ್ಲಿ ಪಯಣಿಸಿದ
ಜ್ಞಾನದ ದಿಕ್ಕೆಲ್ಲವನು ಅಳೆದು
ಕಾಡಿನ ದ್ವಾರ ತಲುಪಿದ
ಹೆದ್ದಾರಿಗಳಲಿ ನುಗ್ಗಿ
ಮರದ ದರ್ಶನ ಪಡೆದ
ಹಣ್ಣನು ನೋಡಿದ
ಪುಸ್ತಕದಲಿ ಕಂಡ
ಅದೇ ಕಣ್ಣುಕುಕ್ಕುವ ಬಣ್ಣ
ನಕ್ಷತ್ರಗಳ ಸಾಲಿನಂತೆ
ಲೆಕ್ಕಹಾಕಲಾಗದಷ್ಟು ಹಣ್ಣುಗಳು
ರುಚಿಯನ್ನು ಮನದಲ್ಲೇ ಲೆಕ್ಕಹಾಕಿ ಚಪ್ಪರಿಸಿದ
ಕಾರಿಂದ ಇಳಿಯಲು ಕಾಡುವ ಭಯ
ಕಾಲು ಮಣ್ಣಾಗದಿರಲು
ತೊಟ್ಟ ಬೂಟಿಗೆ ಮಣ್ಣಾಗಬಾರದೆಂಬ ಮೊಂಡುತನ
ಮರ ಹತ್ತಲಾಗದ ಅಜ್ಞಾನ
ಕಣ್ಣ ಮುಂದಿದ್ದರೂ
ಹಣ್ಣು ತಿನ್ನಲಾಗದ ದುರ್ಭಾಗ್ಯ
ಈ ಆಂತರಿಕ ಯುದ್ಧವಾಗುತ್ತಿದ್ದಾಗಲೇ
ಪುಸ್ತಕದ ಗಂಧಗಾಳಿ ಅರಿಯದ
ಸಿರಿತನದ ಸವಿಯನು ಕೇಳರಿಯದ
ಹರುಕಲು ಬಟ್ಟೆಯ
ಪುಟ್ಟ ಬಾಲಕನೊಬ್ಬ
ಮರಹತ್ತಿ ಹಣ್ಣುಗಳನು
ತಿಂದು ತೇಗುತ್ತಿದ್ದ
-ಪೆದ್ದರಿಚ್ಚ