ಮೊಗ ನೋಡಿ

Images (47)
ಮೋಡವ ನೋಡಿ ಮಳೆಯ ಅರಿಯುವ ನೀನು
ದೇವನ ಮೊಗ ನೋಡಿ ದಯೆಯ ಅರಿಯೆಯಾ?
ಭುವಿಯ ಸ್ಪರ್ಶವ ಮಾಡಿ ತೇವ ಅರಿವ ನೀನು
ದೇವನ ಸ್ಪರ್ಶ ಸವಿದು ಪ್ರೀತಿಯ ತಿಳಿಯೆಯಾ?

ಕರುಣಾ ಮೂರ್ತಿ ದೇವನು
ನಿನ್ನನ್ನೆಂದು ಮರೆಯನು
ಮರೆವಲಿ ನೀ ತೊರೆದರೂ
ತೊರೆಯದೆ ನಿನ್ನಲಿ ಬೆರೆವನು
ಅಪ್ಪಿಕೋ ಒಮ್ಮೆ ಬಿಡದೆ
ನಿನ್ನನಿಂದಾತ ಕರೆವನು

ಹಾಲಲೂ ನೀರನು ಪತ್ತೆ ಹಚ್ಚುವ ನೀನು
ಬತ್ತದ ದೈವ ಸೊಭಗನು ಅರಿಯೆಯಾ?
ಭುವಿಯನೇ ಉತ್ತು ಪಳಗಿಸುವ ನೀನು
ಆತ್ಮದ ಫಲವನು ಬೆಳೆಯಲು ಮರೆವೆಯಾ?
-ಪೆದ್ದರಿಚ್ಚ

ತಪ್ಪಾಯಿತು

Images (49)ತಪ್ಪಿನಲೊಂದು ತಪ್ಪಾಯಿತು
ನನ್ನ ತಪ್ಪಿನ ಕಥೆಯಿದು
ಸಾವಾಯಿತು ಎಂದುಕೊಂಡೆ
ವಿರಾಮ ಕಾಣದ ವ್ಯಥೆಯಿದು
ಗೋರಿ ಕಟ್ಟಿ ಪೂಜಿಸುತಿಹೆ
ಹೇಳಲಾಗದ ಅವಸ್ಥೆಯಿದು

ತಪ್ಪಿನಲೊಂದು ತಪ್ಪಾದರೆ
ಅದ ಮರೆಯದ ತಪ್ಪೇಕೆ?
ತಪ್ಪು ಮಾಡಿದ ಮನಸ್ಸಿಗೆ
ಚುಚ್ಚು ಮಾತಿನ ಉಪ್ಪೇಕೆ?
ಗೋರಿ ಕಟ್ಟಿದ್ದು ಸಾಕು
ಪಾಪ ಪ್ರಜ್ಞೆಯ ಚಿಪ್ಪೇಕೆ?
-ಪೆದ್ದರಿಚ್ಚ

ಬಣ್ಣದ ಚಡ್ಡಿ

ಸುಳ್ಳಿಗೆ ಬಣ್ಣದ ಚಡ್ಡಿಯ ತೊಡಿಸಿ
ಕಂಬದ ಮೇಲೆ ಇರಿಸಿದರು
ಸತ್ಯದ ಕರಗಳ ಹಗ್ಗದಿ ಕಟ್ಟಿ
ಇರುಳಿಗೆ ತರಿಸಿದರು
ಸತ್ಯದ ಬರುವನು ಕಾಯುವ ಜನರಿಗೆ
ಕಂಬದ ಮೇಲಿನ ಸುಳ್ಳನು ತೋರಿಸಿ
ಸುಳ್ಳಿನ ಅರಮನೆ ಕಟ್ಟಿದರು

ಸತ್ಯದ ಬೆಳಕು ಇರುಳನ್ನು
ಖಂಡಿತವಾಗಿಯೂ ಜಯಿಸುವುದು
ಕಂಬದ ಮೇಲಿನ ಸುಳ್ಳಿನ ಚಡ್ಡಿಯೂ
ಖಂಡಿತವಾಗಿಯೂ ಬೀಳುವುದು
ಸತ್ಯದ ಬರುವನು ಕಾಯುವ ಜನರಿಗೆ
ಕಂಬದ ಮೇಲಿನ ಸುಳ್ಳನು ನೋಡಲು
ಸುಳ್ಳಿನ ಬೆತ್ತಲು ಕಾಣುವುದು
-ಪೆದ್ದರಿಚ್ಚ

ಹೊಲದಲಿ

ಬಾಳಿನ ಹೊಲದಲಿ
ಬೆಳೆಯನು ಬೆಳೆವುದು
ಸುಲಭದ ಮಾತಲ್ಲ
ಉಲುಮೆಯ ಮಾಡಲು
ಹೋದರೆ ಮನದಲಿ
ಸಂಕಟ ತಪ್ಪಲ್ಲ
ಹೆದರುತ ಕುಳಿತರೆ
ಉಳುಮೆಯ ಮಾಡದೆ
ಬಾಳಿದು ಸಾಗಲ್ಲ
ದೈರ್ಯದಿ ಮೆಲ್ಲನೆ
ಕೆಲಸವ ಮಾಡಲು
ಆಯಾಸ ಕಾಣಲ್ಲ

ಮನದಲಿ ಇರಲಿ
ಆಸೆಯು ಒಂದು
ದಾರಿಯು ಒಂದಲ್ಲ
ಕಳೆಗಳ ಒಮ್ಮೆ
ಸವರದೆ ಕುಳಿತರೆ
ಭೂಮಿಯು ಬಗ್ಗಲ್ಲ
ದುಡಿಯದೆ ತಿಂದರೆ
ತಿಳಿದುಕೋ ಮಗನೇ
ಅನ್ನವು ಒಗ್ಗಲ್ಲ
ಉಳುಮೆಯ ಮಾಡಲು
ನೂರ್ಮಡಿ ಫಲವು
ಸಂತಸ ತಗ್ಗಲ್ಲ

ಉಳುಮೆಯ ಮಾಡು
ಬಾಳಲಿ ಒಮ್ಮೆ
ಎಲ್ಲವೂ ಇದೆಯಲ್ಲ
ಬಿತ್ತನೆ ಮಾಡು
ಆದುದ ಕರದಲಿ
ಹಸಿರಿಗೆ ಬರವಿಲ್ಲ
ಸಸಿಗಳ ಬೆಳೆಯಲು
ಗೊಬ್ಬರ ಹಾಕು
ಕಳೆಗಳು ಬೆಳೆಯಲ್ಲ
ಸಸಿಗಳ ತುದಿಯಲಿ
ತೆನೆಗಳ ಕಾಣು
ಸಂತಸ ಇಳಿಯಲ್ಲ
-ಪೆದ್ದರಿಚ್ಚ

ಕತ್ತಲಾಗಿದೆ

ಬೆಳಕಿನ ಆಸೆಯಲಿ
ಕಿರಣವ ದಿಟ್ಟಿಸಿ ನೋಡಿ
ಎಲ್ಲಾ ಕತ್ತಲಾಗಿದೆ
ದಿಟ್ಟಿಸಿ ನೋಡಬಾರದಿತ್ತು ಎಂದು
ತಿಳಿಯುವಲ್ಲಿ ಮತ್ತೇ ಕತ್ತಲಾಗಿದೆ!

ಮುಂಜಾನೆಯ ಆಸೆಯಲಿ
ರವಿಯ ಎದುರು ನೋಡಿ
ಇರುಳು ಕಳೆದುಹೋಗಿದೆ
ಜಾಗರಣೆ ಮಾಡಬಾರದಿತ್ತು
ತಿಳಿಯುವಷ್ಟರಲ್ಲಿ ಮತ್ತೆ ಕತ್ತಲಾಗಿದೆ!

ಉಜ್ವಲ ಬಾಳಿನ ಆಸೆಯಲಿ
ಮೂರ್ಖತನಕೆ ಮಾರು ಹೋಗಿ
ಬರೀ ಕತ್ತಲಾಗಿದೆ
ಆಸೆಪಡಬಾರದಿತ್ತು
ತಿಳಿಯುವಷ್ಟರಲ್ಲಿ ಮರುಗಿ ಬಾಳೆ ಕತ್ತಲಾಗಿದೆ

ಕಾಣುತ್ತಿಲ್ಲ

Images (54)
ಕುರುಡನಾಗಿಹೆ ನಾನು
ಕಾಣುತ್ತಿಲ್ಲ ಕಣ್ಗಳಿಗೆ
ದೇವರ ವರದಾನಗಳು
ಮರುಗತಲಿಹೆ ಅನುದಿನ
ಆತ್ಮ ಶಾಂತಿಗಾಗಿ
ಅರ್ಪಿಸುತಿರುವೆ ಬಲಿದಾನಗಳು

ಕುರುಡನಾಗಿಹೆ ನಾನು
ನೋಡಲಾಗುತ್ತಿಲ್ಲ ಎನಗೆ
ಸೃಷ್ಟಿಯ ಸಿರಿತನವನು
ಮೂರ್ಖತನದಿ ಅನುದಿನ
ಸ್ವಾರ್ಥ ಸಾಧನೆಗಾಗಿ
ಕಟ್ಟುತಲಿಹೆನು ಮನೆತನವನು

ಕುರುಡನಾಗಿಹೆ ನಾನು
ಕಾಣುತ್ತಿಲ್ಲ ಮನಸ್ಸಿಗೆ
ಅಂತರಂಗದ ತುಡಿತಗಳು
ಆಸೆಯ ಕುದುರೆಯೇರಿ ಅನುದಿನ
ಸಾಗುತಲಿಹೆನು ವೇಗವಾಗಿ
ಅರಿಯದೆ ಪರರ ಮಿಡಿತಗಳು

ಕುರುಡನಾಗಿಹೆ ನಾನು
ನೋಡಲಾಗುತ್ತಿಲ್ಲ ಎನಗೆ
ಬಗ್ಗಿ ನಡೆಯುತ್ತಿರುವೆನು
ಅಂಗೈಯನ್ನೇ ನೋಡುತಾ ಅನುದಿನ
ಪ್ರೀತಿಯ ಸುರಿಮಳೆಯನು
ತಿಳಿಯದೆ ತಡೆಯುತ್ತಿರುವೆನು
-ಪೆದ್ದರಿಚ್ಚ

ಮೊದಲ ಗುರು

Images (55)

ತಾಯಿ
ಮೊದಲ ಗುರು ನೀನು
ಗುರು ಸುಮ್ಮನಾಗಬಾರದು
ಗುಮ್ಮನಾಗಿರುವೇ ಏಕೆ!
ಒಮ್ಮೆ ಬಾರಿಸಿಬಿಡು
ಬದಲಾಗಬೇಕು ನಾನು!

ತಾಯಿ,
ಎಲ್ಲಾ ತಿಳಿದವಳು ನೀನು
ತಿಳಿದೂ ಸುಮ್ಮನಿರಬಾರದು
ತಟಸ್ಥಳಾದೆ ಏಕೆ!
ಒಮ್ಮೆ ಗುದ್ದಿಬಿಡು
ಎದ್ದುಬಿಡುವೆ ನಾನು!

ವಾತ್ಸಲ್ಯ ಮಾತೆ
ಯಾರದೋ ದೊಣ್ಣೆ ಏಟಿಗಿಂತ
ನಿನ್ನ ಬೆಣ್ಣೆ ಏಟೇ ಮೇಲು!
ಯಾರದೋ ಸಿಟ್ಟಿನ ಗೂಸಕ್ಕಿಂತ
ನಿನ್ನ ಪೀತಿಯ ಹಾಸೇ ಮೇಲು!
ಸುಮ್ಮನಿರಬೇಡ ತಾಯಿ
ಸುಮ್ಮನಿರಬೇಡ
ಒಮ್ಮೆ ತಟ್ಟಿಬಿಡು
ಕಣ್ಣ ತೆರೆದು ಬಿಡುವೆನು ನಾನು!
-ಪೆದ್ದರಿಚ್ಚ

ಬೇಡುತಿರುವೆ ದೇವನ

Images (56)

ಕೋಗಿಲೆ ಹಾಡುತ್ತಿತ್ತು
ಕೇಳಿದೆ ಏಕೆ ಹಾಡುತ್ತಿರುವೆ
ಉತ್ತರ – ಇಲ್ಲ! ನಾನು
ಬೇಡುತಿರುವೆ ದೇವನ
ಆತ ಕೊಡುವನೇ ನಾ ಕೇಳಲು
ಕೇಳಿ ಪಡೆದುದಕ್ಕಾಗಿಯೆ
ನನ್ನ ಕೇಳುವಿಕೆ ಹಾಡಾಗಿದೆ.

ನವಿಲು ನಲಿದಾಡುತಿತ್ತು
ಕೇಳಿದೆ ಏಕೆ ನಲಿಯುತ್ತಿರುವೆ
ಉತ್ತರ – ಇಲ್ಲ ನಾನು
ಬೇಡುತಿರುವೆ ದೇವನ
ಆತ ನೀಡುವನೇ ನಾ ಕೇಳಲು
ನೀಡಿದನೆಂಬ ಸಂತಸದಿಂದಲೇ
ನನ್ನ ಹೆಜ್ಜೆಗಳು ಕುಣಿತವಾಗಿದೆ.

ಹೂವು ಅರಳುತಿತ್ತು
ನಾ ಕೇಳಿದೆ ಏಕೆ ಅರಳುತಿರುವೆ
ಉತ್ತರ – ಇಲ್ಲ ನಾನು
ಬೇಡುತಿರುವೆ ದೇವನ
ಕೊಡುವನೇ ನಾ ಕೇಳಲು
ಕೇಳಿದ್ದನ್ನು ಪಡೆದ ಸಂತಸವೇ
ನನ್ನನ್ನು ಅರಳಿಸುತ್ತಿದೆ!

-ಪೆದ್ದರಿಚ್ಚ

ಬಡಿತ

Images (58)
ಹೃದಯದ ಬಡಿತ
ಒಂದೇ ಕಡೆ ಆಗುತ್ತಿದ್ದರೂ
ಅದರ ಮಿಡಿತ ನಾಡಿನಾಡಿಗಳಲಿ
ಪ್ರೀತಿಯ ಉಗಮ
ಮನಸ್ಸಿನಲ್ಲೇ ಆದರೂ
ಅದರ ಜಿಗಿತ ನಾಡುನಾಡಿನಲಿ

ಅಣೆಕಟನ್ನೇಕೆ ಕಟ್ಟುವೆ
ಪ್ರೀತಿಯ ನದಿಗೆ
ಉಕ್ಕಿ ಹರಿಯಲಿ ಬಿಡು
ಸಾಗರ ಸೇರೋವರೆಗೆ

ಬಚ್ಚಿಡುವೆ ಏಕೆ
ಪ್ರೀತಿಯ ದೀಪವನು
ಬೆಳಗುತಿರಲಿ ಬಿಡು
ಕತ್ತಲ ಸರಿಯೋವರೆಗೆ
-ಪೆದ್ದರಿಚ್ಚ

ನಿಲುಕದ ರಾಜ್ಯದಲಿ

Images (57)ನಮ್ಮ ಊಹೆಗೆ ನಿಲುಕದ ರಾಜ್ಯದಲಿ
ನೆಲೆಸುವ ದೇವನು ತಂದೆಯಂತೆ
ನಮ್ಮ ಹೊಡೆದರೂ ಪ್ರೀತಿಸುವಾತ
ಅತ್ತಾಗ ಅಪ್ಪಿ ಮುದ್ದಿಸುವಾತ
ತನ್ನ ಇಚ್ಚೆಯನು
ನಮ್ಮಲಿ ಬಯಸುವಾತ
ಭೂಲೋಕ ಪರಲೋಕಕೆ
ಯುಗಯುಗಕೂ ಒಡೆಯನಾತ
ಅನುದಿನದ ಆಹಾರವನು
ಮನಸ್ಸಿಗೂ ದೇಹಕೂಕೊಡುವನಾತ
ಮಾಡುವ ತಪ್ಪೆಲ್ಲವನು ಕ್ಷಮಿಸುವಾತ
ಪರರನು ಕ್ಷಮಿಸಲು ಕರೆಯುವಾತ
ಬಾಳಿನ ಶೋಧನೆಗಳಿಂದೆಲ್ಲಾ
ನಮ್ಮನ್ನು ರಕ್ಷಿಸುವಾತ
-ಪೆದ್ದರಿಚ್ಚ