
ತಿನ್ನುವ ಅನ್ನದಿ
ಕಲ್ಲನು ಕಂಡರೆ
ಎಕ್ಕಿ ಹಣಿಯದೆ
ಉಣ್ಣುವರೇ?
ಉಡುವ ವಸ್ತ್ರದಿ
ಕಲೆಯ ಕಂಡರೆ
ಉಜ್ಜಿ ತೊಳೆಯದೆ
ಧರಿಸುವರೆ?
ಧೂಳಿನ ಕಣವು
ದೇಹವ ಮುಟ್ಟಲು
ಮಜ್ಜನ ಮಾಡದೇ
ಹೊರಡುವರೆ?
ತೊಡುವ ಬೂಟಲೂ
ಕೊಳೆಯ ಕಂಡರೆ
ಉಜ್ಜದೆ ಕಾಲಿಗೆ
ತೊಡಿಸುವರೇ?
ಬೀಸುವ ಗಾಳಿಲಿ
ಹೊಗೆಯು ತುಂಬಿರೆ
ನೆಮ್ಮದಿ ಉಸಿರನು
ತೆಗೆಯುವರೆ?
ಬೊಗಸೆ ನೀರಲಿ
ಕಲ್ಮಶ ತುಂಬಿರೆ
ಚಿಂತೆಯ ಮಾಡದೆ
ಕುಡಿಯುವರೆ?
ಒಳಿತನೆ ಅರಸುವ
ಬುದ್ಧಿಯ ಮನುಜನೆ
ಮೌಲ್ಯವ ಏಕೆ
ಮರೆತಿರುವೆ?
ಬೆಳೆಯನು ಬೆಳೆಯುವ
ಆತ್ಮದ ಹೊಲದಲಿ
ಕೇಡನೆ ಏಕೆ
ಬೆಳೆದಿರುವೆ?
-ಪೆದ್ದರಿಚ್ಚ








